ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಗ್ಯೂ ತಡೆಗಟ್ಟಲು ಹೆಚ್ವಿನ ಮುನ್ನೆಚ್ಚರಿಕೆ ವಹಿಸಲು 700 ಸ್ವಯಂ ಸೇವಕರು ಹಾಗೂ 240 ಆರೋಗ್ಯ ನಿರೀಕ್ಷಣಾಧಿಕಾರಿಗಳನ್ನ ನೇಮಿಸಲಾಗಿದೆ ಎಂದು ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ *ದಿನೇಶ್ ಗುಂಡೂರಾವ್* ರವರು ತಿಳಿಸಿದ್ದಾರೆ.
ಬಿಬಿಎಂಪಿ ವತಿಯಿಂದ ಸರ್. ಪುಟ್ಟಣ್ಣ ಚೆಟ್ಟಿ ಪುರಭವನ (ಟೌನ್ ಹಾಲ್) ನಲ್ಲಿ ರಾಜ್ಯ ಮಟ್ಟದ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿಯೇ ಶೇ. 40 ರಿಂದ 50 ರಷ್ಟು ಡೆಂಗ್ಯೂ ಪ್ರಕರಣಗಳು ಕಂಡುಬರುತ್ತಿದ್ದು, ನಾಗರಿಕರು ಕೂಡ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದರು.
ಪರಿಶೀಲಿಸಿ, ಸ್ವಚ್ಛಗೊಳಿಸಿ, ಮುಚ್ಚಿಡಿ ಎಂಬ ಘೋಷವಾಕ್ಯದೊಂದಿಗೆ ಡೆಂಗ್ಯೂ ಸೋಲಿಸುವ ಅಭಿಯಾನವನ್ನು ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಸಹಯೋಗದಲ್ಲಿ ಪ್ರಾರಂಭಿಸಲಾಗಿದ್ದು, ಸಾರ್ವಜನಿಕ ಸ್ಥಳಗಳು, ನೀರು ನಿಲ್ಲುವ ಪ್ರದೇಶಗಳಲ್ಲಿ ಡೆಂಗ್ಯೂ ತರುವ ಸೊಳ್ಳೆಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ವಿಶೇಷವಾಗಿ ಸಾರ್ವಜನಿಕರು ಸ್ವಯಂ ಸ್ವಚ್ಚತೆಗೆ ಆದ್ಯತೆ ನೀಡಿ, ಸುರಕ್ಷತಾ ಕ್ರಮಗಳನ್ನು ಕೈಗೊಂಡಾಗ ಮಾತ್ರ ಡೆಂಗ್ಯೂ ನಿಯಂತ್ರಣ ಮಾಡಲು ಸಾಧ್ಯ ಎಂದು ಹೇಳಿದರು.
ಸಿಲಿಕಾನ್ ಸಿಟಿ ಡೆಂಗ್ಯೂ ಮುಕ್ತ ನಗರವಾಗಿ ಪರಿವರ್ತನೆ
ಬೆಂಗಳೂರನ್ನು ಡೆಂಗ್ಯೂ ಮುಕ್ತ ನಗರವನ್ನಾಗಿ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಸ್ವಯಂ ಸೇವಕರು, ಆಶಾ ಕಾರ್ಯಕರ್ತೆಯರು ಆರೋಗ್ಯ ಸಿಬ್ಬಂದಿಗಳು, ಎಲ್ಲರೂ ಸೇರಿ ಉತ್ತಮ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
*ಡೆಂಗ್ಯೂ ನಿಯಂತ್ರಣದ ಕುರಿತು ನಾಗರಿಕರಲ್ಲಿ ಜಾಗೃತಿ:*
ಕಾರ್ಯಕ್ರಮಕ್ಕೂ ಮುಂಚೆ ಮಾನ್ಯ ಸಚಿವರು ಚಿಕ್ಕಪೇಟೆ ವ್ಯಾಪ್ತಿಯ ಕುಂಬಾರಗುಂಡಿ ಪ್ರದೇಶದಲ್ಲಿ ಮನೆ ಮನೆಗೆ ತೆರಳಿ ಡೆಂಗ್ಯೂ ವಿರುದ್ಧ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು. ಡೆಂಗ್ಯೂ ಲಾರ್ವಾ ಉತ್ಪತ್ತಿ ತಾಣವಾದ ಶುದ್ಧ ನೀರಿನ ಘಟಕಗಳಾದ ನೀರಿನ ಟ್ಯಾಂಕ್, ಮನೆಯಲ್ಲಿನ ಬಿಂದಿಗೆ, ಹಳೆಯ ಟೈರ್ ಗಳು, ತೆಂಗಿನ ಚಿಪ್ಪುಗಳಲ್ಲಿ *ಈಡಿಸ್ ಸೊಳ್ಳೆ ಲಾರ್ವಾಗಳನ್ನು ಉತ್ಪಿಸುತ್ತದೆ*. ಸಾಧ್ಯವಾದಷ್ಟು ಈ ಎಲ್ಲಾ ತಾಣಗಳನ್ನು ಶುಚ್ಚಿತ್ವ ಕಾಪಾಡಿಕೊಂಡರೆ ನಾವು ಡೆಂಗ್ಯೂ ಸಂಪೂರ್ಣ ಹತೋಟಿಗೆ ತರಲು ಸಾಧ್ಯವಾಗುತ್ತದೆ ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಉದಯ್ ಬಿ. ಗರುಡಾಚಾರ್ ಮಾತನಾಡಿ, ಡೆಂಗ್ಯೂ ಹರಡದಂತೆ ಮಕ್ಕಳು ಅತಿ ಜಾಗರೂಕತೆಯಿಂದ ಆರೋಗ್ಯವಂತರಾಗಿ ಇರಬೇಕು. ಉತ್ತಮ ಆಹಾರವನ್ನು ಸೇವಿಸಿ ಪ್ರತಿಯೊಬ್ಬರೂ ವ್ಯಾಯಾಮಗಳನ್ನು ರೂಢಿಸಿಕೊಳ್ಳಬೇಕಾಗಿ ತಿಳಿಸಿದರು.
ಡೆಂಗಿ ನಿಯಂತ್ರಣಕ್ಕೆ ಅಧಿಕಾರಿಗಳಿಗೆ ಆಯುಕ್ತರ ಸೂಚನೆ
ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ರವರು ಮಾತನಾಡಿ, ಪ್ರತಿಯೊಬ್ಬ ನಾಗರಿಕನೂ ಡೆಂಗೀ ನಿಯಂತ್ರಣ ಕಾರ್ಯದಲ್ಲಿ ಕೈಜೋಡಿಸಿದಲ್ಲಿ ಮಾತ್ರ ಡೆಂಗ್ಯೂ ನಿಯಂತ್ರಣ ಸಾಧ್ಯವಾಗುತ್ತದೆ* ಎಂದು ತಿಳಿಸಿದರು.
ಬೆಂಗಳೂರು ನಗರದ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಹೆಚ್ಚು ಡೆಂಗ್ಯೂ ಪ್ರಕರಣಗಳು ಕಂಡು ಬರುವ ಪ್ರದೇಶಗಳಲ್ಲಿ ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿರುವುದಾಗಿ ತಿಳಿಸಿದರು.
ಈ ವೇಳೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರಾದ ಶಿವಕುಮಾರ್ ಕೆ.ಬಿ, ಎನ್ ಸಿವಿಬಿಡಿಸಿ ನಿರ್ದೇಶಕರಾದ ಡಾ. ತನು ಜೈನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರಾದ ಡಾ. ತ್ರಿವೇಣಿ ಎಂ, ಜಿಎನ್ ಸಿವಿಬಿಡಿಸಿ ಸಹ ನಿರ್ದೇಶಕರಾದ ಡಾ.ರಜನಿ. ಎಂ, ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿಯಾದ ಡಾ: ಎಸ್.ಎಸ್.ಮದನಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು, ಶಾಲಾ ಮಕ್ಕಳು ಹಾಗೂ ಇತರರು ಉಪಸ್ಥಿತರಿದ್ದರು.