ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 31 ನೇ ಅಕ್ಟೋಬರ್ 2025 ರಂದು 1.29 ಲಕ್ಷ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದ್ದು, 5 ದಿನಗಳಲ್ಲಿ ಒಟ್ಟು 5.91 ಲಕ್ಷ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ.
ನಗರದಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಪಾಲಿಕೆಯ ಎಲ್ಲಾ ವಲಯಗಳಲ್ಲಿ 41 ಕೆರೆ ಅಂಗಳದ ಶಾಶ್ವತ/ತಾತ್ಕಾಲಿಕ ಕಲ್ಯಾಣಿಗಳು ಹಾಗೂ 489 ಸಂಚಾರಿ ವಾಹನ (ಮೊಬೈಲ್ ಟ್ಯಾಂಕರ್) ಗಳ ವ್ಯವಸ್ಥೆ ಕಲ್ಪಿಸಲಾಗಿತ್ತು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಮುಖ ಕೆರೆಗಳ ಅಂಗಳದಲ್ಲಿರುವ ಕಲ್ಯಾಣಿಗಳಲ್ಲಿ ಗಣೇಶ ವಿಸರ್ಜನೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಕಲ್ಯಾಣಿಗಳ ಆವರಣದಲ್ಲಿ ವ್ಯವಸ್ಥಿತವಾಗಿ ಬ್ಯಾರಿಕೇಡಿಂಗ್ಗಳ ಅಳವಡಿಕೆ, ನುರಿತ ಈಜುಗಾರರ/ಜೀವ ರಕ್ಷಕರ ನಿಯೋಜನೆ, ಸಿಸಿಟಿವಿ ಅಳವಡಿಕೆ, ವಿದ್ಯುತ್ ದೀಪಗಳ ಸೌಲಭ್ಯ ಹಾಗೂ ಪೆಂಡಾಲ್ ವ್ಯವಸ್ಥೆ ಮಾಡಿಕೊಂಡು ಯಾವುದೇ ಅಹಿತಕರ ಘಟನೆಗಳ ನಡೆಯದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಪ್ರಮುಖ ಕಲ್ಯಾಣಿಗಳ ಬಳಿ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಕಲ್ಯಾಣಿಗಳ ಬಳಿ ಗಣೇಶ ವಿಸರ್ಜನೆ ಮಾಡಿದ ವೇಳೆ ಸಂಗ್ರಹವಾಗುವ ತ್ಯಾಜ್ಯವನ್ನು ಆಟೋ ಟಿಪ್ಪರ್ ಗಳ ಮೂಲಕ ವಿಲೇವಾರಿ ಮಾಡಲಾಗಿದೆ.
*ಕಲ್ಯಾಣಿಗಳ ಸ್ವಚ್ಛತೆ ಕಾರ್ಯ:*
ನಗರದಲ್ಲಿ ಹಲಸೂರು, ಹೆಬ್ಬಾಳ, ಯಡಿಯೂರು, ಸ್ಯಾಂಕಿ ಕೆರೆ ಅಂಗಳದ ಕಲ್ಯಾಣಿಗಳಲ್ಲಿ ಹೆಚ್ಚು ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಿದ್ದು, ಆ ಕಲ್ಯಾಣಿಗಳಲ್ಲಿ ಹೂಳೆತ್ತುವ ಕಾರ್ಯ ನಡೆಯಲಿದೆ. ಅದರಂತೆ ಪ್ರಮುಖ ಕಲ್ಯಾಣಿಗಳಲ್ಲಿ ಮೇಲೆ ತೇಲುವಂತ ವಸ್ತುಗಳನ್ನು ಪ್ರತಿನಿತ್ಯ ಮುಂಜಾನೆಯೇ ತೆರವುಗೊಳಿಸಲಿದ್ದಾರೆ.
ಯಡಿಯೂರು ಕೆರೆ ಕಲ್ಯಾಣಿಯಲ್ಲಿ 10ನೇ ಸೆಪ್ಟೆಂಬರ್ 2025 ರಂದು, ಹೆಬ್ಬಾಳ ಕೆರೆ ಕಲ್ಯಾಣಿಯಲ್ಲಿ ನಾಳೆ (02-09-2025) ಹಾಗೂ ಹಲಸೂರು ಕೆರೆ ಕಲ್ಯಾಣಿಯಲ್ಲಿ ಇಂದು (01-09-2025) ಮತ್ತು ನಾಳೆ (02-09-2025) ಹೂಳೆತ್ತುವ ಕಾರ್ಯವಿದ್ದು, ಈ ವೇಳೆ ಗಣೇಶ ಮೂರ್ತಿಗಳ ವಿಸರ್ಜನೆಗೆ ಅವಕಾಶವಿರುವುದಿಲ್ಲ.
*5,91,683 ಗಣೇಶ ಮೂರ್ತಿಗಳ ವಿಸರ್ಜನೆ:*
ನಗರದಲ್ಲಿ ಆಗಸ್ಟ್ 27 ರಂದು 2,19,153 ಗಣೇಶ ಮೂರ್ತಿಗಳು, 28 ರಂದು 73,959 ಗಣೇಶ ಮೂರ್ತಿಗಳು, 29 ರಂದು 1,14,402 ಗಣೇಶ ಮೂರ್ತಿಗಳು, 30 ರಂದು 54,653 ಗಣೇಶ ಮೂರ್ತಿಗಳು ಹಾಗೂ 31 ರಂದು 1,29,516 ಗಣೇಶ ಮೂರ್ತಿಗಳು ಸೇರಿದಂತೆ *5 ದಿನಗಳಲ್ಲಿ ಒಟ್ಟು 5,91,683 ಲಕ್ಷ* ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ.
*ಬಿಬಿಎಂಪಿ ವ್ಯಾಪ್ತಿಯಲ್ಲಿ ವಲಯವಾರು 31-08-2025 ರಂದು ಗಣೇಶ ಮೂರ್ತಿಗಳ ವಿಸರ್ಜನೆ ಮಾಡಿರುವ ವಿವರ:*
ಪೂರ್ವ ವಲಯ: 61,680
ಪಶ್ಚಿಮ ವಲಯ: 9,050
ದಕ್ಷಿಣ ವಲಯ: 42,274
ಬೊಮ್ಮನಹಳ್ಳಿ ವಲಯ: 1,862
ದಾಸರಹಳ್ಳಿ ವಲಯ: 231
ಮಹದೇವಪುರ ವಲಯ: 3,612
ಆರ್.ಆರ್.ನಗರ ವಲಯ: 3,329
ಯಲಹಂಕ ವಲಯ: 7,478
*ಒಟ್ಟು: 1,29,516*
*ಹೆಚ್ಚಿನ ಮಾಹಿತಿಗಾಗಿ ವಲಯವಾರು ಪ್ರತ್ಯೇಕ ಹಾಗೂ 5 ದಿನಗಳ ಅಂಕಿ-ಅಂಶಗಳ ಪ್ರತಿಯನ್ನು ಲಗತ್ತಿಸಲಾಗಿದೆ.*