ಬೆಂಗಳೂರು: ಸಾವಿರಕ್ಕೂ ಹೆಚ್ಚು ದಿವಸಗಳ ಕಾಲದ ದೇವನಹಳ್ಳಿಯ ರೈತರ ಹೋರಾಟ ಕೊನೆಗೂ ಜಯ ಸಿಕ್ಕಿದೆ. ರೈತ ಶಕ್ತಿ ಎಷ್ಟು ಪ್ರಬಲವಾಗಿದೆ ಎಂಬುದಕ್ಕೆ ಇತ್ತೀಚಿನ ದಿನಮಾನಗಳಲ್ಲಿ ಈ ಹೋರಾಟ ಸಾಕ್ಷಿಭೂತವಾಗಿದೆ. ಇವರುಗಳ ಹೋರಾಟದಲ್ಲಿ ಆಮ್ ಆದ್ಮಿ ಪಕ್ಷವು ನಿರಂತರವಾಗಿ ಜೊತೆಯಲ್ಲಿತ್ತು. ಶಾಂತಿಯುತ ಹೋರಾಟಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ರೈತ ಹೋರಾಟಗಾರರ ಭಾವನೆಗಳಿಗೆ ಗೌರವ ನೀಡಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣ ಹಿಂಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈ ಮೂಲಕ ಶ್ಲಾಘನೆ ವ್ಯಕ್ತಪಡಿಸುತ್ತಿದ್ದೇನೆ” ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಮುಂದುವರೆದು ಮಾತನಾಡಿದ ಮುಖ್ಯಮಂತ್ರಿ ಚಂದ್ರು ” ಕೈಗಾರಿಕೆಗಳ ಅಭಿವೃದ್ಧಿಯ ನೆಪದಲ್ಲಿ ತಲೆತಲಾಂತರದಿಂದ ಕೃಷಿ ಬದುಕನ್ನೇ ಅನುಸರಿಸಿಕೊಂಡು, ಫಲವತ್ತಾದ ಬೆಳೆಗಳನ್ನು ಬೆಳೆಯುತ್ತಿದ್ದ ದೇವನಹಳ್ಳಿಯ ಚನ್ನರಾಯಪಟ್ಟಣದ ಸಾವಿರಾರು ಎಕರೆ ಇಂದು ರಿಯಲ್ ಎಸ್ಟೇಟ್ ಮಾಫಿಯಾಗಳ ಕಪಿಮುಷ್ಠಿಯಿಂದ ಹೊರ ಬಿದ್ದಿದೆ. ಇನ್ನು ಮುಂದಾದರು ಯಾವುದೇ ಸರ್ಕಾರಗಳು ಬರಡು ಭೂಮಿಗಳನ್ನು ಆಯ್ಕೆ ಮಾಡಿಕೊಂಡು ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗಗಳನ್ನು ನೀಡಬೇಕು.
ರೈತರ ಈ ಶಾಂತಿಯುತ ಹೋರಾಟ ನಮ್ಮ ದೇಶಕ್ಕೆ ಮಾದರಿಯಾಗಿದೆ. ಯಾವುದೇ ರಕ್ತಪಾತಗಳಿಲ್ಲದೆ ಕೊನೆಗೂ ರೈತರ ಹೋರಾಟಕ್ಕೆ ಜಯ ಸಿಕ್ಕಿದೆ. ಆಮ್ ಆದ್ಮಿ ಪಕ್ಷವು ಸದಾಕಾಲ ಕೈಗಾರಿಕೆಗಳ ಅಭಿವೃದ್ಧಿಯ ನೆಪದಲ್ಲಿ ಫಲವತ್ತಾದ ಕೃಷಿ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಇಂತಹ ಕುತಂತ್ರಗಳಿಗೆ ವಿರೋಧವನ್ನು ವ್ಯಕ್ತಪಡಿಸುತ್ತದೆ. ರೈತ ಹೋರಾಟದಲ್ಲಿ ಸದಾಕಾಲ ಜೊತೆಯಲ್ಲಿ ಇರುತ್ತದೆ ” ಎಂದು ತಿಳಿಸಿದರು.