ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ರಾಷ್ಟ್ರೀಯ ಕೆಡೆಟ್ ಕಾಪ್ಸ್, ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೆಡ್ಕ್ರಾಸ್ ಯುವ ಘಟಕದ ಸಂಯುಕ್ತ ಆಶ್ರಯದಲ್ಲಿ ಜಿಕೆವಿಕೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರಕ್ಕೆ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ: ಎಸ್.ವಿ. ಸುರೇಶ ಅವರು ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾನಾಡುತ್ತಾ ಆರೋಗ್ಯವೇ ಭಾಗ್ಯ ಎಂಬ ನಾನ್ನುಡಿಯಂತೆ ರಕ್ತದಾನ ಎಂದರೆ ಒಬ್ಬ ವ್ಯಕ್ತಿಗೆ ಜೀವದಾನ ಮಾಡಿದಂತೆ, ಅದು ದಾನಗಳಲ್ಲೇ ಅತ್ಯಂತ ಶ್ರೇಷ್ಠದಾನವಾಗಿದೆ ಎಂದು ತಿಳಿಸಿದರು.
ವೈದ್ಯಲೋಕ ಸಾಕಷ್ಟು ಮುಂದುವರೆದಿದ್ದರೂ ಸಹ ಕೃತಕರಕ್ತ ಸೃಷ್ಠಿಸಲು ಸಾಧ್ಯವಾಗಿಲ್ಲ. ಭಾರತದಲ್ಲಿ ಪ್ರತಿ ವರ್ಷ 5 ಕೋಟಿ ಯೂನಿಟ್ ರಕ್ತ ಬೇಕಾಗುತ್ತದೆ. ಈ ಹಿನ್ನಲೆಯಲ್ಲೆ ವಿಶ್ವದ ಎಲ್ಲಾ ರಾಷ್ಟ್ರಗಳ ಸರ್ಕಾರಗಳು, ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಸಂಘ ಸಂಸ್ಥೆಗಳು ರಕ್ತದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೃಷಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಶಿಬಿರದಲ್ಲಿ ಒಟ್ಟು 135 ಯೂನಿಟ್ ರಕ್ತದಾನ ಮಾಡಲಾಯಿತು. ರಕ್ತದಾನದ ಮಹತ್ವವನ್ನು ತಿಳಿಸುತ್ತಾ ಉಚಿತ ಆರೋಗ್ಯ ತಪಾಸಣೆ, ರಕ್ತದೊತ್ತಡ, ಸಕ್ಕರೆ ಕಾಯಿಲೆ, ದೇಹದತೂಕ, ಹೃದಯಾಘಾತದ ಲಕ್ಷಣಗಳು, ಹೀಮೋಗ್ಲೋಬಿನ್ ಪ್ರಮಾಣ ಮುಂತಾದ ಲಕ್ಷಣಗಳ ಬಗ್ಗೆ ಅರಿವು ಮೂಡಿಸಲಾಯಿತು. ರಕ್ತದಾನ ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೆಂಗಳೂರಿನ ಯುತ್ ರೆಡ್ ಕ್ರಾಸ್ ಸಂಸ್ಥೆಯ ಸಲಹೆಗಾರರಾದ ಡಾ: ರಾಜುಚಂದ್ರಶೇಖರ್ ಅವರು ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಆರೋಗ್ಯ ತುಂಬಾ ಮುಖ್ಯವಾಗಿದ್ದು ಉತ್ತಮ ಆರೋಗ್ಯವಿದ್ದರೆ ವಿದ್ಯಾಭ್ಯಾಸದಲ್ಲಿ ಏಳಿಗೆ ಸಾಧಿಸಲು ಸಾಧ್ಯಾಗುತ್ತದೆ ಮತ್ತು ಸಂಸ್ಕರಣಾ ಆಹಾರ ಪದ್ಧತಿ, ಒತ್ತಡ, ನಿದ್ರೆ ಕೊರತೆ ಇತ್ಯಾದಿ ಅರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.
ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ, ಇದು ವಿದ್ಯಾರ್ಥಿಗಳಿಗೆ ಸಾಮಾಜಿಕ ಜವಾಬ್ದಾರಿ ಅರಿಯುವ ಅವಕಾಶವನ್ನೂ ನೀಡಿ ರಕ್ತದಾನ ಮಾಡುವ ಮೂಲಕ ಮಾನವೀಯತೆಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬಹುದು. ವಿದ್ಯಾರ್ಥಿಗಳ ಆರೋಗ್ಯ ಸಂಸ್ಕøತಿ ಮತ್ತು ಸಮಾಜಮುಖಿ ಮನೋಭಾವನೆಯನ್ನು ಬೆಳೆಸಲು ಇಂತಹ ಶಿಬಿರಗಳು ಸಹಾಯವಾಗುತ್ತವೆ ಎಂದು ತಿಳಿಸಿದರು.
ಬೆಂಗಳೂರಿನ ರೆಫೆರೆಲ್ ಲ್ಯಾಫ್ಸ್ ರೋಗಶಾಸ್ತ್ರ ಸಲಹೆಗಾರರಾದ ಡಾ: ಶಿಲ್ಪಶ್ರೀ ದೀಕ್ಷಿತ್ ಅವರು ಮಾತನಾಡಿ, 18 ರಿಂದ 60 ವರ್ಷದವರೆಗಿನ ಆರೋಗ್ಯವಂತ ವ್ಯಕ್ತಿಗಳು ಯಾರು ಬೇಕಾದರೂ ರಕ್ತದಾನ ಮಾಡಬಹುದು. ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿ ಆಗುತ್ತದೆ ಹಾಗೂ ಉತ್ತಮ ಆರೋಗ್ಯ ಹೊಂದಬಹುದು. ಇದರಿಂದ ದಾನಿಯ ಕಾರ್ಯತತ್ಪರತೆ ಹಾಗೂ ಜ್ಞಾಪಕಶಕ್ತಿ ಹೆಚ್ಚುತ್ತದೆ. ದೇಹದಲ್ಲಿ ಕೆಟ್ಟ ಕೊಬ್ಬಿನ ಅಂಶ ಕಡಿಮೆ ಮಾಡುವ ಮೂಲಕ ಹೃದಯಾಘಾತ ಆಗುವುದನ್ನು ಶೇ.80ರಷ್ಟು ಕಡಿಮೆ ಮಾಡುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾನಿಲಯದ ಅಧಿಕಾರಿಗಳಾದ ಡಾ.ಎನ್.ಬಿ. ಪ್ರಕಾಶ್, ಡೀನ್(ಕೃಷಿ), ಡಾ: ಕೆ.ಎಸ್. ರಾಜಶೇಖರಪ್ಪ, ವಿಶೇಷ ಅಧಿಕಾರಿಗಳು, ಕೃಷಿ ಇಂಜಿನಿಯರಿಂಗ್ ಕಾಲೇಜು, ಡಾ: ಮೋಹನ್ ಈಶ್ವರ್ ನಾಯಕ್, ಡೀನ್ (ವಿದ್ಯಾರ್ಥಿಕಲ್ಯಾಣ), ಡಾ: ಎಸ್.ಎನ್. ನಾಗೇಶ ಮತ್ತು ಡಾ: ಪಿ. ಭವಾನಿ ಉಪಸ್ಥಿತರಿದ್ದರು.