ಬೆಂಗಳೂರು: ಪ್ರತಿವರ್ಷದಂತೆ ಈ ವರ್ಷವೂ ಇಸ್ಕಾನ್ ಬೆಂಗಳೂರು ದೇವಾಲಯದಲ್ಲಿ ಶ್ರದ್ಧೆ ಹಾಗೂ ಭಕ್ತಿಯಿಂದ ಬ್ರಹ್ಮತ್ಸವವು ಏಪ್ರಿಲ್ 21ರಂದು ಹರೇ ಕೃಷ್ಣ ಗುರಿಯಲ್ಲಿ ಅದ್ದೂರಿಯಾಗಿ ನಡೆಯಿತು. ಸಂಜೆ 6ಗಂಟೆಗೆ ನಡೆದ ಬ್ರಹ್ಮ ರಥೋತ್ಸವ ಕಾರ್ಯಕ್ರಮವು, ದೇವತೆಗಳ ದಿವ್ಯ ಮೆರವಣಿಗೆಯ ಮೂಲಕ ಸಾವಿರಾರು ಭಕ್ತರಿಗೆ ಆಧ್ಯಾತ್ಮಿಕ ಅನುಭವವನ್ನು ನೀಡಿತು. ಬಹೋತ್ಸವದ ಮುಖ್ಯ ಅಂಗವಾದ ಈ ರಥೋತ್ಸವದಂದು ಶ್ರೀ ರಾಧಾ ಕೃಷ್ಣಚಂದ್ರ, ಶ್ರೀ ಕೃಷ್ಣ ಬಲರಾಮ ಹಾಗೂ ಶ್ರೀ ನಿತ್ಯ ಗೌರಂಗ ದೇವರುಗಳು ವಿಶಿಷ್ಟ ಮರದಿಂದ ತಯಾರಿಸಲಾದ ‘ಬ್ರಹ್ಮ ರಥ’ದ ಮೇಲೆ ಮೆರವಣಿಗೆ ಮೂಲಕ ದೇವಾಲಯದ ಸುತ್ತಲೂ ಕರೆದೊಯ್ಯಲಾಯಿತು.
ಇದು ಕೇವಲ ಧಾರ್ಮಿಕ ಆಚರಣೆಯಲ್ಲ, ಇಸ್ಕಾನ್ ಬೆಂಗಳೂರಿನ ಪ್ರತಿ ವರ್ಷದ ಮಹತ್ವಪೂರ್ಣ ಉತ್ಸವವಾಗಿದ್ದು, ದೇವತೆಗಳ ಸ್ಥಾಪನೆಯು 1997ರಲ್ಲಿ ಚೈತ್ರ ಮಾಸದ ಪೂರ್ವಾಷಾಢ ನಕ್ಷತ್ರದಂದು ನಡೆದ ಸ್ಮರಣೀಯ ಘಟನೆಯಾಗಿರುವುದರಿಂದ ಈ ಹಬ್ಬವು ವಿಶೇಷ ಮಹತ್ವ ಪಡೆದಿದೆ. ಈ ದಿವ್ಯ ದಿನದಂದು ದೇವತೆಗಳನ್ನು ಶ್ರೇಷ್ಠವಾದ ಅಲಂಕಾರದಲ್ಲಿ ಅಲಂಕರಿಸಲಾಗಿದ್ದು, ಭಕ್ತಿಯ ಸಂಕೇತವಾದ 108 ವೈವಿಧ್ಯಮಯ ಆಹಾರಗಳೊಂದಿಗೆ ನೈವೇದ್ಯ ಅರ್ಪಿಸಲಾಯಿತು.
ಆಧ್ಯಾತ್ಮಿಕ ದಿಗ್ಗಜರ ಸಾನ್ನಿಧ್ಯ:
ಈ ಕಾರ್ಯಕ್ರಮದಲ್ಲಿ ದೇಶದಾದ್ಯಂತದ ಹೆಸರಾಂತ ಆಧ್ಯಾತ್ಮಿಕ ನಾಯಕರು ಮತ್ತು ಸಂಸ್ಕೃತಿಪರ ವ್ಯಕ್ತಿಗಳು ಭಾಗವಹಿಸಿದ್ದು, ಉತ್ಸವದ ಘನತೆಗೆ ಮತ್ತಷ್ಟು ಶೋಭೆ ಸೇರಿಸಿದರು. ಉಡುಪಿಯ ಶ್ರೀ ಶೀರೂರು ಮಠದ ಪರಮಪೂಜ್ಯ ವೇದವರ್ಧನ ತೀರ್ಥ ಸ್ವಾಮೀಜಿ, ಕೂಡ್ಲಿ ಆರ್ಯ ಅಕ್ರೋಭ್ಯ ತೀರ್ಥಮಠದ ಶ್ರೀ ರಘುವಿಜಯ ತೀರ್ಥ ಸ್ವಾಮೀಜಿ, ವೇದತಜ್ಞರು ಹಾಗೂ ಲೇಖಕರಾದ ಶ್ರೀ ದುಷ್ಯಂತ ಶ್ರೀಧರ್, ಡಾ. ನಾಗಸಂಪಿಗೆ ಆಚಾರ್ ಮತ್ತು ವಿದ್ಯಾನ್ ಸತ್ಯಧ್ಯಾನಾಚಾರ್ಯ ಕತ್ತಿ ಮೊದಲಾದವರು ಉಪಸ್ಥಿತರಿದ್ದು, ತಮ್ಮ ಆಧ್ಯಾತ್ಮಿಕ ಪ್ರವಚನಗಳ ಮೂಲಕ ಭಕ್ತರಿಗೆ ಮಾರ್ಗದರ್ಶನ ನೀಡಿದರು.
ಹಬ್ಬದ 13 ದಿನಗಳ ಸಂಭ್ರಮ:
ಬ್ರಹೋತ್ಸವ ಆಚರಣೆಗಳು ಈ ಬಾರಿ ಏಪ್ರಿಲ್ 12ರಂದು ಧ್ವಜಾರೋಹಣದೊಂದಿಗೆ ಪ್ರಾರಂಭವಾಗಿ, ಪ್ರತಿದಿನವೂ ವಿವಿಧ ರೀತಿಯ ವೈಭವಮಯ ಮೆರವಣಿಗೆಗಳು ನಡೆಯುತ್ತಿವೆ. ಹನುಮದ್ ವಾಹನ, ಗರುಡ ವಾಹನ, ಅನಂತ ಶೇಷ ವಾಹನ ಮತ್ತು ಕಲ್ಪವೃಕ್ಷ ವಾಹನಗಳಂತೆ ಪ್ರತಿ ದಿನದ ಮೆರವಣಿಗೆ ವಿಭಿನ್ನವಾಗಿದ್ದು, ದೇವತೆಗಳನ್ನು ವಿಭಿನ್ನ ಆಲಂಕಾರಿಕ ತೂರಣಗಳೊಂದಿಗೆ ಸಾಗಿಸಲಾಯಿತು. ಭಕ್ತರು ಪ್ರದರ್ಶಿಸಿದ ಶಾಸ್ತ್ರೀಯ ನೃತ್ಯ, ಸಂಗೀತ, ನಾಟಕ, ಮತ್ತು ಮೇಳಗಳಿಂದ ಈ ಉತ್ಸವವು ನಿಜವಾಗಿಯೂ ಸಂಸ್ಕೃತಿಯ ಹಬ್ಬವಾಯಿತು.
ಭಕ್ತಿಯ ಭಾವನೆಯಲ್ಲಿ ತೇಲಿದ ತೆಪ್ಪೋತ್ಸವ:
ಏಪ್ರಿಲ್ 22ರಂದು ದೇವತೆಗಳಿಗೆ ಪಂಚಾಮೃತದಿಂದ ಚೂರ್ಣಾಭಿಷೇಕ ನಡೆಯಲಿದ್ದು, ನಂತರದ ದಿನ ಪುಷ್ಪಪಲ್ಲಕಿಯ ಮೂಲಕ ದೇವತೆಗಳನ್ನು ಕಲ್ಯಾಣಿ (ದೇವಾಲಯದ ತೆರೆಗುಂಡಿಗೆ) ಗೆ ಕರೆದೊಯ್ಯಲಾಗುತ್ತದೆ. ಅಲ್ಲಿ ದೇವತೆಗಳು ಭಕ್ತರ ನಡುವೆ ದೋಣಿಯ ಮೇಲಿಂದ ಪ್ರಸನ್ನ ಮುಖದಿಂದ ತೇಲುತ್ತಾ ಮೆರೆಯಲಿದ್ದಾರೆ- ಈ ತೆಪ್ಪೋತ್ಸವ ಭಕ್ತರಲ್ಲಿ ಭಾವನಾತ್ಮಕ ಭಕ್ತಿಯನ್ನು ಉಂಟುಮಾಡುವ ವಿಶಿಷ್ಟ ಅನುಭವವಾಗಲಿದೆ.
ಧ್ವಜ ಅವರೋಹಣದೊಂದಿಗೆ ಮಂಗಳ ಸಮಾಪನೆ:
ಎಲ್ಲಾ ಆಚರಣೆಗಳು ಏಪ್ರಿಲ್ 23ರಂದು ಗರುಡ ಧ್ವಜ ಇಳಿಸುವ ಧ್ವಜ ಅವರೋಹಣದೊಂದಿಗೆ ಅಧಿಕೃತವಾಗಿ ಮುಕ್ತಾಯಗೊಳ್ಳಲಿವೆ.
ಸಂಸ್ಥೆಯ ನಾಯಕತ್ವದಿಂದ ಸಂದೇಶ:
ಇಸ್ಕಾನ್ ಬೆಂಗಳೂರಿನ ಅಧ್ಯಕ್ಷರಾದ ಶ್ರೀ ಮಧು ಪಂಡಿತ ದಾಸ್ ಅವರು ಹಬ್ಬದ ಸಂಧರ್ಭದಲ್ಲಿ ಮಾತನಾಡುತ್ತಾ ಹೇಳಿದರು:
“ಈ ವರ್ಷವೂ ನಾವು ಬ್ರಹ್ಮ ರಥೋತ್ಸವವನ್ನು ಉತ್ಸಾಹದಿಂದ ಆಚರಿಸುತ್ತಿದ್ದೇವೆ. ಕಳೆದ 28 ವರ್ಷಗಳಿಂದ ಈ ದೇವತೆಗಳು ನಮ್ಮ ಸೇವೆ ಸ್ವೀಕರಿಸುತ್ತಿರುವುದು ನಮ್ಮ ಅದೃಷ್ಟ. ದೇಶದಾದ್ಯಂತದಿಂದ ಮತ್ತು ವಿದೇಶಗಳಿಂದಲೂ ಬಂದ ಲಕ್ಷಾಂತರ ಭಕ್ತರನ್ನು ಇಲ್ಲಿ ಸ್ವಾಗತಿಸುತ್ತಿರುವುದು ನಮಗೆ ಅತ್ಯಂತ ಸಂತೋಷದ ವಿಚಾರ. ದೇವಾಲಯ ಸಂಪೂರ್ಣವಾಗಿ ಕುಟುಂಬಗಳು, ಮಕ್ಕಳು ಮತ್ತು ಯುವಕರಿಂದ ತುಂಬಿ, ಶ್ರದ್ದೆ ಮತ್ತು ಭಕ್ತಿಯಿಂದ ನಲಿದಿದೆ. ಇಂತಹ ಹಬ್ಬಗಳು ಜನರನ್ನು ಒಟ್ಟಿಗೆ ಸೇರಿಸಿ, ಶ್ರೀಕೃಷ್ಣನ ಸೇವೆಯ ಮೂಲಕ ಶ್ರದ್ಧೆಯ ಸಂಬಂಧವನ್ನು ಗಟ್ಟಿಗೊಳಿಸುತ್ತವೆ. ನಮ್ಮ ಎಲ್ಲಾ ಆನ್ಸೆನ್ ಪ್ಲಾಟ್ಸಾರ್ಮ್ಸ್ಳಲ್ಲಿ ಭಕ್ತರು ಆಚರಣೆಗಳನ್ನು ನಿತ್ಯ ವೀಕ್ಷಿಸುತ್ತಿರುವುದು ಇಸ್ಕಾನ್ನ ಆಧ್ಯಾತ್ಮಿಕ ಸಾರವನ್ನು ವಿಶ್ವದಾದ್ಯಂತ ವ್ಯಾಪಿಸುತ್ತಿರುವುದರ ಚಿಹ್ನೆಯಾಗಿದೆ.”
ಅವರು ತಮ್ಮ ಸಂದೇಶವನ್ನು ಈ ರೀತಿ ಮುಕ್ತಾಯಗೊಳಿಸಿದರು:
”ಶ್ರೀ ರಾಧಾ ಕೃಷ್ಣಚಂದ್ರರು ತಮ್ಮ ಕೃಪಾ ಕಟಾಕ್ಷದಿಂದ ಎಲ್ಲರಿಗೂ ಉತ್ತಮ ಆರೋಗ್ಯ, ಶಾಂತಿ ಮತ್ತು ಭಕ್ತಿಯನ್ನು ನೀಡಲಿ ಎಂದು ನಾವು ಪ್ರಾರ್ಥಿಸುತ್ತೇವೆ.”