ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರವಾಹ ಉಂಟಾಗುವ ಸ್ಥಳಗಳಿಗೆ ಶಾಶ್ವತ ಪರಿಹಾರ ಕ್ರಮ ವಹಿಸಲು *ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಆಡಳಿತಗಾರರಾದ ತುಷಾರ್ ಗಿರಿ ನಾಥ್* ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಲ್ಲಿ ಮಳೆ ಬಾಧಿತ ಪ್ರದೇಶಗಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಇಂದು ವಿಕಾಸಸೌಧದ ಕೊಠಡಿ ಸಂಖ್ಯೆ 422 ರಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಎಲೆಕ್ಟ್ರಾನಿಕ್ ಸಿಟಿ ಹತ್ತಿರ ಪಾಲಿಕೆ ವ್ಯಾಪ್ತಿಗೆ ಬರುವ ನ್ಯಾಷನಲ್ ಹೈವೇ ರಸ್ತೆಯಲ್ಲಿ ಪ್ರವಾಹ ಉಂಟಾಗುವ ಸ್ಥಳಗಳಲ್ಲಿ ನೀರು ನಿಲ್ಲದಂತೆ ಕ್ರಮವಹಿಸಲು ನ್ಯಾಷನಲ್ ಹೈವೇ ಅಧಿಕಾರಿಗಳಿಗೆ ಸೂಚಿಸಿದರು. ಜೊತೆಗೆ ಸೈಡ್ ಡ್ರೈನ್ ಗಳಲ್ಲಿ ಹೂಳೆತ್ತಿ ಸ್ವಚ್ಛತೆ ಕಾಪಾಡಲು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
*ಬಾಕ್ಸ್ ಕಲ್ವರ್ಟ್ ಅಳವಡಿಸಿ:*
ಕೋಗಿಲು ಜಂಕ್ಷನ್ ನಲ್ಲಿ ಜಲಾವೃತವಾಗುವುದನ್ನು ತಪ್ಪಿಸಲು ರಾಜಕಾಲುವೆ ವಿಭಾಗದಿಂದ ಕೂಡಲೇ ಬಾಕ್ಸ್ ಕಲ್ವರ್ಟ್ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಇದೇ ಸ್ಥಳದಲ್ಲಿ ಮೆಟ್ರೋ ಕಾಮಗಾರಿ ಕೂಡಾ ನಡೆಯುತ್ತಿದ್ದು, ಸಂಚಾರಿ ವಿಭಾಗದಿಂದ ಕಾಮಗಾರಿ ನಡೆಸಲು ಅನುಮತಿ ಪಡೆದು ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
*ಜಲಾವೃತವಾಗುವ ರೈಲ್ವೆ ಕೆಳಸೇತುವೆಗಳಲ್ಲಿ ಸೂಕ್ತ ಕ್ರಮ ವಹಿಸಿ:*
ನಗರದಲ್ಲಿ ಜಲಾವೃತವಾಗುವ ರೈಲ್ವೆ ಕೆಳ ಸೇತುವೆಗಳನ್ನು ಪಟ್ಟಿ ಮಾಡಿ, ಆ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆಯಿಂದ ಡ್ರೈನ್ ಮಾಡುವುದರ ಜೊತೆಗೆ ನೀರಿನ ಹರಿವಿನ ಮಟ್ಟದ ಸಾಮರ್ಥ್ಯ ಕಡಿಮೆ ಇದ್ದರೆ ಅಗಲೀಕರಣ ಮಾಡಬೇಕು. ಕಾಮಗಾರಿ ಪೂರ್ಣಗೊಂಡ ನಂತರ ಪಾಲಿಕೆ ಅದನ್ನು ನಿರ್ವಹಣೆ ಮಾಡಲು ಸೂಚಿಸಿದರು.
*ಒಳಚರಂಡಿಗಳಿಂದ ನೀರು ಉಕ್ಕುವುದನ್ನು ತಪ್ಪಿಸಿ:*
ಬನ್ನೆರಘಟ್ಟ ರಸ್ತೆಯಲ್ಲಿ ಜಲಮಂಡಳಿ ವತಿಯಿಂದ ಒಳಚರಂಡಿ ಕಾಮಗಾರಿಗಾಗಿ ರಸ್ತೆ ಅಗೆದಿದ್ದು, ಕಾಮಗಾರಿ ಪೂರ್ಣಗೊಂಡಿದ್ದು, ಇದುವರೆಗೆ ರಸ್ತೆ ಕತ್ತರಿಸಿರುವ ಭಾಗದ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಈ ಸಂಬಂಧ ಕೂಡಲೇ ರಿಸ್ಟೋರೇಶನ್ ಕಾಮಗಾರಿ ಮಾಡಲು ಸೂಚನೆ ನೀಡಿದರು.
ಮಳೆ ಬರುವ ವೇಳೆ ಒಳಚರಂಡಿಯಲ್ಲಿ ಬಹುತೇಕ ಕಡೆ ನೀರಿನ ಹರಿವಿನ ಮಟ್ಟ ಹೆಚ್ಚಾಗಿ, ನೀರು ಉಕ್ಕಿ ಜಲಾವೃತವಾಗುತ್ತಿದೆ. ಅದನ್ನು ತಪ್ಪಿಸುವ ಸಲುವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.
ಮೆಟ್ರೋ ಕಾಮಗಾರಿ ನಡೆಯುತ್ತಿರುವ ಹೊರ ವರ್ತುಲ ರಸ್ತೆಯಲ್ಲಿ ಪಾದಚಾರಿ ಮಾರ್ಗ ದುರಸ್ತಿಯಲ್ಲಿದ್ದು, ರಸ್ತೆ ಬದಿಯಿರುವ ತ್ಯಾಜ್ಯ/ಹೂಳನ್ನು ಕೂಡಲೇ ತೆರವುಗೊಳಿಸಲು ಸೂಚಿಸಿದರು.
ಈ ವೇಳೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ಜಲಮಂಡಳಿ ಅಧ್ಯಕ್ಷರಾದ ರಾಮ್ ಪ್ರಸಾತ್ ಮನೋಹರ್, ಸಂಚಾರ ವಿಭಾಗದ ಪೊಲೀಸ್ ಜಂಟಿ ಆಯುಕ್ತರಾದ ಅನುಚೇತ್, ಪ್ರಧಾನ ಅಭಿಯಂತರರಾದ ಪ್ರಹ್ಲಾದ್, ಮೆಟ್ರೋ, ಬಿಡಿಎ, ಬೆಸ್ಕಾಂ, ರೈಲ್ವೆ ಇಲಾಖೆ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.