ಬೆಂಗಳೂರು: ಕೃಷಿ ಕ್ಷೇತ್ರದ ಅಭಿವೃದ್ಧಿಯಲ್ಲಿ ವಿಜ್ಞಾನಿಗಳು ಹಾಗೂ ವಿದ್ಯಾರ್ಥಿಗಳ ಪಾತ್ರವು ಪ್ರಮುಖವಾಗಿದೆ ಎಂದು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ತಿಳಿಸಿದರು.
ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ವಿಶ್ವವಿದ್ಯಾನಿಲಯ ವತಿಯಿಂದ 59ನೇ ಘಟಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲರು, ನಮ್ಮ ದೇಶವು ಕೃಷಿ ಕ್ಷೇತ್ರದಲ್ಲಿ ತಾಂತ್ರಿಕ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವುದರಲ್ಲಿ ಮುಂಚೂಣಿಯಲ್ಲಿದೆ. ಪ್ರಸ್ತುತ ಕೃಷಿ ಉತ್ಪಾದನೆಯಲ್ಲಿ ಬೇಡಿಕೆಯನ್ನು ಪೂರೈಸಲು ಹೊಸ ಆಯ್ಕೆಗಳನ್ನು ಉತ್ತೇಜಿಸುವ ಅವಶ್ಯಕತೆಯಿದೆ ಎಂದರು.
ಭಾರತೀಯ ಕೃಷಿ ಸಂಶೋಧನಾ ಮಂಡಳಿ ಮತ್ತು ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು ಅಭಿವೃದ್ಧಿಪಡಿಸಿದ ಸುಧಾರಿತ ಬೀಜಗಳು ಮತ್ತು ಸುಧಾರಿತ ತಳಿಗಳು ರೈತರ ಆದಾಯವನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿವೆ. ಕೃಷಿ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಡ್ರೋನ್ ತಂತ್ರಜ್ಞಾನ, ಉಪಗ್ರಹ ಚಿತ್ರಣ ಮತ್ತು ಸ್ಮಾರ್ಟ್ ನೀರಾವರಿ ವ್ಯವಸ್ಥೆಗಳ ಬಳಕೆಯಿಂದ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ನೀರಿನ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ರಾಸಾಯನಿಕ ಗೊಬ್ಬರ, ಕೀಟನಾಶಕಗಳಿಂದ ಮಣ್ಣು ನೀರು ನಾಶ
ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳ ಅತಿಯಾದ ಬಳಕೆಯಿಂದ ಮಣ್ಣು, ನೀರು ಮತ್ತು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸಾವಯವ ಕೃಷಿ, ನೈಸರ್ಗಿಕ ಕೃಷಿ, ಕಡಿಮೆ ನೀರಿನಿಂದ ಹೆಚ್ಚು ಇಳುವರಿ ಮತ್ತು ಸುರಕ್ಷಿತ ಆಹಾರವನ್ನು ಉತ್ಪಾದಿಸಲು ಪರಿಸರ ಸ್ನೇಹಿ ಕೃಷಿಯಂತಹ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ಕ್ಷೇತ್ರದಲ್ಲಿ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.
ಯುವಜನತೆಯು “ಸ್ಮಾರ್ಟ್ಅಪ್ ಇಂಡಿಯಾ”, “ಡಿಜಿಟಲ್ ಇಂಡಿಯಾ”, “ಆತ್ಮ ನಿರ್ಭರ್ ಭಾರತ್” ನಂತಹ ಯೋಜನೆಗಳ ಸದುಪಯೋಗಪಡೆದುಕೊಂಡು ಕೃಷಿ ಕ್ಷೇತ್ರ ಅಭಿವೃದ್ಧಿಗೆ ಕಾರಣರಾಗಬೇಕು ಎಂದು ಯುವಜನತೆಗೆ ಕರೆ ನೀಡಿದರು.
ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯವು ಸಂಶೋಧನೆ, ನಾವೀನ್ಯತೆ ಮತ್ತು ಜಾಗತಿಕ ಸಹಯೋಗದ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಿದೆ. ವಿಶ್ವವಿದ್ಯಾನಿಲಯವು ರೈತರ ಕಲ್ಯಾಣ, ಸಮಾಜ ಕಲ್ಯಾಣ, ಸಾರ್ವಜನಿಕ ಹಿತಾಸಕ್ತಿ ಮತ್ತು ದೇಶದ ಕಲ್ಯಾಣಕ್ಕಾಗಿ ಶ್ರಮಿಸಿದ ಮಹಾನ್ ವ್ಯಕ್ತಿಗಳಿಗೆ ಗೌರವ ಪದವಿಗಳನ್ನು ನೀಡಿ ಗೌರವಿಸಿದೆ. ಅವರ ಅತ್ಯುತ್ತಮ ಸಾಧನೆಗಳು, ಕೃಷಿಯಲ್ಲಿ ಮಹತ್ವದ ಕೊಡುಗೆ, ರೈತರ ಕಲ್ಯಾಣ ಮತ್ತು ದೇಶದ ಪ್ರಗತಿಗಾಗಿ ಅವರನ್ನು ಅಭಿನಂದಿಸುತ್ತಾ, ಸಮಾಜಕ್ಕಾಗಿ ಅವರ ಸೇವೆ ನಿರಂತರವಾಗಿರಲಿ ಎಂದು ತಮ್ಮ ಆಶಯವನ್ನು ವ್ಯಕ್ತಪಡಿಸಿದರು.
ಜಿಕೆವಿಕೆ ಶಿಕ್ಷಣದ ಜೊತೆಗೆ ಸಂಶೋಧನೆ, ವಿಸ್ತರಣೆಯಲ್ಲಿ ದೇಶದಲ್ಲೇ ಮೊದಲು
ಕೃಷಿ ಸಚಿವರು ಹಾಗೂ ಕೃಷಿ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿ ಎನ್. ಚೆಲುವರಾಯಸ್ವಾಮಿ ಮಾತನಾಡಿ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು 1960ರ ದಶಕದಿಂದ ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಶೋಧನೆ ಹಾಗೂ ವಿಸ್ತರಣೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ರಾಜ್ಯದ ಕೃಷಿ ಕ್ಷೇತ್ರದಲ್ಲಿ ಹಸಿರು ಕ್ರಾಂತಿ ಮೂಲಕ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿನ ಸುಸ್ಥಿರತೆಗೆ ನಾಂದಿ ಹಾಡಿದೆ. ವಿಶ್ವವಿದ್ಯಾನಿಲಯವು ದೇಶದ ಕೃಷಿ ಇತಿಹಾಸದಲ್ಲಿ ಹಲವಾರು ಮೈಲುಗಲ್ಲು ದಾಖಲಿಸಿದ್ದು, ಸುಧಾರಿತ ಸಮಗ್ರ ಕೃಷಿ ಪದ್ಧತಿಗಳು, ಉತ್ತಮ ತಳಿಗಳು, ಒಣಬೇಸಾಯ ತಾಂತ್ರಿಕತೆಗಳು, ಸುಸ್ಥಿರ ನೀರು, ಪೋಷಕಾಂಶ, ಕಳೆ, ರೋಗ ಹಾಗೂ ಕೀಟ ನಿರ್ವಹಣಾ ಪದ್ಧತಿಗಳು, ಕೃಷಿ ಯಾಂತ್ರೀಕರಣ, ಪರ್ಯಾಯ ಭೂ ಬಳಕೆ ಹಾಗೂ ಭೂಸುಧಾರಣಾ ಕ್ರಮಗಳಿಂದ ಕೃಷಿ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ವಿಶ್ವವಿದ್ಯಾನಿಲಯವು ದೇಶದಲ್ಲೇ ಮುಂಚೂಣಿಯಲ್ಲಿದ್ದು, ಕಳೆದ 10 ವರ್ಷಗಳಲ್ಲಿ ವಿಶ್ವವಿದ್ಯಾನಿಲಯವು ಕಿರಿಯ ಸಂಶೋಧನಾರ್ಥಿ ಪರೀಕ್ಷೆಗಳಲ್ಲಿ ನಿರಂತರವಾಗಿ ಮೊದಲನೆಯ ಅಥವಾ ಎರಡನೆಯ ಸ್ಥಾನವನ್ನು ಪಡೆದುಕೊಳ್ಳುತ್ತಿದೆ ಎಂದು ಹೆಮ್ಮೆಪಟ್ಟರು.
ರಾಜ್ಯದಲ್ಲಿ ಪ್ರಸ್ತುತ ಕೃಷಿ ಕ್ಷೇತ್ರವು ಅನೇಕ ಸವಾಲುಗಳಿವೆ
ರಾಜ್ಯದಲ್ಲಿ ಪ್ರಸ್ತುತ ಕೃಷಿ ಕ್ಷೇತ್ರವು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು, ಅವುಗಳಲ್ಲಿ ಹವಾಮಾನ ವೈಪರೀತ್ಯದಿಂದ ಮಳೆಯ ಹಂಚಿಕೆಯಲ್ಲಿ ಬದಲಾವಣೆ, ತಾಪಮಾನದ ಏರಿಕೆ, ಉಷ್ಣಮಾರುತದÀ ಹಾವಳಿ, ಮಣ್ಣಿನ ಆರೋಗ್ಯದಲ್ಲಿನ ವ್ಯತ್ಯಯ, ಬೆಳೆಗಳಲ್ಲಿ ಹೆಚ್ಚುತ್ತಿರುವ ರೋಗ ಮತ್ತು ಪೀಡೆ ಭಾದೆ, ಕೂಲಿ ಕಾರ್ಮಿಕರ ಸಮಸ್ಯೆ, ಮಾರುಕಟ್ಟೆ ಸಂಬಂಧಿತ ಸಮಸ್ಯೆಗಳು ಕೃಷಿಕರನ್ನು ಸಂಕಷ್ಟಕ್ಕೆ ದೂಡಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಮಣ್ಣಿನ ಆರೋಗ್ಯ ಸುಧಾರಣೆ, ಹವಾಮಾನ ಚತುರ ತಳಿಗಳ ಅಭಿವೃದ್ಧಿ, ಗುಣಮಟ್ಟದ ಬೀಜ ಉತ್ಪಾದನೆಯಲ್ಲಿ ಸ್ವಾವಲಂಬನೆ ಮತ್ತು ರಾಸಾಯನಿಕ ಮುಕ್ತ ಪರಿಕರಗಳಿಗೆ ಮಹತ್ವ ನೀಡಬೇಕಿದ್ದು, ಈ ದಿಸೆಯಲ್ಲಿ ರಾಜ್ಯದ ಉತ್ಪಾದನೆ ಹೆಚ್ಚಿಸಲು ಹನಿ ನೀರಾವರಿ ಯೋಜನೆಗೆ ಕಳೆದ ಎರಡು ವರ್ಷದಲ್ಲಿ 1075 ಕೋಟಿ ರೂಪಾಯಿ ಸಹಾಯಧನ ನೀಡಲಾಗಿದೆ. ಕೋಯ್ಲೋತ್ತರ ತಂತ್ರಜ್ಞಾನಗಳ ಬಳಕೆಗೆ ‘ಹಾರ್ವೆಸ್ಟರ್ ಹಬ್’ ಯೋಜನೆ ಜಾರಿಗೆ ತಂದು, ಕಳೆದ ಎರಡು ವರ್ಷಗಳಲ್ಲಿ ಒಟ್ಟು 344 ಹೈಟೆಕ್ ಹಾರ್ವೆಸ್ಟರ್ಗಳನ್ನು ಸಹಾಯಧನದಲ್ಲಿ ವಿತರಿಸಲಾಗಿದೆ. ಕೃಷಿಗೆ ಸಂಬಂಧಿಸಿದ ಇಲಾಖೆಗಳಲ್ಲಿ ಸಮನ್ವಯತೆ ತರಲು ಕೃಷಿ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲಾಗಿದೆ ಎಂದು ತಿಳಿಸಿದರು.
ನವದೆಹಲಿ ಇಫ್ಕೊ ವ್ಯವಸ್ಥಾಪಕ ನಿರ್ದೇಶಕ ಡಾ. ಯು.ಎಸ್. ಅವಸ್ಥಿ ಮಾತನಾಡಿ, ಕೃಷಿ ವಿಶ್ವವಿದ್ಯಾನಿಲಯುವು ಇತ್ತೀಚೆಗೆ ನ್ಯಾಕ್ ಎ ಪ್ಲಸ್ ದರ್ಜೆಯೊಂದಿಗೆ ಮಾನ್ಯತೆ ಪಡೆದಿರುವುದು ಸಂತೋಷದ ಸಂಗತಿ ಎಂದರು. ಡಾ.ಎಂ.ಎಸ್. ಸ್ವಾಮಿನಾಥನ್ ನೇತೃತ್ವದ ಹಸಿರು ಕ್ರಾಂತಿಯು ಹೆಚ್ಚಿನ ಇಳುವರಿ ನೀಡುವ ಗೋಧಿ ಮತ್ತು ಭತ್ತದ ತಳಿಗಳು, ರಾಸಾಯನಿಕ ಗೊಬ್ಬರಗಳು ಮತ್ತು ನವೀನ ನೀರಾವರಿ ಪದ್ದತಿಯನ್ನು ಪರಿಚಯಿಸಿತು. ಇದು ಭಾರತವು ದೀರ್ಘಕಾಲದ ಆಹಾರ ಕೊರತೆಯನ್ನು ನಿವಾರಿಸಲು ಮತ್ತು ಆಹಾರ ಭದ್ರತೆಯನ್ನು ಸಾಧಿಸಲು ಸಹಾಯ ಮಾಡಿದೆ ಎಂದರು.
ನಿಖರ ಕೃಷಿಯು ಉತ್ಪಾದಕತೆ ಮತ್ತು ಲಾಭದಾಯಕತೆಯನ್ನು ಹೆಚ್ಚಿಸುತ್ತದೆ. ನೀರು, ಬೀಜಗಳು ಮತ್ತು ರಸಗೊಬ್ಬರಗಳಂತಹ ಅಮೂಲ್ಯ ಸಂಪನ್ಮೂಲಗಳನ್ನು ಉಳಿಸುತ್ತದೆ. ಪರಿಸರದ ಮೇಲಿನ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಹವಾಮಾನ ಬದಲಾವಣೆಯಂತಹ ಸವಾಲುಗಳ ವಿರುದ್ಧ ಕೃಷಿಯನ್ನು ಸ್ಥಿತಿಸ್ಥಾಪಕವಾಗಿಸುತ್ತದೆ ಎಂದು ತಿಳಿಸಿದರು.
ರೈತರನ್ನು ಬೆಳೆಸುವ, ಸಂಪ್ರದಾಯ ಗೌರವಿಸುವ, ನಾವೀನ್ಯತೆ ಕೃಷಿ ಬೇಕಾಗಿದೆ
ರೈತರನ್ನು ಸಬಲೀಕರಣಗೊಳಿಸುವ, ಸಂಪ್ರದಾಯವನ್ನು ಗೌರವಿಸುವ ಮತ್ತು ನಾವೀನ್ಯತೆಯನ್ನು ಸ್ವೀಕರಿಸುವ ಮಾದರಿಯ ಕೃಷಿ ಬೇಕಾಗಿದೆ. ಯುವ ಕೃಷಿ ಪದವೀಧರರಾಗಿ, ನೀವು ಸಂಪ್ರದಾಯ ಮತ್ತು ತಂತ್ರಜ್ಞಾನದ ನಡುವಿನ ಸೇತುವೆಯಾಗಿದ್ದೀರಿ. ಕೃಷಿಯ ಭವಿಷ್ಯವು ಕೇವಲ ವಿಜ್ಞಾನಿಗಳು ಮತ್ತು ನೀತಿನಿರೂಪಕರ ಕೈಯಲ್ಲಿಲ್ಲ. ಬದಲಾಗಿ ನಿಮ್ಮಂತಹ ಯುವಕರ ಉತ್ಸಾಹ ಮತ್ತು ನಾವೀನ್ಯತೆಯಲ್ಲಿದೆ ಎಂದು ತಿಳಿಸಿದರು.
ಈ ಘಟಿಕೋತ್ಸವವು ಕೇವಲ ಆಚರಣೆಯಲ್ಲ, ಬದಲಾಗಿ ಆತ್ಮಾವಲೋಕನದ ಕ್ಷಣವೂ ಆಗಿದೆ. ಶಿಕ್ಷಣದ ನಿಜವಾದ ಸಾರವು ನಿರಂತರ ಕಲಿಕೆ ಮತ್ತು ವೈಯಕ್ತಿಕ ಬೆಳವಣಿಗೆಯಲ್ಲಿದೆ. ಇದು ಜ್ಞಾನವನ್ನು ಗಳಿಸುವುದರ ಬಗ್ಗೆ ಮಾತ್ರವಲ್ಲ, ನಮ್ರತೆ, ಸತ್ಯತೆ ಮತ್ತು ಇತರರಿಗೆ ಗೌರವಿಸುವ ಶಿಸ್ತಿನ ವ್ಯಕ್ತಿಯಾಗುವುದರ ಕುರಿತಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ 2023-24 ಶೈಕ್ಷಣಿಕ ವರ್ಷದಲ್ಲಿ ತೇರ್ಗಡೆಯಾದ ಒಟ್ಟಾರೆ 1271 ವಿದ್ಯಾರ್ಥಿಗಳಿಗೆ ವಿವಿಧ ಸ್ನಾತಕ ಹಾಗೂ ಸ್ನಾತಕೋತ್ತರ ವಿಷಯಗಳಲ್ಲಿ ಪದವಿ ಪ್ರದಾನ ಮಾಡಲಾಯಿತು. ಅದರಲ್ಲಿ, 871 ವಿದ್ಯಾರ್ಥಿಗಳು ವಿವಿಧ ಸ್ನಾತಕ ಪದವಿಗಳನ್ನು, 311 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಹಾಗೂ 89 ವಿದ್ಯಾರ್ಥಿಗಳು ಡಾಕ್ಟೊರಲ್ ಪದವಿಗಳನ್ನು ಪಡೆದಿದ್ದಾರೆ.
ಡಾಕ್ಟರ್ ಆಫ್ ಫಿಲಾಸೊಫಿ ಪದವಿಯಲ್ಲಿ ಒಟ್ಟು 30 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು, ಅದರಲ್ಲಿ 13 ವಿದ್ಯಾರ್ಥಿನಿಯರು ಹಾಗೂ 03 ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾನಿಲಯದ 14 ಚಿನ್ನದ ಪದಕಗಳನ್ನು, 10 ದಾನಿಗಳ ಚಿನ್ನದ ಪದಕಗಳು, 05 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರ ಹಾಗೂ 01 ಆವರಣದ ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ಸ್ನಾತಕೋತ್ತರ ಪದವಿಯಲ್ಲಿ ಒಟ್ಟು 62 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು. ಇದರಲ್ಲಿ 23 ವಿದ್ಯಾರ್ಥಿನಿಯರು ಹಾಗೂ 05 ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾನಿಲಯ ನೀಡುವ 17 ಚಿನ್ನದ ಪದಕಗಳು ಹಾಗೂ 07 ಆವರಣದ ಚಿನ್ನದ ಪದಕಗಳನ್ನು, 25 ದಾನಿಗಳ ಚಿನ್ನದ ಪದಕಗಳು ಹಾಗೂ 13 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಪಡೆದಿದ್ದಾರೆ.
ಇದಲ್ಲದೆ, ಸ್ನಾತಕ ಪದವಿಯಲ್ಲಿ ಒಟ್ಟು 58 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು. ಇದರಲ್ಲಿ 13 ವಿದ್ಯಾರ್ಥಿನಿಯರು ಹಾಗೂ 06 ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾನಿಲಯ ನೀಡುವ 06 ಚಿನ್ನದ ಪದಕಗಳು, 04 ಆವರಣದ ಚಿನ್ನದ ಪದಕಗಳು, 01 ಕೃವಿವಿಯ ಕ್ರೀಡಾ ಚಿನ್ನದ ಪದಕ, 41 ದಾನಿಗಳ ಚಿನ್ನದ ಪದಕಗಳು ಹಾಗೂ 06 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಪಡೆದಿದ್ದಾರೆ.
ಸಮಾರಂಭದಲ್ಲಿ ಒಟ್ಟಾರೆ 150 ಚಿನ್ನದ ಪದಕ ಹಾಗೂ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ವಿದ್ಯಾರ್ಥಿಗಳು ಪಡೆದಿದ್ದು ಅದರಲ್ಲಿ 49 ವಿಧ್ಯಾರ್ಥಿನಿಯರಿಗೆ ವಿಶ್ವವಿದ್ಯಾನಿಲಯದ 29 ಚಿನ್ನದ ಪದಕ, 66 ದಾನಿಗಳ ಚಿನ್ನದ ಪದಕ, 09 ಆವರಣದ ಚಿನ್ನದ ಪದಕ ಹಾಗೂ 19 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಅದರಂತೆ 14 ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯದ 08 ಚಿನ್ನದ ಪದಕ, 10 ದಾನಿಗಳ ಚಿನ್ನದ ಪದಕ ಹಾಗೂ 05 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು, 03 ಆವರಣದ ಚಿನ್ನದ ಪದಕಗಳು ಹಾಗೂ 01 ಕೃವಿವಿಯ ಕ್ರೀಡಾ ಚಿನ್ನದ ಪದಕಗಳನ್ನು ವಿತರಿಸಲಾಯಿತು.
63 ವಿದ್ಯಾರ್ಥಿಗಳಿಗೆ 126 ಚಿನ್ನದ ಪದಕ
ಒಟ್ಟು 63 ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯದ 50 ಚಿನ್ನದ ಪದಕಗಳನ್ನು, 76 ದಾನಿಗಳ ಚಿನ್ನದ ಪದಕಗಳನ್ನು (50+76=126) ಹಾಗೂ 24 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಬಿ.ಎಸ್ಸಿ (ಆನರ್ಸ್), ಕೃಷಿ ಪದವಿಯಲ್ಲಿ ಕೃಷಿ ಕಾಲೇಜು, ಜಿಕೆವಿಕೆ, ಬೆಂಗಳೂರಿನ ವಿದ್ಯಾರ್ಥಿನಿಯಾದ ಕುಮಾರಿ. ದೀಪ್ತಿ ಟಿ ಎಲ್ ಅತಿ ಹೆಚ್ಚು ಅಂದರೆ 13 ಚಿನ್ನದ ಪದಕಗಳು ಹಾಗೂ 4 ದಾನಿಗಳ ಪ್ರಮಾಣ ಪತ್ರಗಳನ್ನು ಪಡೆದುಕೊಂಡಿದ್ದಾರೆ.
ಅಲ್ಲದೆ, ನಿವೃತ್ತ ಐ.ಎ.ಎಸ್ ಅಧಿಕಾರಿಯಾದ ವಿ. ಬಾಲಸುಬ್ರಮಣಿಯನ್ ಮತ್ತು ಕೃಷಿ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡಿರುವ ಯೋಗೇಂದ್ರ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್.ವಿ. ಸುರೇಶ್, ಆಡಳಿತ ಮಂಡಳಿಯ ಸದಸ್ಯರು, ಶೈಕ್ಷಣಿಕ ಪರಿಷತ್ತಿನ ಸದಸ್ಯರು, ವಿಶ್ರಾಂತ ಕುಲಪತಿಗಳು ಹಾಗೂ ಅಧಿಕಾರಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.