ಬೆಂಗಳೂರು : ಸಂಚಾರಿ ಕಾವೇರಿ ಯೋಜನೆಯ ಅಡಿಯಲ್ಲಿ BIS ಪ್ರಮಾಣೀತ ಶುದ್ದ ಕುಡಿಯುವ ನೀರು ಪೂರೈಸುವುದಕ್ಕೆ ಬೆಂಗಳೂರು ಜಲಮಂಡಳಿ ಬದ್ದವಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು, ತಂತ್ರಜ್ಞಾನ ಬಳಕೆಯ ಮೂಲಕ BIS ಪ್ರಮಾಣೀತ ಶುದ್ದ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಜನರ ಮನೆಬಾಗಿಲಿಗೆ ತಲುಪಿಸುತ್ತಿರುವ ದೇಶದ ಏಕೈಕ ಸರಕಾರಿ ಸಂಸ್ಥೆ ಎನ್ನುವ ಹೆಗ್ಗಳಿಕೆ ನಮ್ಮದಾಗಿದೆ.
ಪಾರದರ್ಶಕತೆ ಹಾಗೂ ಏಕರೂಪದ ಸೇವೆಗಾಗಿ ಬ್ರಾಂಡಿಂಗ್:
ಖಾಸಗಿ ಟ್ಯಾಂಕರ್ಗಳು ಪೂರೈಸುವಂತಹ ನೀರಿನ ಗುಣಮಟ್ಟದ ಬಗ್ಗೆ ಯಾವುದೇ ಖಾತರಿ ಇಲ್ಲ. ಬಹಳಷ್ಟು ಸಂಧರ್ಭಗಳಲ್ಲಿ ಅವರು ಪೂರೈಸುವಂತಹ ಕೊಳವೆಬಾವಿಯ ನೀರು ಕುಡಿಯಲು ಯೋಗ್ಯವಾಗಿರುವುದಿಲ್ಲ. ಅಲ್ಲದೇ, ಅಂತರ್ಜಲದ ಮೇಲೆ ಇನ್ನಷ್ಟು ಒತ್ತಡ ಹೆಚ್ಚು ಮಾಡುತ್ತಾರೆ. ಇದನ್ನ ತಡಿಯುವುದು ಹಾಗೆಯೇ BIS ಪ್ರಮಾಣೀತ ಶುದ್ದ ಕುಡಿಯುವ ನೀರನ್ನು ಟ್ಯಾಂಕರ್ ಮೇಲೆ ಅವಲಂಬಿತರಾಗಿರುವಂತಹ ಜನರಿಗೆ ತಲುಪಿಸುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಯಾವುದೇ ಸಂಧರ್ಭದಲ್ಲೂ ಕೂಡಾ ಯಾರಾದರೂ ನಮ್ಮ ನೀರನ್ನು ಪರಿಶೀಲಿಸಬಹುದಾಗಿದೆ.
ಬೆಂಗಳೂರು ಜಲಮಂಡಳಿ ತನ್ನ ಒಡೆತನದಲ್ಲಿರುವ 60 ಹಾಗೂ ನೊಂದಣಿಯಾಗಿರುವಂತಹ 100 ಕ್ಕೂ ಹೆಚ್ಚು ಟ್ಯಾಂಕರ್ಗಳನ್ನು ಬ್ರಾಂಡಿಂಗ್ ಮಾಡಿಸಿದೆ. ಖಾಸಗಿ ಟ್ಯಾಂಕರ್ಗಳು ನಮ್ಮ ನೀರನ್ನು ಬಿಟ್ಟು ಬೇರೆ ನೀರನ್ನು ಸರಬರಾಜು ಮಾಡಬಾರದು ಎನ್ನುವ ಷರತ್ತನ್ನು ವಿಧಿಸಲಾಗಿದೆ. ಟ್ರಿಪ್ ಆಧಾರದಲ್ಲಿ ಖಾಸಗಿ ಟ್ಯಾಂಕರ್ಗಳಿಗೆ ಹಣ ಪಾವತಿ ಮಾಡುವ ವ್ಯವಸ್ಥೆಯನ್ನು ರೂಪಿಸಲಾಗಿದೆ. ಶುದ್ದ ಕುಡಿಯುವ ನೀರು ಪೂರೈಕೆಗೆ ಬಳಸಲಾಗುವಂತಹ ಈ ಟ್ಯಾಂಕರ್ಗಳಲ್ಲಿ ಅಗತ್ಯ ಇಪಿಐ ಕೋಟೀಂಗ್ ಮಾಡಿಸಲಾಗಿದೆ. ಈ ಯೋಜನೆಗಾಗಿ ಜಲಮಂಡಳಿ ವತಿಯಿಂದ ಹೊಸ ಟ್ಯಾಂಕರ್ಗಳನ್ನು ಖರೀದಿಸಲಾಗಿಲ್ಲ.
2 ದಿನದಲ್ಲಿ 1000 ಕ್ಕೂ ಹೆಚ್ಚು ಜನರಿಂದ ಮೊಬೈಲ್ ಆ್ಯಪ್ ಡೌನ್ ಲೋಡ್,ಉತ್ತಮ ಪ್ರತಿಕ್ರಿಯೆ
ಸಂಚಾರಿ ಕಾವೇರಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಎರಡು ದಿನಗಳಲ್ಲೇ ಸುಮಾರು 1000 ಕ್ಕೂ ಹೆಚ್ಚು ಜನರು ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿದ್ದಾರೆ. ಅಲ್ಲದೇ ಟ್ಯಾಂಕರ್ ಬುಕ್ಕಿಂಗ್ ಮಾಡಿರುವಂತಹ ಜನರಿಗೆ ನೀರು ಸರಬರಾಜು ಮಾಡಲಾಗಿದೆ. RFID ಹಾಗೂ GPS ಟ್ರ್ಯಾಕಿಂಗ್ ಅಳವಡಿಸಿದ್ದು ಟ್ಯಾಂಕರ್ ಜಲಮಂಡಳಿಯ ನಿಗದಿತ ಕಾವೇರಿ ಕನೆಕ್ಟ್ ಸೆಂಟರ್ಗಳಲ್ಲೇ ನೀರು ತುಂಬಿಸಿ, ಅವುಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವುದನ್ನ ಖಾತರಿಪಡಿಸಿಕೊಳ್ಳಬಹುದಾಗಿದೆ.
ಸರಬರಾಜು ಆಗುವಂತಹ ನೀರಿನ ಬಗ್ಗೆ ಯಾವುದೇ ಅನುಮಾನಗಳಿದ್ದಲ್ಲಿ ಪರೀಕ್ಷೆಗೆ ಜಲಮಂಡಳಿ ಸಿದ್ದವಿದೆ ಎಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.