ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಪ್ರಸ್ತುತ 28100 ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು, ಬೆಂಗಳೂರಿನ ಸಾರ್ವಜನಿಕ ಪ್ರಯಾಣಿಕರ ಸುರಕ್ಷತೆ ಹಾಗೂ ಸಂಸ್ಥೆಯ ನೌಕರರ ಆರೋಗ್ಯದ ಹಿತದೃಷ್ಟಿಯಿಂದ ಸಂಸ್ಥೆಯ ಎಲ್ಲಾ ನೌಕರರಿಗೆ Department of Biotechnology Govt of India ದ ಸಹಕಾರದೊಂದಿಗೆ C-CAMP ಅನ್ನು (The Centre for Cellular and Molecular Platforms) ಸರ್ಕಾರದ ಸಾರಿಗೆ ಇಲಾಖೆಯ “ಸಾರಿಗೆ ಆಶಾಕಿರಣ ಯೋಜನೆ”ಯಡಿ ದಿನಾಂಕ:06-05-2025 ರಿಂದ ಸಂಸ್ಥೆಯ ಕೇಂದ್ರ ಕಛೇರಿ ಸೇರಿದಂತೆ 50 ಘಟಕಗಳು ಮತ್ತು 4 ಕಾರ್ಯಾಗರಗಳಲ್ಲಿ ವಿವಿಧ ತಂಡಗಳೊಂದಿಗೆ ಕಣ್ಣಿನ ತಪಾಸಣಾ ಶಿಬಿರಗಳನ್ನು ಹಂತಹಂತವಾಗಿ ಆಯೋಜಿಸಿ, ನೌಕರರಿಗೆ ಉಚಿತವಾಗಿ ಕಣ್ಣಿನ ಪರೀಕ್ಷೆಯನ್ನು ನಡೆಸಲಾಗುತ್ತದೆ.
ಅದರಂತೆ, ಪರೀಕ್ಷೆಗೆ ಒಳಪಡಿಸಲಾದ ನೌಕರರ ಕಣ್ಣಿನ ದೋಷದ ಪ್ರಮಾಣಕ್ಕೆ ತಕ್ಕಂತೆ ಕನ್ನಡಕಗಳನ್ನು ಸಿದ್ಧಪಡಿಸಿ, ನೌಕರರು ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಯಸ್ಥಾನಗಳಿಗೆ ಈ ಯೋಜನೆಯಡಿಯಲ್ಲಿಯೇ ವಿತರಿಸಲಾಗುತ್ತದೆ. ಕಣ್ಣಿನ ತಪಾಸಣೆ ಶಿಬಿರವನ್ನು ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ರವರು ಉದ್ಘಾಟಿಸಿದರು.
ರೂ. 10 ಲಕ್ಷದ ಗುಂಪು ವಿಮಾ ಚೆಕ್ ವಿತರಣೆ
ಸಂಸ್ಥೆಯಲ್ಲಿ ಪರಿಷ್ಕೃತ ಗುಂಪು ವಿಮಾ ಯೋಜನೆಯನ್ನು ದಿನಾಂಕ:19.02.2024 ರಿಂದ ಜಾರಿಗೆ ತರಲಾಗಿರುತ್ತದೆ. ಅಪಘಾತದಿಂದ (ಕರ್ತವ್ಯ ನಿರತ/ವೈಯಕ್ತಿಕ ಅಪಘಾತ ಸೇರಿದಂತೆ) ಮೃತಪಟ್ಟಲ್ಲಿ, ರೂ. 50.00 ಲಕ್ಷ ವಿಮಾ ಮೊತ್ತ ಮತ್ತು ಸ್ವಾಭಾವಿಕ/ಇನ್ನಿತರೆ ಕಾರಣಗಳಿಂದ ಮೃತಪಟ್ಟಲ್ಲಿ, ರೂ. 10.00 ಲಕ್ಷ ವಿಮಾ ಪರಿಹಾರ ಮೊತ್ತವನ್ನು ಪಾವತಿಸಲಾಗುತ್ತಿದೆ.
ದಿನಾಂಕ:19.02.2024 ರಿಂದ ಏಪ್ರಿಲ್-2025 ರವರೆಗೆ ಒಟ್ಟು 118 ನೌಕರರುಗಳು ಮೃತಪಟ್ಟಿದ್ದು, ಅದರಲ್ಲಿ ಸ್ವಾಭಾವಿಕ ಹಾಗೂ ಇನ್ನಿತರೆ ಕಾರಣಗಳಿಂದ ಒಟ್ಟು 107 ನೌಕರರು ಮೃತಪಟ್ಟಿದ್ದು, ಇವರಲ್ಲಿ 73 ಮೃತ ನೌಕರರುಗಳ ನಾಮನಿರ್ದೇಶಿತರಿಗೆ ಸಂಸ್ಥೆಯ ಗುಂಪು ವಿಮಾ ಯೋಜನೆಯಡಿಯಲ್ಲಿ ತಲಾ ರೂ.10.00 ಲಕ್ಷದಂತೆ ಒಟ್ಟು ರೂ.7,30,00,000/- ಗಳನ್ನು ಪಾವತಿಸಲಾಗಿರುತ್ತದೆ.
ಇಂದು ಒಟ್ಟು 12 ಸಿಬ್ಬಂದಿಗಳ ಮೃತ ನಾಮನಿರ್ದೇಶಿತರಿಗೆ ಗುಂಪು ವಿಮಾ ಮೊತ್ತವನ್ನು ವಿತರಿಸಲಾಗಿದೆ.
*ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಪ್ರಶಂಸನೆ*
ಬೆಂಗಳೂರಿನ ಯಲಹಂಕದಲ್ಲಿರುವ ಭಾರತೀಯ ವಾಯುನೆಲೆಯಲ್ಲಿ ದಿನಾಂಕ 10-02-2025 ರಿಂದ 14-02-2025ರ ವರೆಗೆ ನಡೆದ “ಏರೊ ಇಂಡಿಯಾ-2025“ ಪ್ರದರ್ಶನಕ್ಕೆ ಸಂಸ್ಥೆಯ ವತಿಯಿಂದ ಒಟ್ಟು 364 ಸಾಂದರ್ಭಿಕ ಒಪ್ಪಂದದ ಬಸ್ಸುಗಳ ಕಾರ್ಯಾಚರಣೆ ಹಾಗೂ 199 ವಿಶೇಷ ಸಾರಿಗೆ ಸೇವೆಗಳನ್ನು ಮಾಡಲಾಗಿದ್ದು, ಒಟ್ಟು 16,932 “ಏರೊ ಇಂಡಿಯಾ-2025“ವೀಕ್ಷಕರಿಗೆ ಪ್ರದರ್ಶನವನ್ನು ಸಂಚಾರದಟ್ಟಣೆ ತೊಂದರೆಯಿಲ್ಲದೇ ವೀಕ್ಷಿಸಲು ಅನುಕೂಲಕರವಾಗಿರುವಿದಲ್ಲದೇ ಸಂಸ್ಥೆಗೆ ಸುಮಾರು ರೂ. 75.40 ಲಕ್ಷಗಳಷ್ಟು ಆದಾಯ ಮೂರು ದಿನಗಳಲ್ಲಿ ಸಂದಾಯವಾಗಿರುತ್ತದೆ.
ಸದರಿ ಪ್ರದರ್ಶನಕ್ಕೆ ಬಂದಿರುವ ಪ್ರಯಾಣಿಕರಿಗೆ ಸಮರ್ಪಕವಾಗಿ ಸಾರಿಗೆ ಸೇವೆಗಳನ್ನು ಒದಗಿಸಿ, ಸಂಸ್ಥೆಗೆ ಆದಾಯ ಮತ್ತು ಹೆಮ್ಮೆಯನ್ನು ತಂದಿರುವುದಲ್ಲದೇ ವಾಹನಗಳನ್ನು ವ್ಯವಸ್ಥಿತವಾಗಿ ಕಾರ್ಯಾಚರಣೆ ಮಾಡಿ ಸಾರ್ವಜನಿಕ ಪ್ರಯಾಣಿಕರ ಪ್ರಶಂಸನೆಗೂ ಪಾತ್ರರಾಗಿರುವ ಅಧಿಕಾರಿಗಳ ಉತ್ತಮ ಸೇವೆ ಹಾಗೂ ಕಾರ್ಯವೈಖರಿಯನ್ನು ಶ್ಲಾಘಿಸುತ್ತಾ ಪ್ರಶಂಸನಾ ಪತ್ರವನ್ನು ನೀಡಿ ಆಭಿನಂದಿಸಲಾಗಿದೆ ಹಾಗೂ ಈ ಕುರಿತಾಗಿ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯ ಕಾರ್ಯದರ್ಶಿಗಳು ಮತ್ತು ಏರ್ ಕಮಾಂಡರ್ ಶ್ರೀ ರೋಹಿತ್ ವಿಜಯ್ ದೇವ್ ರವರು ಸಾರಿಗೆ ಸೇವೆಗಳನ್ನು ಶ್ಲಾಘಿಸುತ್ತಾ ಪತ್ರ ಬರೆದಿರುತ್ತಾರೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಬೆಂಗಳೂರು ನಗರದ ಯಾವುದೇ ಮೂಲೆಗೆ ಸಾಂದರ್ಭಿಕ ಒಪ್ಪಂದದ ಮೇರೆಗೆ ಸರ್ಕಾರಿ, ಅರೆ-ಸರ್ಕಾರಿ ಮತ್ತು ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಇತರೇ ಸಭೆ-ಸಮಾರಂಭಗಳಿಗೆ ಸಾರಿಗೆ ಸೇವೆಗಳನ್ನು ಒದಗಿಸುವುದರ ಮೂಲಕ ಜನದಟ್ಟಣೆ ಕಡಿಮೆ ಮಾಡುವುದರ ಮೂಲಕ ಸಂಸ್ಥೆಯ ಆದಾಯವನ್ನು ಹೆಚ್ಚಿಸಿವುದರಲ್ಲಿ ಹೆಸರುವಾಸಿಯಾಗಿದೆ.
“ಮಾಸ್ಟರ್ ಗೇಮ್ಸ್-2025” ರಲ್ಲಿ ಬೆಂ.ಮ.ಸಾ.ಸಂಸ್ಥೆಯ ಕಬಡ್ಡಿ ಮತ್ತು ವಾಲಿಬಾಲ್ ತಂಡಗಳು ವಿಜೇತ
ದಿನಾಂಕ: 22.04.2025 ರಿಂದ 25.04.2025ರ ವರೆಗೆ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಆಯೋಜಿಸಲಾಗಿದ್ದ “Master Games-2025” ರಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕಬಡ್ಡಿ ಹಾಗೂ ವಾಲಿಬಾಲ್ ತಂಡಗಳು ಭಾಗವಹಿಸಿದ್ದು, ಕಬಡ್ಡಿ ತಂಡ ಪ್ರಥಮ ಸ್ಥಾನ ಗಳಿಸಿ ವಿಜೇತರಾಗಿದ್ದು, ವಾಲಿಬಾಲ್ ತಂಡ 3ನೇ ಸ್ಥಾನ ಗಳಿಸಿದ್ದು, ಸಂಸ್ಥೆಯ ಕೀರ್ತಿಯನ್ನು ರಾಷ್ಟೀಯ ಮಟ್ಟದಲ್ಲಿ ಹೆಚ್ಚಿಸಿರುತ್ತಾರೆ.
*ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ*
ಘಟಕ-33 ರಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ವೈದ್ಯಪ್ಪ, ಬಿಲ್ಲೆ ಸಂಖ್ಯೆ 9064 ರವರ ಮಗಳಾದ ಕುಮಾರಿ ಸಹನಾ.ಎಸ್.ವಿ ರವರು 2021-2022 ರಿಂದ 2022-2023ರ ಅವಧಿಯ ಶೈಕ್ಷಣಿಕ ವರ್ಷದಲ್ಲಿ ಎಂ.ಎಸ್ಸಿ (ಕೃಷಿ) ಸಸ್ಯ ರೋಗಶಾಸ್ತ್ರ ವಿಭಾಗದಲ್ಲಿ ವಿಶ್ವವಿದ್ಯಾಲಯಕ್ಕೆ ಮೊದಲಿಗರಾಗಿ ಮಹಾರಾಷ್ಟ್ರ ಪುಲೆ ಕೃಷಿ ವಿದ್ಯಾಪೀಠ ರಾಹೌರಿ ದಿಂದ ದಿ:22-04-2025 ರಂದು ಚಿನ್ನದ ಪದಕ ಪಡೆದಿರುತ್ತಾರೆ.
ಘಟಕ-45 ರಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಲಕ್ಷ್ಮೀಕಾಂತ, ಬಿಲ್ಲೆ ಸಂಖ್ಯೆ 16174 ರವರ ಮಗಳಾದ ಕುಮಾರಿ ಸೌಮ್ಯ ರವರು ಮೌಂಟ್ ವೇವ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಗುಲ್ಬರ್ಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 621 ಅಂಕಗಳನ್ನು ಪಡೆದು ನಮ್ಮ ರಾಜ್ಯಕ್ಕೆ ಐದನೇ rank ಪಡೆದಿರುತ್ತಾರೆ.
ವಿದ್ಯಾರ್ಥಿಗಳ ಈ ಸಾಧನೆ ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ, ಅದನ್ನು ಗುರುತಿಸಿ, ಪ್ರೋತ್ಸಾಹಿಸಲು ಸಂಸ್ಥೆಯ ವತಿಯಿಂದ ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಲಾಗುತ್ತಿದೆ.
*ಸಂಸ್ಥೆಯಲ್ಲಿ ಕೈಗೊಂಡಿರುವ ಕಾರ್ಮಿಕ ಉಪಕ್ರಮಗಳ ಮಾಹಿತಿ*
40 ವರ್ಷ ಮೇಲ್ಪಟ್ಟ ನೌಕರರು ಮತ್ತು ಅಧಿಕಾರಿಗಳ ಹೃದಯ ಸಂಬಂಧಿ ತಪಾಸಣೆಗಳನ್ನು ನಡೆಸಲು ಶ್ರೀ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯೊಂದಿಗೆ 05 ವರ್ಷಗಳ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ಇಲ್ಲಿಯವರೆಗೆ ಒಟ್ಟು 13,668 ನೌಕರರುಗಳಿಗೆ ಉಚಿತವಾಗಿ ಹೃದಯ ತಪಾಸಣೆಗೆ ಒಳಪಡಿಸಲಾಗಿರುತ್ತದೆ.
ಬೆಂಗಳೂರು ನಗರದ ಜನದಟ್ಟಣೆಯ ಸಾರಿಗೆ ವ್ಯವಸ್ಥೆಯಲ್ಲಿ ಸದಾ ಕರ್ತವ್ಯನಿರತ ಸಿಬ್ಬಂದಿಗಳ ಶ್ವಾಸಕೋಶ, ಉಸಿರಾಟ ಕಾಯಿಲೆ, ಅಲರ್ಜಿಗಳಿಗೆ ಸಂಬಂಧಿಸಿದ ಸ್ಕ್ರೀನಿಂಗ್ ಮತ್ತು ಸುಧಾರಿತ ಪರೀಕ್ಷೆಗಳನ್ನು ಮಾಡಿಸುವ ಕಾಳಜಿಯೊಂದಿಗೆ ಜಯನಗರದ ವಾಯು ಚೆಸ್ಟ್ ಅಂಡ್ ಸ್ಲೀಪ್ ಸೆಂಟರ್ ನಲ್ಲಿ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಈವರೆವಿಗೂ 2577 ನೌಕರರುಗಳು ತಪಾಸಣೆಗೆ ಒಳಪಟ್ಟಿರುತ್ತಾರೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ 2500 ನಿರ್ವಾಹಕ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿಗೊಳಿಸಲು ಕ್ರಮ ಜರುಗಿಸಲಾಗಿದ್ದು, ಮೊದಲ ಹಂತದಲ್ಲಿ 371(ಜೆ) ಮೀಸಲಾತಿಯಡಿಯಲ್ಲಿ ಆಯ್ಕೆಗೊಂಡ ಅರ್ಹ ಅಭ್ಯರ್ಥಿಗಳಿಗೂ ಈಗಾಗಲೇ ಭರ್ತಿ ಮಾಡಿಕೊಂಡಿದ್ದು, ಇನ್ನುಳಿದಂತೆ ಉಳಿಕೆ ಮೂಲ ವೃಂದದ ಹುದ್ದೆಗಳಿಗೆ 2286 ಅರ್ಹ ಅಭ್ಯರ್ಥಿಗಳನ್ನು ಆಯ್ಕೆಗೊಳಿಸಿ, ಈಗಾಗಲೇ ಸಂಭವನೀಯ ಆಯ್ಕೆ ಪಟ್ಟಿಯನ್ನು ಸಂಸ್ಥೆಯ ವೆಬ್ ಸೈಟ್ನಲ್ಲಿ ಬಿತ್ತರಿಸಲಾಗಿದ್ದು, ಅಂತಿಮಗೊಳಿಸಿರುವ ಆಯ್ಕೆ ಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.
ಸಂಸ್ಥೆಯಲ್ಲಿನ ಖಾಲಿ ಹುದ್ದೆಗಳ ಲಭ್ಯತೆಗನುಗುಣವಾಗಿ ಮೃತಾವಲಂಭಿತರುಗಳನ್ನು ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಉದ್ದೇಶಿಸಿ ಕಿರಿಯ ಸಹಾಯಕ ಕಂ ಡೇಟಾ ಎಂಟ್ರಿ ಆಪರೇಟರ್, ದರ್ಜೆ-3 (ಮೇಲ್ವಿಚಾರಕೇತರ) ಹುದ್ದೆಗೆ 200 ಅಭ್ಯರ್ಥಿಗಳನ್ನು, 25 ಕೆ.ಎಸ್.ಟಿ. ಪೇದೆ, 07 ಚಾಲಕರನ್ನು, 10 ನಿರ್ವಾಹಕರನ್ನು, 17 ತಾಂತ್ರಿಕ ಸಿಬ್ಬಂದಿಗಳನ್ನು, 51 ಕಛೇರಿ ಸಹಾಯಕರಿಗೆ ನೇಮಕಾತಿ ನೀಡಲಾಗಿದೆ. ಜೂನ್ 2023 ರಿಂದ ಇಲ್ಲಿಯವರೆಗೂ ಒಟ್ಟು 310 ಮೃತಾವಲಂಬಿತರುಗಳಿಗೆ ಅನುಕಂಪ ಆಧಾರಿತ ನೇಮಕಾತಿ ಆದೇಶವನ್ನು ನೀಡಲಾಗಿರುತ್ತದೆ.
ಈ ಸಾಲಿನಲ್ಲಿ Urban Mobility India ಮತ್ತು ASRTU ನಂತಹ ಪ್ರತಿಷ್ಠಿತ ರಾಷ್ಟ್ರೀಯ ಸಂಸ್ಥೆಗಳಿಂದ ಪಡೆದಿರುವ ಪ್ರಶಸ್ತಿಗಳು ಒಳಗೊಂಡಂತೆ, ಬೆಂ.ಮ.ಸಾ.ಸಂಸ್ಥೆಗೆ ಒಟ್ಟಾರೆ 147 ಪ್ರಶಸ್ತಿ/ಪುರಸ್ಕಾರಗಳು ಲಭಿಸಿರುತ್ತದೆ.