ಬೆಂಗಳೂರು: ಸಮಾನತೆ, ಸಾಮಾಜಿಕ ನ್ಯಾಯವನ್ನು ಎಲ್ಲಾ ವರ್ಗದ ಜನರಿಗೂ ನೀಡುವ ಉದ್ದೇಶದಿಂದ 2015 ರಲ್ಲಿ ರಾಜ್ಯದಲ್ಲಿ ಕೈಗೊಳ್ಳಲಾದ ಜಾತಿ ಸಮೀಕ್ಷೆ ವರದಿಯು ಸಮಸಮಾಜದ ಪರಿಕಲ್ಪನೆಯನ್ನು ಎತ್ತಿಹಿಡಿಯುವಂತಾಗಲಿ ಎಂದು ಸರ್ಕಾರದ ಗ್ಯಾರೆಂಟಿ ಯೋಜನೆಯ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣ ತಿಳಿಸಿದರು.
ಖಾಸಗಿ ಹೋಟೆಲ್ನಲ್ಲಿ ಈ ಕುರಿತು ಹಮ್ಮಿಕೊಳ್ಳಲಾದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮೀಕ್ಷೆಯು ಸಾಮಾಜಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕ ಸಮೀಕ್ಷೆಯೂ ಹೌದು. ನಮ್ಮ ರಾಜ್ಯದಲ್ಲಿ ಶಾಶ್ವತವಾದ ಹಿಂದುಳಿದ ವರ್ಗಗಳ ಆಯೋಗ ಅಸ್ವಿತ್ವದಲ್ಲಿದೆ. ಈ ಸಮೀಕ್ಷೆಯಿಂದ ಮೀಸಲಾತಿಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಅವೈಜ್ಞಾನಿಕವಾದ ಸಂಗತಿಗಳನ್ನು ಸರಿಪಡಿಸುವ ಇದರ ಉದ್ದೇಶ ಸಫಲವಾಗಲೆಂದು ಆಶಿಸುತ್ತೇನೆ. ಇದರಿಂದ ರಾಜ್ಯದಲ್ಲಿ ಒಟ್ಟು ಮೀಸಲಾತಿಯನ್ನು ಶೇಕಡ 75 ರಷ್ಟು ಹೆಚ್ಚಿಸಿದಂತಾಗುತ್ತದೆ ಎಂದು ತಿಳಿಸಿದರು.
ವಿಧಾನಪರಿಷತ್ ಮಾಜಿ ಸಭಾಪತಿಗಳಾದ ವಿ.ಆರ್.ಸುದರ್ಶನ್ ಮಾತನಾಡಿ, 1931 ರಿಂದಲೂ ಯಾವುದೇ ರೀತಿಯ ಜಾತಿಗಣತಿ ನಡೆದಿರುವುದಿಲ್ಲ. ಮಂಡಲ್ ತೀರ್ಪಿನ ನಂತರ ಸರ್ವೋಚ್ಚ ನ್ಯಾಯಾಲಯ ಅಂದಿನವರೆಗಿನ ಹಿಂದುಳಿದ ವರ್ಗಗಳ ಸ್ಥಿತಿಗತಿಯನ್ನು ಅರಿತು, ಇವುಗಳಿಗೆ ಸಾಮಾಜಿಕ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವನ್ನು ರಚನೆ ಮಾಡಿ ತೀರ್ಪು ನೀಡಿತು. ಅದರಂತೆ ಹಿಂದುಳಿದ ವರ್ಗಗಳ ಆಯೋಗ ಕೆಲಸ ನಿರ್ವಹಿಸುತ್ತಿದೆ. 2015 ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ ಅವರಿಗೆ ಈ ಜಾತಿ ಸಮೀಕ್ಷೆ ನಡೆಸುವ ಜವಾಬ್ದಾರಿ ನೀಡಿದ್ದರು. ಇದಕ್ಕಾಗಿ ರೂ. 162 ಕೋಟಿ ರೂಗಳ ಖರ್ಚನ್ನು ಸಹ ಸರ್ಕಾರ ಭರಿಸಿತ್ತು. ಒಟ್ಟು 55 ಪ್ರಶ್ನಾವಳಿ ಆಧರಿಸಿ ಕಾಂತರಾಜ ಆಯೋಗ ಸಮೀಕ್ಷೆ ಮಾಡಿ ತಯಾರು ಮಾಡಿದ ವರದಿಯನ್ನು ತದನಂತರ ಬಂದ ಜಯಪ್ರಕಾಶ್ ಹೆಗ್ಡೆ ಆಯೋಗ ಸರ್ಕಾರಕ್ಕೆ ಒಪ್ಪಿಸಿದೆ. ಇದರ ಜೊತೆಗೆ ಜಯಪ್ರಕಾಶ್ ಹೆಗಡೆ ಆಯೋಗ ತಯಾರಿಸಿದ ನೂತನ ಮೀಸಲಾತಿ ಪಟ್ಟಿಯನ್ನು ಸಹ ಸರ್ಕಾರಕ್ಕೆ ಸಲ್ಲಿಸಿದೆ. ಮಾಧ್ಯಮಗಳ ಮಾಹಿತಿ ಪ್ರಕಾರ 1 ಕೋಟಿ 35 ಲಕ್ಷ ಕುಟುಂಬಗಳ ಸಮೀಕ್ಷೆ ನಡೆದಿದ್ದು, 5,98,14,942 ದತ್ತಾಂಶ (ಸಮೀಕ್ಷೆ)ಕ್ಕೆ ಒಳಗಾಗಿರುತ್ತಾರೆ. ಈ ಸಮೀಕ್ಷೆಯಲ್ಲಿ 1,66,000 ಸರ್ಕಾರಿ ನೌಕರರು ತಮ್ಮನ್ನು ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಈ ವರದಿ ಇನ್ನೆರಡು ದಿನಗಳಲ್ಲಿ ಹೊರಬೀಳಲಿದ್ದು, ಸಚಿವ ಸಂಪುಟದಲ್ಲಿಯೂ ಸಹ ಚರ್ಚೆಯಾಗುತ್ತದೆ. ಒಟ್ಟಿನಲ್ಲಿ ಈ ಗಣತಿ ಅಸಮಾನತೆಯ ತಾರತಮ್ಯವನ್ನು ತೊಡೆದುಹಾಕುವುದರಲ್ಲಿ ಸಂಶಯವಿಲ್ಲ ಎಂದರು.
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವರು ಹಾಗೂ ವಿಧಾನಪರಿಷತ್ ಸದಸ್ಯರಾದ ಶ್ರೀಮತಿ ಉಮಾಶ್ರೀ, ವಿಧಾನಪರಿಷತ್ ಸದಸ್ಯರಾದ ಎಂ.ನಾಗರಾಜ ಯಾದವ್, ಎಂ.ಆರ್.ಸೀತಾರಾಂ, ವಿಧಾನಪರಿಷತ್ ಮಾಜಿ ಸದಸ್ಯರಾದ ಪಿ.ಆರ್.ರಮೇಶ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.