ಬೆಂಗಳೂರು: ರಾಮಯ್ಯ ಮೆಮೋರಿಯಲ್ ಆಸ್ಪತ್ರೆಗೆ ಜಂಟಿ ಕಮಿಷನ್ ಇಂಟರ್ನ್ಯಾಷನಲ್(JCI) ಮಾನ್ಯತೆ ಸಿಕ್ಕಿದೆ.
ಜೆಸಿಐ ಅಕ್ರೆಡಿಟೇಶನ್ ಗೋಲ್ಡ್ ಸೀಲ್ ಆಫ್ ಅಪ್ರೂವಲ್ ಗುಣಮಟ್ಟದ ಸಂಕೇತವಾಗಿದ್ದು, ಸುರಕ್ಷಿತ ಮತ್ತು ಪರಿಣಾಮಕಾರಿ ರೋಗಿ ಆರೈಕೆಯನ್ನು ಒದಗಿಸುವ ಸಂಸ್ಥೆಯ ಬದ್ಧತೆಯನ್ನು ತೋರಿಸುತ್ತದೆ. ಆ ಮೂಲಕ ಜಾಗತಿಕ ಮಟ್ಟದಲ್ಲಿ ಜೆಸಿಐ ಮಾನ್ಯತೆ ಪಡೆದಿರುವ ಆಸ್ಪತ್ರೆಗಳ ಪಟ್ಟಿಗೆ ರಾಮಯ್ಯ ಮೆಮೋರಿಯಲ್ ಆಸ್ಪತ್ರೆ ಸೇರ್ಪಡೆಯಾಗಿದೆ. ಇದು ಆರೋಗ್ಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲನ್ನೇ ಸೃಷ್ಟಿಸಿದೆ.
ಆಸ್ಪತ್ರೆಯ ಗುಣಮಟ್ಟಕ್ಕೆ ಸಿಕ್ಕ ಮಾನ್ಯತೆಯಾಗಿದೆ
ರಾಮಯ್ಯ ಮೆಮೋರಿಯಲ್ ಆಸ್ಪತ್ರೆ ಜಾಗತಿಕ ಮಟ್ಟದಲ್ಲಿರುವ ಮಾನದಂಡಗಳ ಪ್ರಕಾರ ಸೌಲಭ್ಯಗಳನ್ನು ಹೊಂದಿರುವುದನ್ನು ಪರಿಗಣಿಸಿ ಮಾನ್ಯತೆ ನೀಡಲಾಗಿದೆ. ಆಸ್ಪತ್ರೆಯ ಗುಣಮಟ್ಟ, ಬದ್ಧತೆ, ಸುರಕ್ಷತೆಯ ಮೂಲಕ ರೋಗಿಯ ಆರೈಕೆ ಮಾಡುತ್ತಿರುವುದಕ್ಕೆ ಪ್ರಮಾಣೀಕರಿಸಿದಂತಾಗಿದೆ.
ಜೆಸಿಐ ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯನ್ನು ಸಮೀಕ್ಷೆಗೆ ಒಳಪಡಿಸಿತ್ತು. 15 ಚಾಪ್ಟರ್, 237 ಮಾನದಂಡಗಳು 1,094 ಮಾನಕಗಳ ಮೂಲಕ ಆಸ್ಪತ್ರೆಯನ್ನು ಸಂಪೂರ್ಣವಾಗಿ ಮೌಲ್ಯಮಾಪನಕ್ಕೆ ಒಳಪಡಿಸಿತ್ತು. ಗುಣಮಟ್ಟತೆ, ರೋಗಿಯ ಸುರಕ್ಷತೆ, ರೋಗಿಯ ಆರೈಕೆ, ಔಷಧ ನಿರ್ವಹಣೆ, ಮುನ್ನೆಚ್ಚರಿಕೆ ಕ್ರಮ, ಅಂತಾರಾಷ್ಟ್ರೀಯ ರೋಗಿಗಳ ಆರೈಕೆಯ ಗುರಿ, ಶಸ್ತ್ರ ಚಿಕಿತ್ಸೆ, ಅರವಳಿಕೆ ಶಿಷ್ಠಾಚಾರ, ಗುಣಮಟ್ಟತೆ ಪ್ರಗತಿ, ಸಿಬ್ಬಂದಿ ತರಬೇತಿ ಮತ್ತು ಶಿಕ್ಷಣ ಈ ಎಲ್ಲಾ ಅಂಶಗಳನ್ನು ಮಾನದಂಡವಾಗಿಟ್ಟುಕೊಂಡು ಜೆಸಿಐ ತನ್ನ 8ನೇ ಆವೃತ್ತಿಯಲ್ಲಿ ಈ ಮಾನ್ಯತೆಯನ್ನು ಘೋಷಣೆ ಮಾಡಿದೆ
ಇದರ ಜೊತೆಗೆ ಸ್ಟ್ರೋಕ್ ಹಾಗೂ ಎದೆ ನೋವು ಕೇಂದ್ರದಲ್ಲಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಅಮೆರಿಕ ಸ್ಟ್ರೋಕ್ ಅಸೋಸಿಯೇಷನ್ (ಎಎಸ್ಎ) ಅಮೇರಿಕನ್ ಹಾರ್ಟ್ ಅಸೋಸಿಯೇಷನ್ (ಎಎಚ್ಎ) ಪ್ರಮಾಣೀಕರಿಸಿದೆ.
ಈ ಕುರಿತು ಮಾತನಾಡಿ ಗೋಕುಲ ಎಜುಕೇಷನ್ ಫೌಂಡೇಷನ್(ಮೆಡಿಕಲ್) ಅಧ್ಯಕ್ಷರಾದ ಡಾ.ಎಂ.ಆರ್.ಜಯರಾಂ ಮಾತನಾಡಿ , “ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯು ಗುಣಮಟ್ಟತೆ, ರೋಗಿಯ ಸುರಕ್ಷತೆ, ರೋಗಿಯ ಆರೈಕೆ, ಔಷಧ ನಿರ್ವಹಣೆ, ಮುನ್ನೆಚ್ಚರಿಕೆ ಕ್ರಮ, ಅಂತಾರಾಷ್ಟ್ರೀಯ ರೋಗಿಗಳ ಆರೈಕೆಯ ಗುರಿ, ಶಸ್ತ್ರ ಚಿಕಿತ್ಸೆ, ಅರವಳಿಕೆ ಶಿಷ್ಠಾಚಾರ, ಗುಣಮಟ್ಟತೆ ಪ್ರಗತಿ, ಸಿಬ್ಬಂದಿ ತರಬೇತಿ ಮತ್ತು ಶಿಕ್ಷಣ ಈ ಎಲ್ಲಾ ಅಂಶಗಳನ್ನು ಮಾನದಂಡವಾಗಿಟ್ಟುಕೊಂಡು ಜೆಸಿಐ ತನ್ನ 8ನೇ ಆವೃತ್ತಿಯಲ್ಲಿ ಈ ಮಾನ್ಯತೆಯನ್ನು ಘೋಷಣೆ ಮಾಡಿದೆ. ಇದು ನಮಗೆ ಹೆಮ್ಮೆ ತಂದಿದೆ, ಮುಂದಿನ ದಿನಗಳಲ್ಲಿ ಉತ್ತಮ ಕೆಲಸಗಳನ್ನು ಮಾಡಲು ಪ್ರೇರೇಪಣೆ ಸಿಕ್ಕಂತೆ ಆಗುತ್ತದೆ.ಸಿಬ್ಬಂದಿ ವರ್ಗದ ಶ್ರಮವನ್ನು ನಾವು ಮರೆಯುವಂತಿಲ್ಲ. ಈ ಮಾನ್ಯತೆ ದೊರೆಯಲು ಸಹಕರಿಸಿದ ಹಿರಿಯ ವೈದ್ಯರ ತಂಡವನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ” ಎಂದಿದ್ದಾರೆ.
ಗೋಕುಲ ಎಜುಕೇಷನ್ ಫೌಂಡೇಷನ್ನ(ಮೆಡಿಕಲ್) ಹೆಲ್ತ್ ಕೇರ್ ಸರ್ವೀಸ್ ಮುಖ್ಯ ಕಾರ್ಯನಿರ್ವಾಹಕ ಡಾ.ನಾಗೇಂದ್ರ ಸ್ವಾಮಿ ಎಸ್.ಸಿ., ಮಾತನಾಡಿ, “ಜಾಗತಿಕ ಮಾನದಂಡಗಳಿಗೆ ಸರಿಹೊಂದುವ ವಿಶ್ವಾಸಾರ್ಹ ಮತ್ತು ಗೌರವಪೂರ್ಣ ಆರೈಕೆ ಪ್ರತಿಯೊಬ್ಬ ರೋಗಿಗೂ ಲಭ್ಯವಾಗಬೇಕೆಂಬ ನಮ್ಮ ಆಶಯವನ್ನು ಈ ಮಾನ್ಯತೆ ದೃಢಪಡಿಸುತ್ತದೆ. ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯ ಇತಿಹಾಸದಲ್ಲಿ ಇದು ಮುಖ್ಯವಾಗಿದೆ. ಭಾರತದಲ್ಲಿ ಎನ್.ಎ.ಬಿ.ಎಚ್ ಮಾನ್ಯತೆ ಹೊಂದಿರುವ 1500 ಆಸ್ಪತ್ರೆಗಳ ಪೈಕಿ ರಾಮಯ್ಯ ಮೆಮೋರಿಯಲ್ ಆಸ್ಪತ್ರೆ ಕೂಡ ಒಂದಾಗಿದೆ. ಇನ್ನೂ ಭಾರತದಲ್ಲಿ ಜೆಸಿಎ ಮಾನ್ಯತೆ ಪಡೆದಿರುವ 53 ಆಸ್ಪತ್ರೆಗಳಲ್ಲಿ ನಮ್ಮ ಆಸ್ಪತ್ರೆ ಸಹ ಒಂದಾಗಿದೆ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ ಎನಿಸುತ್ತದೆ” ಎಂದರು.