ಹುಬ್ಬಳ್ಳಿ: ಕರ್ನಾಟಕ ಮೂಲದ ಇನ್ಫೋಸಿಸ್ ಸಂಸ್ಥೆಯ ಸ್ಥಳೀಯ ಘಟಕವು ಈಗಿನ ಪ್ರಮಾಣಕ್ಕಿಂತ ಇನ್ನೂ ಹತ್ತು ಪಟ್ಟು ಬೆಳೆಯಬೇಕು. ಈ ಮೂಲಕ ಕಂಪನಿಯ ಹುಬ್ಬಳ್ಳಿ ಕೇಂದ್ರವೇ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವಂತಹ ಪ್ರಧಾನ ತಾಣವಾಗಿ ಅಭಿವೃದ್ಧಿ ಹೊಂದಬೇಕು. ಜತೆಗೆ ಕಂಪನಿಯು ಉತ್ತರ ಕರ್ನಾಟಕ ಭಾಗದ ಇತರ ಜಿಲ್ಲೆಗಳಲ್ಲೂ ನೆಲೆಯೂರಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಆಶಿಸಿದ್ದಾರೆ.
ಅವರು ಇಲ್ಲಿನ ಇನ್ಫೋಸಿಸ್ ಹುಬ್ಬಳ್ಳಿ ಡೆವಲಪ್ಮೆಂಟ್ ಸೆಂಟರ್ನಲ್ಲಿ ಸಂಸ್ಥೆಯ ಸಿಬ್ಬಂದಿ ವರ್ಗವನ್ನು ಉದ್ದೇಶಿಸಿ ಮಾತನಾಡಿದರು. ಸರಕಾರವು ಬೆಂಗಳೂರಿನಿಂದ ಹೊರಗಿರುವ 2ನೇ ಹಂತದ ನಗರಗಳಲ್ಲಿ ಕೂಡ ಔದ್ಯೋಗಿಕ ಕಾರ್ಯ ಪರಿಸರ ಸೃಷ್ಟಿಸುತ್ತಿದೆ. ಹುಬ್ಭಳ್ಳಿಯಲ್ಲಿ ಇನ್ಫೋಸಿಸ್ ಸಂಸ್ಥೆಯು ಗಳಿಸಿರುವ ಯಶಸ್ಸು, ಸರಕಾರದ ಬಿಯಾಂಡ್ ಬೆಂಗಳೂರು ಉಪಕ್ರಮದ ಫಲವಾಗಿದೆ. ನಾವು ಮೈಸೂರು, ಮಂಗಳೂರು ಮತ್ತು ಬೆಳಗಾವಿಯಲ್ಲಿ ಕೂಡ ಇನ್ನೋವೇಶನ್ ಕಾರಿಡಾರ್ಗಳನ್ನು ಅಭಿವೃದ್ಧಿ ಪಡಿಸಲು ಬದ್ಧರಾಗಿದ್ದೇವೆ ಎಂದು ಅವರು ನುಡಿದಿದ್ದಾರೆ.
ವಾರ್ಷಿಕವಾಗಿ 20 ಬಿಲಿಯನ್ ಡಾಲರ್ಗೂ ಹೆಚ್ಚಿನ ವಹಿವಾಟು ನಡೆಸುತ್ತಿರುವ ಇನ್ಫೋಸಿಸ್ ಕಂಪನಿಯು ಮೂರು ಲಕ್ಷಕ್ಕೂ ಹೆಚ್ಚು ಜನರಿಗೆ ಒಳ್ಳೆಯ ಉದ್ಯೋಗ ಕೊಟ್ಟಿದೆ. 1981ರಲ್ಲಿ ಬೆಂಗಳೂರಿನಲ್ಲಿ ಸಣ್ಣದಾಗಿ ಆರಂಭವಾದ ಈ ಕಂಪನಿಯು ಇಂದು 59 ದೇಶಗಳಲ್ಲಿ ನೆಲೆಯೂರಿದ್ದು, ಕರ್ನಾಟಕದ ಅಭಿವೃದ್ಧಿಯ ಯಶೋಗಾಥೆಯ ಅವಿಭಾಜ್ಯ ಅಂಗವಾಗಿದೆ. ಎಂದು ಅವರು ಹೇಳಿದ್ದಾರೆ.
ಹುಬ್ಬಳ್ಳಿಯ ಇನ್ಫೋಸಿಸ್ ಘಟಕವು ಈಗ ಒಂದು ಸಾವಿರಕ್ಕೂ ಹೆಚ್ಚು ವೃತ್ತಿಪರರನ್ನು ಹೊಂದಿದೆ. ಇದಕ್ಕೆ ತಕ್ಕಂತೆ ಹುಬ್ಬಳ್ಳಿ-ಧಾರವಾಡ ಪ್ರದೇಶವು 43 ಎಂಜಿನಿಯರಿಂಗ್ ಕಾಲೇಜು ಮತ್ತು 127 ಪದವಿ ಕಾಲೇಜುಗಳೊಂದಿಗೆ 35 ಸಾವಿರ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಅರಿವನ್ನು ಒದಗಿಸುತ್ತಿದೆ.49 ಡಿಪ್ಲೊಮಾ ಕಾಲೇಜುಗಳು ಕೂಡ ಇಲ್ಲಿದ್ದು, 20 ಸಾವಿರ ಬಿಪಿಎಂ ವೃತ್ತಿಪರರು ಉದ್ಯೋಗಕ್ಕೆ ಸಜ್ಜಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸರಕಾರವು ಐಟಿ ಅಭಿವೃದ್ಧಿಯ ಜತೆಯಲ್ಲೇ ಸಂಪರ್ಕ ವ್ಯವಸ್ಥೆ, ಕೌಶಲ್ಯಾಭಿವೃದ್ಧಿ ಉಪಕ್ರಮದ ವಿಸ್ತರಣೆ, ಉತ್ಕೃಷ್ಟ ಗುಣಮಟ್ಟದ ಮೂಲಸೌಕರ್ಯ ಅಭಿವೃದ್ಧಿ ಇತ್ಯಾದಿಗಳಿಗೆ ಆದ್ಯತೆ ನೀಡಿದೆ. ಇದರಲ್ಲಿ ಎಲ್ಲ ಭಾಗಗಳ ಪ್ರಮುಖ ನಗರಗಳನ್ನೂ ಗುರುತಿಸಲಾಗಿದೆ. ಈ ಮೂಲಕ ವಿಶ್ವದರ್ಜೆಯ ಕಂಪನಿ ಮತ್ತು ಪ್ರತಿಭೆ ಎರಡೂ ಉತ್ತರ ಕರ್ನಾಟಕ ಸೇರಿದಂತೆ ಎಲ್ಲ ಪ್ರದೇಶಗಳಲ್ಲೂ ನೆಲೆಯೂರುವಂತೆ ಮಾಡಲಾಗುವುದು ಎಂದು ಅವರು ವಿವರಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಕೃತಕ ಬುದ್ಧಿಮತ್ತೆ, ಡಿಜಿಟಲ್ ಕ್ರಾಂತಿ ಮತ್ತು ಸುಸ್ಥಿರ ಅಭಿವೃದ್ಧಿಯ ಅಂಶಗಳು ನಿರ್ಣಾಯಕವಾಗಲಿವೆ. ಆಗ ಕೂಡ ಇನ್ಫೋಸಿಸ್ನ ಯಶೋಗಾಥೆ ಈಗಿನಂತೆಯೇ ಮುಂದುವರಿಯಲಿದೆ ಎನ್ನುವ ವಿಶ್ವಾಸವಿದೆ. ಇದರಿಂದ ಪ್ರಾದೇಶಿಕ ಅಭಿವೃದ್ಧಿ ಮತ್ತು ಇತರ ಗುರಿಗಳು ಈಡೇರಲಿವೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಕಾರ್ಯಕ್ರಮದಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿದರು. ಇನ್ಫೋಸಿಸ್ ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಸುನೀಲಕುಮಾರ್ ಧಾರೇಶ್ವರ್ ಮತ್ತು ರಜನೀಶ್ ಮಾಳವೀಯ ಮತ್ತಿತರರು ಉಪಸ್ಥಿತರಿದ್ದರು.