ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆ ವ್ಯಾಪ್ತಿಗೊಳಪಡುವ ಎಲ್ಲಾ ಕಛೇರಿಗಳಲ್ಲಿ ಮಾಹಿತಿ ಹಕ್ಕು ಅಧಿನಿಯಮದ ಸೆಕ್ಷನ್ 5(1)ರಡಿಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ಮೇಲ್ಮನವಿ ಪ್ರಾಧಿಕಾರಿಗಳ ಮಾಹಿತಿವುಳ್ಳ ಸೂಚನಾ ಫಲಕಗಳನ್ನು ಕಡ್ಡಾಯವಾಗಿ ಹಾಕಲು, ಪ್ರದರ್ಶಿಸಲು ಸುತ್ತೋಲೆ ಹೊರಡಿಸುವಂತೆ ರಾಜ್ಯದ ಪೊಲೀಸ್ ಮಹಾನಿರ್ದೇಶಕ ಮತ್ತು ಮಹಾ ನಿರೀಕ್ಷಕರಿಗೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ಪತ್ರ ಬರೆದಿದ್ದಾರೆ.
ರಾಜ್ಯ ಸರ್ಕಾರದ ಎಲ್ಲಾ ಇಲಾಖೆಯ ಕಛೇರಿಗಳಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ, ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಮೇಲ್ಮನವಿ ಪ್ರಾಧಿಕಾರಿಗಳನ್ನು ನೇಮಿಸಿ ಅದನ್ನು ಕಛೇರಿಗಳ ಮುಂದೆ ಸೂಚನಾ ಫಲಕದಲ್ಲಿ ಪ್ರದರ್ಶಿಸುವಂತೆ ಮಾಹಿತಿ ಹಕ್ಕು ಅಧಿನಿಯಮ-2005ರ ಸೆಕ್ಷನ್ 5(1)ರ ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಜನಸ್ಪಂದನ ಕೋಶ)ಯ ಪತ್ರ ಸಂಖ್ಯೆ: ಸಿಆಸುಇ:59:ಆರ್ಟಿಐ:2008.ಬೆಂಗಳೂರು ದಿನಾಂಕ:31-05-2008ರಲ್ಲಿ ಸುತ್ತೋಲೆ ಹೊರಡಿಸಲಾಗಿದೆ.
ರಾಜ್ಯ ಪೊಲೀಸ್ ಇಲಾಖೆ ವ್ಯಾಪ್ತಿಯ ಕೆಲವು ಠಾಣೆ, ಜಿಲ್ಲಾ, ವಲಯ ಮತ್ತು ಆಯಾ ವಿಭಾಗದ ಪ್ರಧಾನ ಕಛೇರಿಗಳಲ್ಲಿ ಸೂಚನಾ ಫಲಕಗಳನ್ನು ಹಾಕದೆ ಸರ್ಕಾರದ ಆದೇಶವನ್ನು ಅಧಿಕಾರಿಗಳು ಪಾಲಿಸದೇ ನಿರ್ಲಕ್ಷ್ಯವಹಿಸುತ್ತಿರುವುದಾಗಿ ಕೆಲವು ಮಾಹಿತಿ ಹಕ್ಕು ಹೋರಾಟಗಾರರು ಆರೋಪಿಸುತ್ತಿದ್ದಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಇಲಾಖೆಯ ಬಗ್ಗೆ ನಕರಾತ್ಮಕವಾಗಿ ಟೀಕೆಗಳು ವ್ಯಕ್ತವಾಗುತ್ತಿದೆ.
ಸದರಿ ಅಧಿನಿಯಮದಡಿಯಲ್ಲಿ, ಸರ್ಕಾರದ ಸುತ್ತೋಲೆಯಂತೆ ರಾಜ್ಯ ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ ಬರುವ ರಾಜ್ಯದ ಎಲ್ಲಾ ಹಂತಗಳ, ವಿಭಾಗಗಳ ಕಛೇರಿ ಸೇರಿದಂತೆ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳ ಮುಂದೆ ಆಯಾ ಕಛೇರಿಗಳಲ್ಲಿ ನೇಮಿಸಿದ ಸಾರ್ವಜನಿಕ ಮಾಹಿತಿ ಅಧಿಕಾರಿ, ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಮೇಲ್ಮನವಿ ಪ್ರಾಧಿಕಾರಿಗಳ ಮಾಹಿತಿವುಳ್ಳ ಸೂಚನಾ ಫಲಕವನ್ನು ಕಛೇರಿಗಳ ಮುಂದೆ ಸ್ಪಷ್ಟವಾಗಿ ಹಾಕುವಂತೆ/ಪ್ರದರ್ಶಿಸುವಂತೆ ಸೂಕ್ತ ನಿರ್ದೇಶನ/ಸುತ್ತೋಲೆ ಹೊರಡಿಸುವಂತೆ ಮತ್ತು ಕೈಗೊಂಡ ಕ್ರಮದ ಬಗ್ಗೆ ಮಾಹಿತಿಯನ್ನು ನೀಡುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ಪತ್ರ ಬರೆದಿದ್ದಾರೆ.