ಬೆಂಗಳೂರು: ಅಚ್ಛೇ ದಿನ್ ತರುತ್ತೇವೆಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಕೇಂದ್ರದ ಬಿಜೆಪಿ ಸರಕಾರವು ಕಳೆದ ಹತ್ತು ವರ್ಷಗಳಲ್ಲಿ ದೇಶದ ಜನರಿಗೆ ಬೆಲೆ ಏರಿಕೆಯ ಬರೆ ಎಳೆದಿರುವುದೇ ಸಾಧನೆಯಾಗಿದೆ. ಇದರಿಂದಾಗಿ ಜನಸಾಮಾನ್ಯರ ಬದುಕು ದುಸ್ತರವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಟೀಕಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನೇತೃತ್ವದಲ್ಲಿ ಗುರುವಾರ ಇಲ್ಲಿನ ಫ್ರೀಡಂ ಪಾರ್ಕಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಹತ್ತು ವರ್ಷಗಳ ಹಿಂದೆ ಪೆಟ್ರೋಲ್ ಬೆಲೆ 65 ರೂ. ಇತ್ತು. ಈಗ ಅದು 100 ರೂಪಾಯಿ ದಾಟಿದೆ. ಆಗ 55 ರೂ. ಇದ್ದ ಡೀಸೆಲ್ ಈಗ 95 ರೂ. ಆಗಿದೆ. 450 ರೂ. ಇದ್ದ ಎಲ್.ಪಿ.ಜಿ ಸಿಲಿಂಡರ್ ಬೆಲೆ ಈಗ 1,100 ರೂ. ಆಗಿದೆ. ಇವೇ ಮೋದಿ ಸರ್ಕಾರದ ಕೊಡುಗೆಗಳು ಎಂದು ಅವರು ಅಣಕವಾಡಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ ದೇಶದ ರೈತರ 78 ಸಾವಿರ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಲಾಗಿತ್ತು. ಆದರೆ, ಮೋದಿ ಸರ್ಕಾರ ಜನರನ್ನು ಬೆಲೆ ಏರಿಕೆಯ ಚಕ್ರವ್ಯೂಹಕ್ಕೆ ತಳ್ಳಿದೆ ಎಂದು ಅವರು ದೂರಿದ್ದಾರೆ.
ಮೋದಿ ಸರಕಾರಕ್ಕೆ ಜನರ ಬಗ್ಗೆ ಯಾವ ಕಾಳಜಿಯೂ ಇಲ್ಲ. ಅವರ ಸರಕಾರ ಬಂದಮೇಲೆ ಖಾದ್ಯತೈಲ, ಬೇಳೆಕಾಳು, ದಿನಸಿ ಪದಾರ್ಥ, ಔಷಧಗಳು, ಸಿಮೆಂಟ್, ಉಕ್ಕು, ಸಕ್ಕರೆ ಹೀಗೆ ಪ್ರತಿಯೊಂದರ ಬೆಲೆಯೂ ಎರಡು ಪಟ್ಟು ಜಾಸ್ತಿಯಾಗಿದೆ. ಇದರ ಬಗ್ಗೆ ಮಾತನಾಡದ ರಾಜ್ಯ ಬಿಜೆಪಿ ನಾಯಕರು, ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ನಡೆಸುವ ಡಾಂಭಿಕತೆ ಪ್ರದರ್ಶಿಸುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಚಿವರಾದ ಕೃಷ್ಣ ಭೈರೇಗೌಡ, ಕೆ ಜೆ ಜಾರ್ಜ್, ಎಚ್ ಸಿ ಮಹದೇವಪ್ಪ, ಚೆಲುವರಾಯಸ್ವಾಮಿ, ರಾಮಲಿಂಗ ರೆಡ್ಡಿ, ಎಂ ಸಿ ಸುಧಾಕರ್, ಕೆ ಎಚ್ ಮುನಿಯಪ್ಪ, ಬೈರತಿ ಸುರೇಶ್, ಶಾಸಕ ರಿಜ್ವಾನ್ ಅಹಮದ್ ಮುಂತಾದವರು ಪಾಲ್ಗೊಂಡಿದ್ದರು.