ಬೆಂಗಳೂರು: ನಗರದಲ್ಲಿ ಮುಂದೆ ಎದುರಾಗಬಹುದಾದ ನೀರಿನ ಸಮಸ್ಯೆ ನಿವಾರಿಸಲು ಇನ್ನಿತರ ಜಲಮೂಲಗಳನ್ನು ಆಶ್ರಮಿಸುವುದು ಅಗತ್ಯ. ವಸತಿ ಸಮುಚ್ಚಯಗಳು, ಬಡಾವಣೆಗಳು, ಸೇನಾ ಸಂಸ್ಥೆಗಳು ಇದೀಗ ಎರಡನೇ ಪೈಪ್ ಲೈನ್ ಅಳವಡಿಕೆಗೆ ಒತ್ತು ನೀಡಬೇಕು. ಇದಕ್ಕಾಗಿ ಆಯಾ ಪ್ರದೇಶಗಳಲ್ಲಿ ಕೊಳವೆ ಬಾವಿ ಜೊತೆಗೆ ಬೂದು ಬಣ್ಣದ ನೀರನ್ನು ಸಂಸ್ಕರಿಸಿ ಬಳಸಿಕೊಳ್ಳಲು ಒತ್ತು ನೀಡಬೇಕು. ಇಂತಹ ಕ್ರಮ ಅಳವಡಿಸಿಕೊಂಡರೆ ಜಲಮಂಡಳಿ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ. ಈ ಬಗ್ಗೆ ಮುಂದಿನ ಮಂಡಳಿ ಸಭೆಯಲ್ಲಿ ಅಗತ್ಯ ತೀರ್ಮಾನ ಕೈಗೊಳ್ಳುವುದಾಗಿ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಹೇಳಿದರು.
ನಗರದ ಕಾವೇರಿ ಭವನದಲ್ಲಿ ಬಿ.ಡಬ್ಲ್ಯು.ಎಸ್.ಎಸ್.ಬಿಯಿಂದ ಆಯೋಜಿಸಿದ್ದ “(Bulk Users) ದೊಡ್ಡ ಮಟ್ಟದ ಕಾವೇರಿ ನೀರು ಬಳಕೆದಾರರ ಸಭೆ” ಉದ್ದೇಶಿಸಿ ಮಾತನಾಡಿದ ಅವರು, ನಗರದ ಗೃಹ ಬಳಕೆದಾರರಿಗೆ ಶೇ 50 ರಷ್ಟು ರಿಯಾಯಿತಿ ದರದಲ್ಲಿ ನೀರು ಪೂರೈಸುತ್ತಿದ್ದೇವೆ. ಒಂದು ಸಾವಿರ ಲೀಟರ್ ನೀರು ತರಲು 50 ರಿಂದ 55 ರೂ ವೆಚ್ಚ ಮಾಡುತ್ತಿದ್ದೇವೆ. 11 ವರ್ಷಗಳಿಂದ ನಾಲ್ಕು ಬಾರಿ ವಿದ್ಯುತ್ ದರ ಹೆಚ್ಚಳವಾಗಿದೆ. ಜಲಮಂಡಳಿಯ 100 ರೂನಲ್ಲಿ 70 ರೂ ವಿದ್ಯುತ್ ಗಾಗಿ ವೆಚ್ಚವಾಗುತ್ತಿದೆ. ಈ ಹಿನ್ನಲೆಯಲ್ಲಿ 11 ವರ್ಷಗಳ ನಂತರ ನೀರಿನ ದರವನ್ನು ಅನಿವಾರ್ಯವಾಗಿ ಏರಿಕೆ ಮಾಡಲಾಯಿತು.
ಬೆಂಗಳೂರು ನಗರಕ್ಕೆ ಬೇರೆ ನದಿ, ಜಲಮೂಲಗಳಿಂದ ನೀರು ಪೂರೈಸುವ ಕುರಿತು ಗಂಭೀರ ಚಿಂತನೆ ನಡೆಯುತ್ತಿದೆ. ವಿದ್ಯುತ್ ಸರಬರಾಜು ಮಂಡಳಿ ನಮಗೆ 6.50 ರೂ ನಂತೆ ವಿದ್ಯುತ್ ಒದಗಿಸುತ್ತಿದೆ. ಗೃಹ ಬಳಕೆ ವಿದ್ಯುತ್ ದರ 5.50 ರೂ ಆಗಿದೆ. ಜಿ.ಎಸ್.ಟಿ ಸೇರಿದರೆ ಜಲಮಂಡಳಿ ವಿದ್ಯುತ್ ದರ ಇನ್ನಷ್ಟು ಹೆಚ್ಚಾಗುತ್ತದೆ. ಹೀಗಾಗಿ ಜಲಮಂಡಳಿ ನಷ್ಟವನ್ನು ಶೇ 50 ರಷ್ಟು ಕಡಿಮೆ ಮಾಡಲು ನಾವು ಸೌರ ವಿದ್ಯುತ್ ಬಳಕೆಗೆ ಒತ್ತು ನೀಡುತ್ತಿದ್ದು, ಶೇ 80 ರಷ್ಟು ಸೌರ ವಿದ್ಯುತ್ ಬಳಸಿಕೊಳ್ಳುವ ಗುರಿ ಇದೆ ಎಂದು ಹೇಳಿದರು.
ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಜಲ ಸಂರಕ್ಷಣೆ ನಿಟ್ಟಿನಲ್ಲಿ ಜಲಮಂಡಳಿ ಆಂದೊಲನ ಮಾಡುತ್ತಿದ್ದು, ನಮ್ಮ ರಚನಾತ್ಮಕ ಕೆಲಸ ನೋಡಿ ಕೇಂದ್ರ ಸರ್ಕಾರ ನಮಗೆ 103 ಕೋಟಿ ರೂ ಮೊತ್ತದ ಬಹುಮಾನ ಘೋಷಿಸಿದೆ. ಇದು ನಮ್ಮ ಬದ್ಧತೆಗೆ ದೊರೆತ ಮನ್ನಣೆಯಾಗಿದೆ. ಬೆಂಗಳೂರು ನಗರದಲ್ಲಿ ಮರಗಳು ಕಡಿಯುತ್ತಿದ್ದು, ಇದೀಗ ಅರಣ್ಯೀಕರಣಕ್ಕೆ ಒತ್ತು ನೀಡಿ ಪರಿಸರ ಸಂರಕ್ಷಿಸಲು ಜನ ಜಾಗೃತಿ ಮೂಡಿಸುತ್ತಿದ್ದೇವೆ. ನಿಸರ್ಗಕ್ಕೆ ನಾವು ಕೃತಜ್ಞತರಾಗಿರಬೇಕು. ಈಗ ಎಚ್ಚೆತ್ತುಕೊಳ್ಳದಿದ್ದರೆ ಉಳಿಗಾಲವಿಲ್ಲ ಎಂದರು. ಕಾವೇರಿ ನದಿ ನೀರು ಹಂಚಿಕೆ ತೀರ್ಪಿನಂತೆ ಬೆಂಗಳೂರಿಗೆ ಪ್ರತಿ ವರ್ಷ 35 ಟಿಎಂಸಿ ನೀರು ದೊರೆಯುತ್ತಿದೆ. ಆದರೆ ನಗರದ 1.50 ಕೋಟಿ ಜನರಿಗೆ ಈ ನೀರು ಸಾಕಾಗುವುದಿಲ್ಲ. ನಗರದಲ್ಲಿ ಅಂತರ್ಜಲ ಕಡಿಮೆಯಾಗುತ್ತಿದ್ದು, 200 ಅಡಿಗಳಿಗೆ ಸಿಗುತ್ತಿದ್ದ ನೀರು ಇದೀಗ 1000 ಅಡಿಗೆ ಹೆಚ್ಚಳವಾಗಿದೆ.
ಈ ಹಿನ್ನಲೆಯಲ್ಲಿ ನಗರದಲ್ಲಿ ಮುಂದೆ ಎದುರಾಗಬಹುದಾದ ನೀರಿನ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಇನ್ನಿತರ ಜಲಮೂಲಗಳನ್ನು ಬಳಕೆ ಮಾಡಿಕೊಳ್ಳುವುದು ಅಗತ್ಯವಿದೆ. ವಸತಿ ಸಮುಚ್ಚಯಗಳು, ಬಡಾವಣೆಗಳು, ಸೇನಾ ಸಂಸ್ಥೆಗಳು ಶುದ್ದು ಕುಡಿಯುವ ನೀರಿನ ಜೊತೆಯಲ್ಲಿಯೇ, ಬೂದು ಮತ್ತು ಸಂಸ್ಕರಿಸಿದ ನೀರಿನ ಬಳಕೆಗೆ ಎರಡನೇ ಕೊಳವೆ ಮಾರ್ಗದ ಅಳವಡಿಸಿಕೊಳ್ಳಬೇಕು. ಇಂತಹ ಕ್ರಮ ಅಳವಡಿಸಿಕೊಳ್ಳುವವರಿಗೆ ಜಲಮಂಡಳಿ ವತಿಯಿಂದ ಪ್ರೋತ್ಸಾಹಧನ ನೀಡಲು ಕ್ರಮ ಕೈಗೊಳ್ಳುವಂತೆ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಮುಂದಿನ ಮಂಡಳಿ ಸಭೆಯಲ್ಲಿ ಸೂಕ್ತ ನಿರ್ದೇಶಗಳನ್ನು ಜಲಮಂಡಳಿ ನೀಡಲಿದೆ ಎಂದು ಡಾ. ರಾಮ್ ಪ್ರಸಾತ್ ಮನೋಹರ್ ಹೇಳಿದರು
ಜಲಮಂಡಳಿ ವೈಜ್ಞಾನಿಕವಾಗಿ ನೀರು ಸರಬರಾಜು ಮಾಡಲು ಭಾರತೀಯ ವಿಜ್ಞಾನ ಮಂದಿರದ ಜೊತೆ ಎಂಒಯು ಮಾಡಿಕೊಂಡಿದ್ದೇವೆ. ನಮ್ಮ ಸಂಸ್ಥೆ ಹಗಲು ರಾತ್ರಿ ದುಡಿದು ಜನರಿಗೆ ನೀರು ಸರಬರಾಜು ಮಾಡುತ್ತಿದೆ. ಮಳೆ ನೀರಿನಲ್ಲಿ ಶೇ 30 ರಿಂದ ಶೇ 40 ರಷ್ಟು ನೀರು ವ್ಯರ್ಥವಾಗುತ್ತಿದೆ. ಮೂರು ಲೀಟರ್ ಕುಡಿಯಲು, ಅಡುಗೆಗೆ 10 ಲೀಟರ್, ಸ್ನಾನಕ್ಕೆ 30 ಲೀಟರ್ ನೀರು ಬಳಕೆ ಮಾಡಬೇಕು. ಗ್ರೇ ವಾಟರ್ ನೀರು ಬಳಕೆ ವ್ಯವಸ್ಥೆಯನ್ನು ಜಾರಿಗೆ ತರುತ್ತಿದ್ದೇವೆ.
ಸಿಂಗಾಪುರ್ ನೀರು ಸರಬರಾಜು ಮಂಡಳಿಯಿಂದ ಸರಬರಾಜು ಮಾಡುವ ಒಂದು ಲೀಟರ್ ನೀರಿನ ದರ ನಮ್ಮ ಸಾವಿರ ಲೀಟರ್ ನೀರಿನ ದರದಷ್ಟಿದೆ. ವಸತಿ ಸಮುಚ್ಚಯಗಳು ಕೊಳವೆ ಬಾವಿಗಳನ್ನು ನಂಬಿಕೊಳ್ಳಬಾರದು. ಯಾವಾಗ ಬೇಕಾದರೂ ಅದು ಬತ್ತಿಹೋಗಬಹುದು. ಹೀಗಾಗಿ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ. ನೀರಿನ ಬಳಕೆ ಕಡಿಮೆ ಮಾಡಿ, ಮರುಬಳಕೆ ಮಾಡಬೇಕು. ಸೋರಿಕೆ ಇದ್ದರೆ ಹೊಸ ನಲ್ಲಿಗಳನ್ನು ಅಳವಡಿಸಿಕೊಳ್ಳಬೇಕು. ವಸತಿ ಸಮುಚ್ಚಯಗಳಲ್ಲಿ ಎಸ್.ಟಿ.ಪಿ ಇಲ್ಲದಿದ್ದರೆ ನಾವೇ ನಿಮ್ಮಲ್ಲಿಗೆ ಬಂದು ಅಳವಡಿಕೆಗೆ ನೆರವಾಗುತ್ತೇವೆ. ಜಲಮಂಡಳಿ 34 ಎಸ್.ಟಿ.ಪಿಗಳನ್ನು 4 ಸ್ಟಾರ್ ಹಂತಕ್ಕೆ ಮೇಲ್ದರ್ಜೆಗೇರಿಸಿದ ಪರಿಣಾಮ ಕೇಂದ್ರದಿಂದ 103 ಕೋಟಿ ರೂ ಮೊತ್ತವನ್ನು ಪ್ರಶಸ್ತಿ ರೂಪದಲ್ಲಿ ಪಡೆದಿದ್ದೇವೆ.
ನಗರದಲ್ಲಿ ನಾವು ಬಿಐಎಸ್ ಗುಣಮಟ್ಟದ ನೀರು ನೀಡುತ್ತಿದ್ದು, ನೀರು ಸಂರಕ್ಷಣೆಗೆ ನಮ್ಮ ಅಭ್ಯಾಸಗಳನ್ನು ತಿದ್ದಿಕೊಳ್ಳಬೇಕು. ಮಳೆ ನೀರು ವ್ಯರ್ಥವಾಗದಂತೆ ನಿಸರ್ಗಕ್ಕೆ ವಂಚನೆ ಮಾಡಿದಂತೆ ಮುನ್ನಡೆಬೇಕು ಎಂದು ಡಾ. ರಾಮ್ ಪ್ರಸಾತ್ ಮನೋಹರ್ ಕರೆ ನೀಡಿದರು.