ಬೆಂಗಳೂರು: ಮನುಷ್ಯನ ಆರೋಗ್ಯ ಸುಧಾರಿಸಬೇಕಾದರೆ ಜೀವನದಲ್ಲಿ ಯೋಗ ಬಹಳ ಮುಖ್ಯ, ಅದರಲ್ಲಿಯೂ ಮಕ್ಕಳು ಯೋಗ ಕಲಿತರೆ ಅವರ ಜೀವನ ಕೊನೆತನಕ ಸುಖಮಯವಾಗಿರುತ್ತದೆ ಎಂದು ಆಚಾರ್ಯ ಪಾಠ ಶಾಲೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಸಿಎ ವಿಷ್ಣು ಭರತ್ ಆಲಂಪಲ್ಲಿ ಅವರು ಅಭಿಪ್ರಾಯಪಟ್ಟರು.
ಶಿವ ಜ್ಯೋತಿ ಯೋಗ ಕೇಂದ್ರ, ಆದಿತ್ಯ ಸಾಯಿ ಯೋಗ ಕೇಂದ್ರ ಸಹಯೋಗದಲ್ಲಿ ಬಿಕೆಎಸ್ ಅಯ್ಯಂಗಾರ್ ಅವರ ಸ್ಮರಣಾರ್ಥ ಬೆಂಗಳೂರಿನಲ್ಲಿ 9ನೇ ರಾಷ್ಟ್ರಮಟ್ಟದ ಮುಕ್ತ ಯೋಗಾಸನ ಚಾಂಪಿಯನ್ಶಿಪ್ 2025ರ ಆನ್ಲೈನ್ ಸ್ಪರ್ಧೆಯಲ್ಲಿ ಎಪಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಪಿಯುಸಿಯಲ್ಲಿ ಓದುತ್ತಿರುವ ಒಟ್ಟು 10 ವಿದ್ಯಾರ್ಥಿಗಳು ಯೋಗ ಚಾಂಪಿಯನ್ಶಿಪ್ ನಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ನಾಲ್ಕನೇ ಬಹುಮಾನವನ್ನು ಪಡೆಯುವ ಮೂಲಕ ನಮ್ಮ ಶಾಲೆಗೆ ಹೆಸರನ್ನು ತರುವ ಮೂಲಕ ಚಾಂಪಿಯನ್ಶಿಪ್ ಆಗಿ ಹೊರಹೊಮ್ಮಿರುವ ಮಕ್ಕಳನ್ನು ನಮ್ಮ ಸಂಸ್ಥೆವತಿಯಿಂದ ಅಭಿನಂದಿಸಲಾಯಿತು ಎಂದರು.
ಮನುಷ್ಯನಿಗೆ ಆರೋಗ್ಯ ಹೊಂದಿದ್ದರೆ ಏನು ಬೇಕಾದರೂ ಸಾಧನೆ ಮಾಡುತ್ತಾನೆ ಎಂಬುದಕ್ಕೆ ಯೋಗ ಒಂದು ಉದಾಹರಣೆ, ಯೋಗದಿಂದ ಸರ್ವರೋಗವನ್ನು ನಿವಾರಣೆ ಮಾಡಿಕೊಳ್ಳಬಹುದು, ಹೀಗಾಗಿ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳಿಗೆ ಪ್ರತ್ಯೇಕವಾಗಿ ಯೋಗಾ ಶಿಕ್ಷಕಿಯನ್ನು ನೇಮಿಸುವ ಮೂಲಕ ಮಕ್ಕಳಿಗೆ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆ ಹೆಚ್ಚು ಹೊತ್ತನ್ನು ನೀಡಲಾಗುತ್ತದೆ, ಯೋಗ ಕಲಿಸಿಕೊಡುವ ಕೆಲಸವನ್ನು ಹಲವು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದೇವೆ.
ಮಕ್ಕಳು ಈಗಾಗಲೇ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ, ಅವರಿಗೆ ಅಂತರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಅವಕಾಶಗಳು ಇದ್ದು, ಅವರಿಗೆ ಸಾಕಷ್ಟು ತರಬೇತಿಯನ್ನು ಸಹ ಸಂಸ್ಥೆಯಲ್ಲಿ ನೀಡಲಾಗುತ್ತದೆ ಎಂದರು. ಯೋಗದಿಂದ ಕೇವಲ ಆರೋಗ್ಯ ಸುಧಾರಿಸಿಕೊಳ್ಳುವುದಲ್ಲದೆ ಮನುಷ್ಯನ ಮಾನಸಿಕ ನೆಮ್ಮದಿಗೆ ಯೋಗ ಮದ್ದಾಗಿರುತ್ತದೆ ಎಂದರು. ಇನ್ನೂ ಇದೇ ವೇಳೆ ಎಪಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಯಿಂದ ಶಾಲಾ ಬ್ಯಾಗ್ ಅನ್ನು ವಿತರಣೆ ಮಾಡಲಾಯಿತು.
ಈ ವೇಳೆ ಎಪಿಎಸ್ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರೊ.ಎ ಪ್ರಕಾಶ್, ಟ್ರಸ್ಟೀ ಡಾ. ಟಿವಿ ಗುರುದೇವಯ್ಯ, ಸಂಸ್ಥೆಯ ಪ್ರಾಂಶುಪಾಲರಾದ ಎಸ್ ನಾಗರಾಜ್ ,ಉಪ ಪ್ರಾಂಶುಪಾಲರಾದ ಎಚ್ ಎಸ್ ರಂಜನಿ, ಯೋಗಾ ಶಿಕ್ಷಕಿ ಧನಲಕ್ಷ್ಮಿ ಸಿಪಿ ಯೋಗಚಾರ್ಯ ಸೇರಿದಂತೆ ವಿದ್ಯಾರ್ಥಿಗಳು ಎಪಿಎಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿಗಳು ಉಪಸ್ಥಿತರಿದ್ದರು.