ಬೆಂಗಳೂರು: “ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ 2025” ವಿಧಾನ ಪರಿಷತ್ತಿನಲ್ಲಿ ಅಂಗೀಕಾರವಾಯಿತು.
ವಿಧಾನ ಸಭೆಯಿಂದ ತಿದ್ದುಪಡಿಗಳೊಂದಿಗೆ ಅಂಗೀಕಾರವಾದ ರೂಪದಲ್ಲಿರುವ ಮತ್ತು ವಿಧಾನ ಪರಿಷತ್ತಿನಿಂದ ತಿರಸ್ಕøತಗೊಂಡಿರುವ ರೂಪದಲ್ಲಿರುವ ಹಾಗೂ ಎರಡನೇ ಬಾರಿ ವಿಧಾನ ಸಭೆಯಿಂದ ಅಂಗೀಕಾರವಾದ ರೂಪದಲ್ಲಿರುವ 2025ನೇ ಸಾಲಿನ “ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ”ವನ್ನು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಮಾನ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರಾದ ಹೆಚ್.ಕೆ. ಪಾಟೀಲ ಅವರು ವಿಧಾನ ಪರಿಷತ್ತಿನಲ್ಲಿ ಅಂಗೀಕಾರ ಮಾಡುವಂತೆ ಪರ್ಯಾಲೋಚನೆಗೆ ಮಂಡಿಸಿದರು.
ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ 1997 (2000ರ ಕರ್ನಾಟಕದ ಅಧಿನಿಯಮ 17)ನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಅವಶ್ಯಕವೆಂದು ಪರಿಗಣಿಸಿ, ಒಟ್ಟು ಠೇವಣಿಯಲ್ಲಿ ಶೇಕಡ 20 ರಷ್ಟನ್ನು ರಾಜ್ಯ ಶಾಸನಬದ್ದ ಮೀಸಲು ದ್ರವ್ಯವಾಗಿ ಉಳಿಸಿಕೊಂಡು ದುರ್ವಿನಿಯೋಗ ಪ್ರಕರಣಗಳು ಹೆಚ್ಚುತ್ತಿರುವುದನ್ನು ನಿರ್ವಹಿಸುವುದು ಹಾಗೂ ರಾಜ್ಯ ಶಾಸನಬದ್ದ ಮೀಸಲು ದ್ರವ್ಯ ಪದವನ್ನು ಪರಿಭಾಷಿಸುವುದು; ಸೌಹಾರ್ದ ಸಹಕಾರಿಗೆ ತಕ್ಷಣದ ಬಳಕೆಗಾಗಿ ಅಗತ್ಯವಿಲ್ಲದ ನಿಧಿಗಳನ್ನು ಅದರ ವ್ಯವಹಾರಗಳ ಹೊರಗೆ ಹೂಡಲು ಮತ್ತು ಠೇವಣಿಯಿರಿಸಲು ಉಪಬಂದ ಕಲ್ಪಿಸುವುದು; ಮತದಾರರ ವರ್ಗದ ಮೂಲಕ ಸಹಕಾರಿ ಮೀಸಲಿರಿಸಿದ ಸ್ಥಾನಗಳಿಗೆ ಮತ ಚಲಾಯಿಸುವ ವಿಧಾನವನ್ನು ನಿಯಮಿಸುವುದು; ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು, ಮಹಿಳೆ ಮತ್ತು ಇತರೆ ಹಿಂದುಳಿದ ವರ್ಗಕ್ಕೆ ಸೇರಿದ ಸದಸ್ಯರ ಪರವಾಗಿ ಮಂಡಲಿಯಲ್ಲಿನ ಸ್ಥಾನಗಳ ಮೀಸಲಾತಿಯನ್ನು ಪುನರೀಕ್ಷಿಸುವುದು; ದುರ್ವಿನಿಯೋಗ ನಿಯಂತ್ರಿಸಲು ಮತ್ತು ಸಹಕಾರಿ ವಲಯದಲ್ಲಿ ಉತ್ತರದಾಯಿತ್ವವನ್ನು ತರಲು ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ, ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಪ್ರತಿ ವರ್ಷದ ಕೊನೆಯಲ್ಲಿ ಆತನ ಆಸ್ತಿ ಮತ್ತು ಹೊಣೆಗಾರಿಕೆಗಳನ್ನು ಘೋಷಿಸಲು ಒತ್ತಾಯಿಸುವುದು; ಚುನಾವಣೆ ನಡೆಸುವಲ್ಲಿ ಅನಗತ್ಯ ವೆಚ್ಚ ಮತ್ತು ಸಮಯ ವಿಳಂಬವನ್ನು ತಪ್ಪಿಸುವುದು; ಸಹಕಾರ ಲೆಕ್ಕಪರಿಶೋಧಕ ನಿರ್ದೇಶಕರ ಮುಖಾಂತರ ಲೆಕ್ಕಪರಿಶೋಧನೆಯ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುವುದು; ವಂಚನೆಯ ವರದಿಯಲ್ಲಿರುವ ಅಕ್ರಮ ಅಥವಾ ವಂಚನೆ ಅಥವಾ ದುರ್ವಿನಿಯೋಗದಲ್ಲಿ ತೊಡಗಿರುವ ವ್ಯಕ್ತಿಗಳ ವಿರುದ್ದ ಕ್ರಿಮಿನಲ್ ಪ್ರಕರಣವನ್ನು ದಾಖಲಿಸುವುದು ಮತ್ತು ಇತರೆ ಕೆಲವು ಪ್ರಾಸಂಗಿಕ ತಿದ್ದುಪಡಿಗಳನ್ನು ಸಹಮಾಡುವುದು ಎಂದು ತಿಳಿಸಿ ವಿಧೇಯಕವನ್ನು ಅಂಗಿಕಾರಕ್ಕಾಗಿ ಮಾನ್ಯ ಸಚಿವರು ಕೋರಿದರು.
ಮಾನ್ಯ ಸಭಾಪತಿಗಳಿಂದ ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ 2025ಕ್ಕೆ ಅಂಗೀಕಾರ ದೊರೆಯಿತು