ಬೆಂಗಳೂರು, : ‘ಅನುಭವ ಮಂಟಪ- ಬಸವಾದಿ ಶರಣರ ವೈಭವ’ ರಥಯಾತ್ರೆಯು ಇಡೀ ರಾಜ್ಯದಲ್ಲಿ ಪ್ರಯಾಣ ಮಾಡಲಿದೆ. ಇದರಿಂದ ವಚನ ಸಾಹಿತ್ಯದ ಪರಿಚಯ, ಬಸವಣ್ಣನವರ ವಿಚಾರಗಳು ಪ್ರಚಾರವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ ‘ಅನುಭವ ಮಂಟಪ- ಬಸವಾದಿ ಶರಣರ ವೈಭವ’ ಕಾರ್ಯಕ್ರಮದ ಲಾಂಛನ ಬಿಡುಗಡೆ ಮತ್ತು ರಥಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬಸವಣ್ಣನವರು ಸಮಾಜಕ್ಕಾಗಿ ಬದುಕಿದವರು. ಸಮಾಜದ ಬದಲಾವಣೆಗಾಗಿ ಬದುಕಿರುವವರೆಗೂ ಪ್ರಯತ್ನಿಸಿದರು. ಬಸವಣ್ಣನವರ ಅನುಭವ ಮಂಟಪ ಪರಿಕಲ್ಪನೆಯ ಮೂಲಕ 12 ನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವದ ಸ್ಥಾಪನೆಯಾಗಿತು. ಇಲ್ಲಿ ಚರ್ಚೆ ಮತ್ತು ಅದಕ್ಕೆ ಪರಿಹಾರವನ್ನು ಕಂಡುಹಿಡಿದು ಅದನ್ನು ಜಾರಿ ಮಾಡುತ್ತಿದ್ದರು. ಜಗತ್ತಿನ ಮೊದಲನೇ ಸಂಸತ್ತು ಇದಾಗಿತ್ತು. ಎಲ್ಲಾ ಧರ್ಮ, ಜಾತಿಯವರಿಗೆ ಭಾಗವಹಿಸಲು ಅವಕಾಶವನ್ನು ಕಲ್ಪಿಸಲಾಗಿತ್ತಲ್ಲದೇ ಅವರ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸಬಹುದಾಗಿತ್ತು ಎಂದರು.
ಬಸವಣ್ಣನವರ ವಚನ ಸಾಹಿತ್ಯ,ವಿಚಾರ ನಾಡಿನಾದ್ಯಂತ ಪರಿಚಯಿಸಲು ರಥಯಾತ್ರೆ
ಬಸವಣ್ಣನವರ ವಚನ ಸಾಹಿತ್ಯವನ್ನು, ಅವರ ವಿಚಾರವನ್ನು ನಾಡಿನಾದ್ಯಂತ ಪರಿಚಯಿಸಲು ರಥವು 15 ಜಿಲ್ಲೆಗಳಲ್ಲಿ ಸಂಚರಿಸಿ, ಬಾಗಲಕೋಟೆಯ 9 ತಾಲ್ಲೂಕುಗಳಲ್ಲಿ ಸಂಚರಿಸಿ, ಏಪ್ರಿಲ್ 29 ರಂದು ಕೂಡಲಸಂಗಮಕ್ಕೆ ತಲುಪಲಿದೆ. ಏಪ್ರಿಲ್ 29 ಮತ್ತು 30 ರಂದು ಬಸವ ಜಯಂತಿಯ ಅಂಗವಾಗಿ “ಅನುಭವ ಮಂಟಪ-ಬಸವಾದಿ ಶರಣರ ವೈಭವ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಲಿದ್ದೇನೆ ಎಂದು ತಿಳಿಸಿದರು.
ಕಳೆದ ಬಾರಿ ನಮ್ಮ ಸರ್ಕಾರದ ಅವಧಿಯಲ್ಲಿ ಬಸವ ಕಲ್ಯಾಣದ ಪುನರುತ್ಥಾನ ಮಾಡಲು ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಪುನರುತ್ಥಾನದ ಕೆಲಸವನ್ನು ಈ ಬಾರಿ ಪೂರೈಸಲಾಗುವುದು ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಭರವಸೆ ನೀಡಿದರು.
*ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಒಪ್ಪಿಕೊಂಡು ಘೋಷಣೆ ಮಾಡಿದೆ*
ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ನಮ್ಮ ಸರ್ಕಾರ ಘೋಷಣೆಯನ್ನು ಮಾಡಿದೆ. ಕೇವಲ ಘೋಷಣೆ ಮಾಡಿಲ್ಲ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಒಪ್ಪಿಕೊಂಡು ಜಾರಿ ಮಾಡಿದೆ. ಬಸವಣ್ಣ ಸಾಮಾಜಿಕ ಕ್ರಾಂತಿ ಮಾಡಿದವರು. ಸಮಾಜದಲ್ಲಿನ ಸಾಮಾಜಿಕ ರೋಗಗಳಿಗೆ ಪರಿಹಾರವನ್ನು ಸೂಚಿಸಿದ್ದು ಮಾತ್ರವಲ್ಲದೇ ನುಡಿದಂತೆ ನಡೆಯುವ ಹಾಗೂ ನಡೆದಂತೆ ನುಡಿಯುವ ಪ್ರಯತ್ನವನ್ನು ಮಾಡಿದರು ಎಂದರು.
ಈ ಸಂದರ್ಭದಲ್ಲಿ ಬೈಲಹೊಂಗಲದ ನಿಜಗುಣನಂದ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕøತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ಇಂಧನ ಸಚಿವ ಕೆ.ಜೆ.ಜಾರ್ಜ್, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ಸಾಹಿತಿ ಹಂಪ ನಾಗರಾಜಯ್ಯ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.