ಬೆನಗಳುರು: ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದು, ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ಹಾಗೂ ಕೇಂದ್ರದ ಮಂತ್ರಿಗಳು ಇದರ ವಿರುದ್ಧ ಧ್ವನಿ ಎತ್ತಬೇಕಾಗಿತ್ತು. ಕರ್ನಾಟಕದಿಂದ ಐವರು ಕೇಂದ್ರ ಸಚಿವರಾಗಿದ್ದಾರೆ. ರಾಜ್ಯದ ವಿಚಾರ ಬಂದಾಗ ಇವರುಗಳು ಧ್ವನಿ ಎತ್ತುತ್ತಿಲ್ಲ. ಶೋಭಾ ಕರಂದ್ಲಾಜೆ ಅವರು ಕಾರ್ಮಿಕ ಹಾಗೂ ಸಣ್ಣ ಕೈಗಾರಿಕೆ ಎರಡು ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶೋಭಾ ಕರಂದ್ಲಾಜೆ ಅವರು ರಾಜ್ಯದಲ್ಲಿ ಧಾರ್ಮಿಕ ವಿಚಾರವಾಗಿ ಬೆಂಕಿ ಹಚ್ಚಲು ಸಿಕ್ಕ ಎಲ್ಲಾ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಆದರೆ ರಾಜ್ಯದ ಪರವಾಗಿ ಒಂದು ದಿನವೂ ಧ್ವನಿ ಎತ್ತಿಲ್ಲ.
2025-26ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಕಾರ್ಮಿಕ ಇಲಾಖೆಗೆ 32,646 ಕೋಟಿ ಅನುದಾನ ಹಂಚಿಕೆಯಾಗಿದೆ. ನಮ್ಮ ರಾಜ್ಯದ ಸಚಿವರಾಗಿ ಶೋಭ ಕರಂದ್ಲಾಜೆ ಅವರು ಯಾವ ವಿಶೇಷ ಯೋಜನೆ ತಂದಿದ್ದಾರೆ? ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಕಾರ್ಮಿಕ ಸಚಿವರಾಗಿದ್ದಾಗ ಇಎಸ್ಐ ಆಸ್ಪತ್ರೆ, ರೈಲ್ವೇ ಯೋಜನೆಗಳು, ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲು ಆರ್ಟಿಕಲ್ 371ಜೆ ಜಾರಿಗೊಳಿಸಿದರು. ಇಂತಹ ಯಾವ ಕಾರ್ಯಕ್ರಮವನ್ನು ಶೋಭಾ ಕರಂದ್ಲಾಜೆ ನೀಡಿದ್ದಾರೆ?
2021ರಿಂದ 2023ರವರೆಗೆ ಶೋಭಾ ಕರಂದ್ಲಾಜೆ ಅವರು ಕೃಷಿ ಇಲಾಖೆ ರಾಜ್ಯ ಸಚಿವರಾಗಿ ಕೆಲಸ ಮಾಡಿದ್ದು, ಕರ್ನಾಟಕಕ್ಕೆ ಯಾವುದೇ ಯೋಜನೆ ತಂದಿಲ್ಲ. 2023-2024ರಲ್ಲಿ ಅವರು ಆಹಾರ ಇಲಾಖೆ ರಾಜ್ಯ ಸಚಿವರಾಗಿದ್ದು, ಕರ್ನಾಟಕಕ್ಕೆ ಯಾವುದೇ ಯೋಜನೆ ನೀಡಿಲ್ಲ. ಕೇಂದ್ರ ಸಚಿವರಾಗಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಪತ್ರ ಬೆರೆಯುವುದು, ಧಾರ್ಮಿಕ ವಿಚಾರವಾಗಿ ಮಾತನಾಡುವುದು ಬಿಟ್ಟರೆ ರಾಜ್ಯದ ಅಭಿವೃದ್ಧಿ ಹಾಗೂ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತುತ್ತಿಲ್ಲ ಯಾಕೆ? ಕೇಂದ್ರ ಕಾರ್ಮಿಕ ಇಲಾಖೆಯಲ್ಲಿ ಶೋಭಾ ಕರಂದ್ಲಾಜೆ ಅವರು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದರೆ ನಮ್ಮ ರಾಜ್ಯದ ಯುವಕರಿಗೆ ಹೆಚ್ಚು ಉದ್ಯೋಗ ಕಲ್ಪಿಸುವ ಅವಕಾಶಗಳಿವೆ. ಆದರೆ ಈ ಬಗ್ಗೆ ಶೋಭಾ ಅವರು ಯಾವುದೇ ರೀತಿಯ ಧ್ವನಿ ಎತ್ತಿಲ್ಲ. ಶೋಭಾ ಕರಂದ್ಲಾಜೆ ಅವರು ತಮ್ಮ ಇಲಾಖೆಯಿಂದ ರಾಜ್ಯಕ್ಕೆ ತಂದಿರುವ ವಿಶೇಷ ಅನುದಾನಗಳೆಷ್ಟು ಎಂಬುದನ್ನು ಮಾಹಿತಿ ನೀಡಬೇಕು ಎಂದು ಒತ್ತಾಯಿಸುತ್ತೇನೆ.
ರಾಜ್ಯದಲ್ಲಿ ಕಾರ್ಮಿಕ ಸಚಿವರಾಗಿರುವ ಸಂತೋಷ್ ಲಾಡ್ ಅವರು ಅನೇಕ ಯೋಜನೆಗಳ ಮೂಲಕ ಕಾರ್ಮಿಕರ ಬದುಕನ್ನು ಹಸನು ಮಾಡುವ ಕೆಲಸ ಮಾಡುತ್ತಿದ್ದು, ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರದಿಂದ ಹೆಚ್ಚು ಅನುದಾನ ಸಿಕ್ಕರೆ ರಾಜ್ಯದ ಕಾರ್ಮಿಕರ ಕಲ್ಯಾಣಕ್ಕೆ ಅನುಕೂಲವಾಗುತ್ತದೆ. ಇಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ವೈಫಲ್ಯವನ್ನು ಜನರ ಮುಂದೆ ತೆರೆದಿಡುತ್ತಿದ್ದು, ಇದೇ ರೀತಿ ಮುಂದಿನ ದಿನಗಳಲ್ಲಿ ಇತರೆ ಕೇಂದ್ರ ಸಚಿವರ ವೈಫಲ್ಯಗಳನ್ನು ಬಹಿರಂಗಪಡಿಸುತ್ತೇವೆ.
ಇನ್ನು ಕೆಪಿಸಿಸಿ ಕಾನೂನು ಘಟಕದಿಂದ ಆಗಸ್ಟ್ 1 ಹಾಗೂ ಎರಡರಂದು ದಿಲ್ಲಿ ಚಲೋ ಹಾಗೂ ಕಾನೂನು ಸಮಾವೇಶ ನಡೆಯುತ್ತಿದೆ. ರಾಜ್ಯದಿಂದ ಸುಮಾರು 250 ಜನ ಭಾಗವಹಿಸುತ್ತಿದ್ದೇವೆ. ಆಗಸ್ಟ್ 1ರಂದು ದೆಹಲಿಯ ಜಂತರ್ ಮಂಥರ್ ನಲ್ಲಿ ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ ಕೇಂದ್ರ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದೇವೆ. ಕರ್ನಾಟಕದ ಪರವಾಗಿ ಧ್ವನಿ ಎತ್ತಿ ಎಂದು ಕರ್ನಾಟಕದಿಂದ ಆಯ್ಕೆಯಾಗಿರುವ ಎಲ್ಲಾ ಸಂಸದರಿಗೆ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷರಾದ ಧನಂಜಯ್ ಅವರ ಹೆಸರಿನಲ್ಲಿ ಮನವಿ ಪತ್ರವನ್ನು ಸಲ್ಲಿಸುತ್ತೇವೆ.