ಬೆಂಗಳೂರು: ಮಹಿಳೆಯರ ಉನ್ನತಿಗೆ,ಸಮಸ್ಯೆಗಳಿಗೆ ನಿರಂತರವಾಗಿ ದುಡಿಯುತ್ತಿರುವ ಸಂಸ್ಥೆ ಮಹಿಳಾ ದಕ್ಷತಾ ಸಮಿತಿ. ಇದೀಗ ಸಂಸ್ಥೆಯ ನಿಧಿ ಸಂಗ್ರಹಣೆಗೆ ಯಾದೇ ಎಂಬ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಹಿಳಾ ದಕ್ಷತಾ ಸಂಸ್ಥೆಯ ಉಪಾಧ್ಯಕ್ಷೆ ಉಷಾ ಕಾಮತ್ ಅವರು ತಿಳಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಿಳಾ ದಕ್ಷತಾ ಸಮಿತಿಯು ಮಹಿಳೆಯರ ಮತ್ತು ಮಕ್ಕಳ ಕಲ್ಯಾಣಕ್ಕಾಗಿ 33 ವರ್ಷಗಳಿಗಿಂತ ಹೆಚ್ಚು ಕಾಲ ನಿರಂತರವಾಗಿ ದುಡಿಯುತ್ತಿರುವ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯಾಗಿದೆ. ನಮ್ಮದು ಅಖಿಲ ಭಾರತ ಸಂಘಟನೆಯಾಗಿದ್ದು, ಸಂಸ್ಥೆಯು ಮಹಿಳೆಯರ ಮೇಲೆ ನಡೆಯುವ ವರದಕ್ಷಿಣೆಗಾಗಿ ಕಿರುಕುಳ, ವಧು ದಹನ, ಕೌಟುಂಬಿಕ ಕಿರುಕುಳ ಹಾಗು ಇತರ ಸಾಮಾಜಿಕ ದೌರ್ಜನ್ಯಗಳ ವಿರುದ್ಧ ಹೋರಾಡಲು ನವದೆಹಲಿಯಲ್ಲಿ 1976 ರಲ್ಲಿ ಪ್ರಾರಂಭವಾಯಿತು. ವಾಸ್ತವವಾಗಿ, ಭಾರತದಲ್ಲಿ ಮಹಿಳೆಯರ ಹಕ್ಕಿಗಾಗಿ ಚಳವಳಿಯನ್ನು ಪ್ರಾರಂಭಿಸಿದವರಲ್ಲಿ ಇವರು ಅಗ್ರಜರು ಎಂದರು.
ಇಂತಹ ಸಮಾಜಮುಖಿ ಕೆಲಸಗಳ ಪೋಷಣೆಗೆ ಗಣನೀಯ ಮಟ್ಟದ ಆರ್ಥಿಕ ಸಂಪನ್ಮೂಲಗಳ ಅವಶ್ಯಕತೆಯಿದೆ. ಆದುದರಿಂದ ನಾವು ನಿಧಿಸಂಗ್ರಹಣೆಗಾಗಿ 24/05/2025 ರಂದು ಸಂಜೆ 6 ಗಂಟೆಗೆ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ಪ್ರಸಿದ್ಧ ಗಾಯಕರಾದ ಕಿಶೋರ್ ಕುಮಾರ್ ಮತ್ತು ಆಶಾ ಭೋಂಸ್ಥೆ ಅವರ ಕಾಲಾತೀತ ಸಂಗೀತ ಪರಂಪರೆಯನ್ನು ಆಚರಿಸುವ “ಯಾದೇ” ಎಂಬ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ. ಪ್ರಸಿದ್ಧ ಚಲನಚಿತ್ರ. ದೂರದರ್ಶನ ಮತ್ತು ರಂಗಭೂಮಿ ಕಲಾವಿದರಾದ ಪ್ರಕಾಶ್ ಬೆಳವಾಡಿಯವರ ನಿರೂಪಣೆ ಇದ್ದು, ಪ್ರಸಿದ್ಧ ತಾಳವಾದ್ಯ ವಾದಕ, ಸಂಯೋಜಕ ಮತ್ತು ಪ್ರೋಗ್ರಾಮರ್ ರಾಗಿರುವ ಅರುಣ್ ಕುಮಾರ್ ಬಿ. ಎಸ್. ಅವರು ಈ ರಸಮಂಜರಿ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಜನಪ್ರಿಯ ಸ್ಥಳೀಯ ಗಾಯಕ/ಗಾಯಕಿಯರಾದ ಮೋಹನ್ ಕೃಷ್ಣ, ಗೋವಿಂದಾ ಕರ್ನೂಲ್, ಅಂಕಿತಾ ಕುಂಡು, ಸಮನ್ವಿತಾ ಶರ್ಮಾ ಮತ್ತು ಶ್ರುತಿ ಭೀಡೆ ಹಾಡುಗಳನ್ನು ಹಾಡಲಿದ್ದಾರೆ.
ಕಾರ್ಯಕ್ರಮಕ್ಕೆ ಚಿಕ್ಕದಾಗಿ ಟಿಕೆಟ್ ಮಾಡಲಾಗಿದ್ದು, 499ರಿಂದ 1500ರ ವರೆಗೆ ಇದೆ, ಕಲಾಭಿಮಾನಿಗಳು, ಸಾರ್ವಜನಿಕರು ಸಂಸ್ಥೆಯ ಕೆಲಸಕಾರ್ಯಗಳನ್ನು ಮೆಚ್ಚಿ ಆರ್ಥಿಕ ಸಹಾಯ ಮಾಡಿದರೆ ಮುಂದೆ ಮತ್ತಷ್ಟು ಸಮಾಜ ಮುಖಿ ಕೆಲಸ ಮಾಡಲು ಪ್ರೇರೇಪಣೆ ಆಗುತ್ತದೆ ಎಂದರು. ಟಿಕೆಟುಗಳು Book My show ನಲ್ಲಿಯೂ ಲಭ್ಯವಿದೆ, ಸಂಸ್ಥೆಯಲ್ಲಿಯೂ ನೇರವಾಗಿ ಪಡೆದುಕೊಳ್ಳಬಹುದು ಎಂದು ಮನವಿ ಮಾಡಿದರು.
ಹಿರಿಯ ರಂಗ ಕರ್ಮಿ ಪ್ರಕಾಶ್ ಬೆಳವಾಡಿ ಮಾತನಾಡಿ,ಮಹಿಳಾ ದಕ್ಷತಾ ಸಮಿತಿಯ ಕರ್ನಾಟಕ ಅಧ್ಯಾಯವನ್ನು 1991 ರಲ್ಲಿ ಶರಣಾ ಹೆಗ್ಡೆ ಅವರು ಸಮಾನ ಮನಸ್ಸಿರುವ ಮತ್ತು ಧ್ಯೇಯ ಇರುವ, ಇತರ ಮಹಿಳೆಯರೊಂದಿಗೆ ಅವರ ಮನೆಯ ಗ್ಯಾರೇಜಿನಲ್ಲಿ ಪ್ರಾರಂಭಿಸಿದರು. ಅಂದಿನಿಂದ ಇಂದಿನವರೆಗೆ ಇವರ ಕ್ರಿಯಾತ್ಮಕ ನಾಯಕತ್ವದಲ್ಲಿ ನೊಂದ ಮಹಿಳೆಯರ ಮತ್ತು ಮಕ್ಕಳ ದಾರಿದೀಪವಾಗಿ ಈ ಸಂಸ್ಥೆ ಕಾರ್ಯ ನಿವ್ರಹಿಸುತ್ತಿದೆ. ಯಾರು ಸಹಾ ಇಂತಹ ಕಾರ್ಯಕಗಳನ್ನು ಮಾಡಲು ಸಾಧ್ಯವಾಗದನ್ನು ಮಹಿಳೆಯರು ಮುಂದೆ ನಿಂತು ಮಾಡಿ ತೋರಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಬೆಂಬಲ ನೀಡುವ ಕರ್ತವ್ಯ ನಿಮ್ಮದಾಗಿದೆ, ಸಮಾಜ ಇವರನ್ನು ಗುರುತಿಸಿ ಮನ್ನಣೆ ನೀಡಬೇಕು ಎಂದರು.
ಸಂಸ್ಥೆಯ ಸಮಾಜಮುಖಿ ಕಾರ್ಯಗಳು:
ಕಳೆದ ಕೆಲವು ವರ್ಷಗಳಿಂದ ನಾವು ಈ ನಿಟ್ಟಿನಲ್ಲಿ ಸಮಾಜದಲ್ಲಿ ಉತ್ತಮ ಬದಲಾವಣೆಗಳನ್ನು ತರುವಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತೇವೆ. 2000 ಇಸವಿಯಲ್ಲಿ ದಕ್ಷತಾ ಕುಟುಂಬ ಸಲಹಾ ಕೇಂದ್ರದ ಪ್ರಾರಂಭ. ಶಕ್ತಿ ಸದನ (ಸ್ವಾಧಾರ್ ಗೃಹ) – ದಿಕ್ಕು ತೋಚದ ಮಹಿಳೆಯರು ಮತ್ತು ಮಕ್ಕಳ ತಾತ್ಕಾಲಿಕ ಆಶ್ರಯ. ಇಲ್ಲಿ ಅವರ ಪುನರ್ವಸತಿ ಮಾಡಿ, ಸಬಲೀಕರಿಸಿ, ಸ್ವಾಭಿಮಾನ ಮತ್ತು ಘನತೆಯಿಂದ ಮುಂದಿನ ಜೀವನವನ್ನು ನಡೆಸಲು ಬೇಕಾದಂತ ಎಲ್ಲಾ ರೀತಿಯ ಸಹಾಯವನ್ನು ಮಾಡಿದ್ದಾರೆ. ದೊಡ್ಡಬಳ್ಳಾಪುರದ ಹಾಡೋನಹಳ್ಳಿಯಲ್ಲಿ 2007 ರಲ್ಲಿ ಪ್ರಾಥಮಿಕ ಆರೋಗ್ಯ ಚಿಕಿತ್ಸಾಲಯ ಸ್ಥಾಪನೆ, 2010 ರಲ್ಲಿ ಮಧುಮೇಹ ಚಿಕಿತ್ಸಾಲಯ ಸ್ಥಾಪನೆ. ಗೆದ್ದಲಹಳ್ಳಿ ಮತ್ತು ವಿದ್ಯಾರಣ್ಯಪುರದಲ್ಲಿರುವ ಎರಡು ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿರುತ್ತೇವೆ. ಪ್ರತಿ ವರ್ಷ ಬೆಂಗಳೂರು ಮತ್ತು ಸುತ್ತಮುತ್ತಲಿನ ಸುಮಾರು 30 ಸರ್ಕಾರಿ ಶಾಲೆಗಳಿಗೆ ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳ ವಿತರಣೆ ಮಾಡುತ್ತೇವೆ. ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವ ಸುಮಾರು 300 ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಪ್ರತಿ ವರ್ಷ ವಿದ್ಯಾರ್ಥಿವೇತನ ಕೊಡುತ್ತಿರುವೆವು. ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಸಮಾಜಮುಖಿಯಾಗಿ ನಡೆಸಿಕೊಂಡು ಬರಲಾಗಿದೆ.
33 ವರ್ಷಗಳ ನಂತರ, ನಾವು ಸಮಾಜ ಸೇವಾ ಕ್ಷೇತ್ರದಲ್ಲಿ ಒಂದು ಸ್ನಾನವನ್ನು ಪಡೆದುಕೊಂಡಿದ್ದೇವೆ ಮತ್ತು ಈ ದಿಕ್ಕಿನಲ್ಲಿ ನಮ್ಮ ಪ್ರಯತ್ನಗಳಿಗಾಗಿ ವ್ಯಾಪಕವಾದ ಮನ್ನಣೆ ಮತ್ತು ಪುರಸ್ಕಾರಗಳನ್ನು ಗಳಿಸಿದ್ದೇವೆ ಎಂದು ಹೆಮ್ಮೆಯಿಂದ ಹೇಳಬಹುದು. ನಮಗೆ 2019 ರಲ್ಲಿ ಕರ್ನಾಟಕ ಸರ್ಕಾರವು ಸಮಾಜ ಕಲ್ಯಾಣ ಕ್ಷೇತ್ರದಲ್ಲಿನ ನಮ್ಮ ಅನುಕರಣೀಯ ಸೇವೆಗಾಗಿ “ಕಿತ್ತೂರು ರಾಣಿ ಚೆನ್ನಮ್ಮ” ಪ್ರಶಸ್ತಿಯನ್ನು ನೀಡಿದೆ.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪ್ರದಾನ ಕಾರ್ಯದರ್ಶಿ ಜ್ಯೋತಿ ಬಂದಾರು ಬಂಡಾರಿ ಸೇರಿದಂತೆ ಸಂಸ್ಥೆಯ ಮತ್ತಿತ್ತರ ಪದಾಧಿಕಾರಿಗಳು ಉಪಸ್ಥಿತರಿದ್ದರು.