ಬೆಂಗಳೂರು: ನಗರದಲ್ಲಿ ನಾಗರಿಕರಿಗೆ ಸುರಕ್ಷತೆ ಮತ್ತು ನಡೆಯಲು ಅನುಕೂಲಕರವಾಗುವಂತೆ, ಪಾದಾಚಾರಿ ಮಾರ್ಗ ಒತ್ತುವರಿಯಾಗಿರುವುದನ್ನು ಗುರುತಿಸಿ ತೆರವು ಕಾರ್ಯ ನಡೆಸುವಂತೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಗರಿಕರಿಗೆ ಸುಸಜ್ಜಿತ ಹಾಗೂ ಅನುಕೂಲಕರವಾದ ಪಾದಾಚಾರಿ ಮಾರ್ಗ ನಿರ್ಮಿಸುವ ಸಲುವಾಗಿ, ಇಂದು ಬೆಳಿಗ್ಗೆ ಬೊಮ್ಮನಹಳ್ಳಿ ವಲಯದ ವ್ಯಾಪ್ತಿಯ ಬೊಮ್ಮನಹಳ್ಳಿ ಮೆಟ್ರೋ ನಿಲ್ದಾಣದಿಂದ ಹೊಂಗಸಂದ್ರ ಮೆಟ್ರೋ ನಿಲ್ದಾಣದವರೆಗೆ ಸುತ್ತಮುತ್ತಲಿನ ಪಾದಾಚಾರಿ ಮಾರ್ಗಗಳನ್ನು ಪರಿಶೀಲನೆ ನಡೆಸುವ ವೇಳೆ ಸೂಚನೆಗಳನ್ನು ನೀಡಿದರು.
*ಭಿತ್ತಿ ಪತ್ರಗಳ ತೆರವಿಗೆ ಸೂಚನೆ*:
ವಿಜಯಲಕ್ಷ್ಮಿ ಟಿಂಬರ್ಸ್ ಹತ್ತಿರದ ಬೆಸ್ಕಾಂ ಟ್ರಾನ್ಸ್ ಫಾರ್ಮರ್ ಗೆ ಹಾಗೂ ಗೋಡೆಗೆ ಅನಧಿಕೃತವಾಗಿ ಭಿತ್ತಿ ಪತ್ರಗಳನ್ನು ಅಂಟಿಸಲಾಗಿದ್ದು ಅವುಗಳನ್ನು ತೆರವುಗೊಳಿಸಿ ಪಾದಾಚಾರಿ ಮಾರ್ಗದಲ್ಲಿ ಸ್ವಚ್ಛತೆ ಕಾಪಾಡಲು ಸೂಚಿಸಿದರು.
*ಪಾದಚಾರಿ ಮೇಲೆ ನಿಲ್ಲಿಸಿದ್ದ ಜೆ.ಸಿ.ಬಿ ಹಾಗೂ ವಾಹನ ಮಾಲೀಕರಿಗೆ ನೋಟಿಸ್ ನೀಡಿ*:
ಪಾದಾಚಾರಿ ಮಾರ್ಗದಲ್ಲಿ ಜೆ.ಸಿ.ಬಿ ಹಾಗೂ ವಾಹನ ನಿಲುಗಡೆ ಮಾಡಿರುವುದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿದ್ದು, ವಾಹನ ಮಾಲೀಕರಿಗೆ ನೋಟಿಸ್ ಜಾರಿಗೊಳಿಸುವುದರ ಜೊತೆಗೆ ದಂಡ ವಿಧಿಸಲು ಸೂಚಿಸಿದರು.
*ಪಾದಚಾರಿ ಒತ್ತುವರಿ ತೆರವುಗಳಿಸಿ ನೋಟಿಸ್ ನೀಡಿ*:
ಪಾದಾಚಾರಿ ಮಾರ್ಗದಲ್ಲಿ ಒತ್ತುವರಿಯಾಗಿರುವುದನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಒತ್ತುವರಿ ಮಾಡಿರುವ ಕಟ್ಟಡ ಮಾಲೀಕರು ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ನೋಟಿಸ್ ಜಾರಿಗೊಳಿಸುವುದರ ಜೊತೆಗೆ ದಂಡ ವಿಧಿಸಲು ಸೂಚಿಸಿದರು.
*ಪಾದಚಾರಿ ಮೇಲೆ ನೀರು ನಿಲ್ಲುವುದನ್ನು ಸರಿಪಡಿಸಿ*:
ಪಾದಾಚಾರಿ ಮಾರ್ಗಗಳಲ್ಲಿ ಉಂಟಾದ ತಗ್ಗುಗಳಲ್ಲಿ ನೀರು ನಿಂತಿರುವುದರಿಂದ ಡೆಂಗ್ಯೂ ಹರಡುವ ಸಾಧ್ಯತೆಗಳಿದ್ದು, ತಗ್ಗುಗಳನ್ನು ಸರಿಪಡಿಸಿ, ನೀರು ನಿಲ್ಲದಂತೆ ನೋಡಿಕೊಳ್ಳಲು ಹಾಗೂ ಪುಟ್ ಪಾತ್ ಮೇಲೆ ಬೀಳುವ ನೀರು ಸರಾಗವಾಗಿ ಚರಂಡಿಗಳಿಗೆ ಹೋಗುವ ವ್ಯವಸ್ಥೆ ಮಾಡಲು ಸೂಚಿಸಿದರು.
*ರಸ್ತೆಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ*:
ರಸ್ತೆಯಲ್ಲಿ ಮಳೆಯ ನೀರು ನಿಲ್ಲುವುದರಿಂದ ರಸ್ತೆಗಳು ಹಾಳಾಗುವುದರ ಜೊತೆಗೆ ವಾಹನ ಸಂಚಾರ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆ ಮತ್ತು ಪ್ರವಾಹಕ್ಕೆ ಎಡೆಮಾಡಿಕೊಡುವ ಕಾರಣದಿಂದ ರಸ್ತೆಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಲು ಹಾಗೂ ರಸ್ತೆ ಬದಿಯ ಚರಂಡಿಗಳ ಬ್ಲಾಕ್ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲು ಕ್ರಮ ವಹಿಸುವಂತೆ ಸೂಚಿಸಿದರು.
*ಪಾದಚಾರಿಗಳ ಮೇಲೆ ಬೆಳೆದ ಹುಲ್ಲು ಹಾಗೂ ಕಸ ತೆರವುಗೊಳಿಸಿ*
ಪಾದಚಾರಿ ಮೇಲೆ ಮಳೆಗಾಗಲದ ಪ್ರಯುಕ್ತ ಬೆಳೆದಿರುವ ಹುಲ್ಲು / ಕಸವನ್ನು ತೆಗೆಯಲು ಹಾಗೂ ದಿನನಿತ್ಯ ಪಾದಚಾರಿ ಗುಡಿಸಿ ಬಿದ್ದಿರುವ ತ್ಯಾಜ್ಯವನ್ನು ಸ್ವಚ್ಛಗೊಳಿಸಲು ಸೂಚನೆ ನೀಡಿದರು.
*ಪಾದಚಾರಿ ಮೇಲೆ ಹಾಗೂ ರಸ್ತೆ ಪಕ್ಕದಲ್ಲಿನ ತ್ಯಾಜ್ಯ ತೆರವಿಗೆ ಸೂಚನೆ*:
ಪಾದಚಾರಿ ಮೇಲೆ ಹಾಗೂ ಪಾದಚಾರಿಗೆ ಹೊಂದಿಕೊಂಡಂತೆ ಸುರಿದಿರುವ ಕಟ್ಟಡದ ತ್ಯಾಜ್ಯವನ್ನು ತೆರವುಗೊಳಿಸಲು ತ್ಯಾಜ್ಯ ಸುರಿಯುವವರಿಗೆ ದಂಡ ವಿಧಿಸಲು ಸೂಚಿದರು.
*ಮರಗಳ ಸುತ್ತಲಿನ ಕಾಂಕ್ರೀಟ್ ತೆರವಿಗೆ ಸೂಚನೆ*:
ಪಾದಚಾರಿ ಮೇಲೆ ಹಾಗೂ ರಸ್ತೆ ಪಕ್ಕದಲ್ಲಿನ ಮರಗಳು/ಸಸಿಗಳ ಸುತ್ತಲಿನ ಸಿಮೆಂಟ್ ಕಾಂಕ್ರೀಟ್ ತೆಗೆದು ಹಾಕಿ ಮಳೆ ನೀರು ಇಂಗಲು ಸಹಾಯಕವಾಗುವಂತೆ ಮರಗಳ ಸುತ್ತಲೂ ಸ್ಥಳ ಬಿಡಲು ಸೂಚಿಸಿದರು.
*ದೊಡ್ಡಮೋರಿ ತ್ಯಾಜ್ಯ ತೆರವುಗಳಿಸಲು ಸೂಚನೆ*:
ಆಕ್ಸ್ ಫರ್ಡ್ ಇಂಜಿನೀಯರಿಂಗ್ ಕಾಲೇಜು ಮುಂಭಾಗದಲ್ಲಿನ ದೊಡ್ಡಮೋರಿಯ ದುರ್ವಾಸನೆಯಿಂದ ಕೂಡಿದ ತ್ಯಾಜ್ಯವು ರಸ್ತೆಗೆ ಹರಡಿಕೊಂಡಿದ್ದು, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಕೂಡಲೇ ತ್ಯಾಜ್ಯವನ್ನು ತೆರವುಗಳಿಸಲು ಸೂಚಿಸಿದರು.
ಹೊಂಗಸಂದ್ರ ಮೆಟ್ರೋ ನಿಲ್ದಾಣದ ಹತ್ತಿರದ ಮೇಲುಸೇತುವೆ ಪಕ್ಕದಲ್ಲಿನ ಬೃಹತ್ ನೀರುಗಾಲುವೆ ಕುರಿತಂತೆ ಸಭೆ ನಡೆಸಿ, ಅನುಸರಣಾ ವರದಿ ನೀಡುವಂತೆ ವಲಯ ಆಯುಕ್ತರಿಗೆ ಸೂಚನೆ ನೀಡಿದರು.
ಈ ವೇಳೆ ಬೊಮ್ಮನಹಳ್ಳಿ ವಲಯ ಆಯುಕ್ತರಾದ ರಮ್ಯಾ, ಜಂಟಿ ಆಯುಕ್ತರಾದ ಅಜಿತ್.ಎಂ, ಮುಖ್ಯ ಅಭಿಯಂತರರಾದ ಶಶಿಕುಮಾರ್, ಮೆಟ್ರೋ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.