ಬೆಂಗಳೂರು: ಬೆಂಗಳೂರಿನಲ್ಲಿರುವ ಯಕ್ಷಗಾನ ಅಕಾಡೆಮಿಯನ್ನು ಬೇರೆ ಜಿಲ್ಲೆಗೆ ಸ್ಥಳಾಂತರ ಮಾಡುವುದಿಲ್ಲ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದರು.
ಕನ್ನಡ ಭವನದ ಅಂತರಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯು 1978ರಲ್ಲಿ ಪ್ರಾರಂಭವಾಗಿದ್ದು, ಅಂದಿನಿಂದ ಬೆಂಗಳೂರಿನಲ್ಲಿಯೇ ಕಾರ್ಯನಿರ್ವಹಿಸುತ್ತಿದೆ. ಜಾನಪದ ಅಕಾಡೆಮಿ ಪ್ರತ್ಯೇಕವಾಗಿ ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ 2007ರಲ್ಲಿ ಪ್ರಾರಂಭವಾಗಿದ್ದು, ಬಯಲಾಟ ಅಕಾಡೆಮಿಯು 2017 ರಿಂದ ಪ್ರತ್ಯೇಕವಾಗಿ ಬಾಗಲಕೋಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ, ಕರ್ನಾಟಕ ಯಕ್ಷಗಾನ ಅಕಾಡೆಮಿಯು ಬೆಂಗಳೂರಿನಲ್ಲಿಯೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ವ್ಯಾಪ್ತಿಗೆ ತೆಂಕುತಿಟ್ಟು ಯಕ್ಷಗಾನ, ಬಡಗುತಿಟ್ಟು ಯಕ್ಷಗಾನ, ಬಡಾಬಡಗುತಿಟ್ಟು ಯಕ್ಷಗಾನ, ತಾಳಮದ್ದಲೆ, ಮೂಡಲಪಾಯ ಯಕ್ಷಗಾನ, ಕೇಳಿಕೆ, ಘಟ್ಟದಕೋರೆ, ಯಕ್ಷಗಾನೀಯ ಗೊಂಬೆಯಾಟ, ಮುಖವೀಣೆ ಮತ್ತು ಮೂಡಲಪಾಯ ಗೊಂಬೆಯಾಟ ಎಂಬ ಹತ್ತು ಕಲಾಪ್ರಕಾರಗಳಿವೆ ಎಂದರು.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಮಂಡ್ಯ, ಚಾಮರಾಜನಗರ, ಮೈಸೂರಿನಲ್ಲಿ ಮೂಡಲಪಾಯ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕೇಳಿಕೆ ಮತ್ತು ಮೂಡಲಪಾಯ ಕಲಾವಿದರು ಹಾಗೂ ಪಡುವಲ ಮತ್ತು ಮೂಡಲಪಾಯ ಯಕ್ಷಗಾನ ಕಲಾವಿದರು ಕರಾವಳಿ ಭಾಗದಲ್ಲಿ ಮತ್ತು ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು, ಮೈಸೂರು ಜಿಲ್ಲೆಗಳಲ್ಲಿ ಇದ್ದು, ಇನ್ನೂ ಮುಂತಾದ ಜಿಲ್ಲೆಗಳಲ್ಲಿ ಕರಾವಳಿ ಯಕ್ಷಗಾನವಿದೆ ಎಂದರು.
ರಾಜ್ಯದಲ್ಲಿ ಮತ್ತು ರಾಷ್ಟ್ರಮಟ್ಟದಲ್ಲಿ ಯಕ್ಷಗಾನ ಕಲೆ ಬೆಳೆದಿದ್ದು, ಅಕಾಡೆಮಿಯು ರಾಜ್ಯದಲ್ಲಿಯೆ ಇರಬೇಕು. ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಿದ್ದಲ್ಲಿ ಘಟ್ಟದಕೋರೆ, ಮೂಡಲಪಾಯ, ಪಡುವಲಪಾಯ, ಕೇಳಿಕೆ, ಮುಖವೀಣೆ ಕಲಾವಿದರುಗಳಿಗೆ ಅನಾನುಕೂಲವಾಗುತ್ತದೆ. ಬಹು ಜನ ವಿದ್ವಾಂಸರು ಯಕ್ಷಗಾನ ಅಕಾಡೆಮಿಯು ಬೆಂಗಳೂರಿನಲ್ಲಿಯೆ ಇರಬೇಕು ಎಂದು ಅಭಿಪ್ರಾಯಪಟ್ಟಿರುವುದರಿಂದ ಯಾವುದೇ ಕಾರಣಕ್ಕೂ ಯಕ್ಷಗಾನ ಅಕಾಡೆಮಿಯನ್ನು ಬೆಂಗಳೂರಿನಿಂದ ಸ್ಥಳಾಂತರ ಮಾಡುವುದಿಲ್ಲ ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರುಗಳು ಉಪಸ್ಥಿತರಿದ್ದರು.