ಬೆಂಗಳೂರು: ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರ ನೇತೃತ್ವದಲ್ಲಿ “ಮಿಷನ್ ಕ್ಲೀನ್ ಏರ್ಪೋರ್ಟ್ ರಸ್ತೆ” ಅಭಿಯಾನ ಕೈಗೊಳ್ಳಲಾಯಿತು.
ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ರವರ ನೇತೃತ್ವದಲ್ಲಿ, ಮೇಖ್ರಿ ಸರ್ಕಲ್ನಿಂದ ಯಲಹಂಕ ಏರ್ ಫೋರ್ಸ್ ಸ್ಟೇಷನ್ವರೆಗೆ 34 ಕಿಲೋಮೀಟರ್ ಮಾರ್ಗದ ಏರ್ಪೋರ್ಟ್ ರಸ್ತೆಯ ಬೃಹತ್ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಯಿತು.
ಈ ಸ್ವಚ್ಛತಾ ಅಭಿಯಾನವನ್ನು *“ಮಿಷನ್ ಕ್ಲೀನ್ ಏರ್ಪೋರ್ಟ್ ರಸ್ತೆ”* ಎಂಬ ಹೆಸರಿನಲ್ಲಿ ಹಮ್ಮಿಕೊಳ್ಳಲಾಗಿದ್ದು, ರಸ್ತೆ ಸ್ವಚ್ಛಗೊಳಿಸುವ ಹಾಗೂ ಪ್ರಯಾಣಿಕರಿಗೆ ಸುಗಮ ಸಂಚಾರದ ಅನುಭವ ಕಲ್ಪಿಸುವ ಉದ್ದೇಶದಿಂದ ಕೈಗೊಳ್ಳಲಾಗಿದೆ.
*ಸ್ವಚ್ಛತಾ ಅಭಿಯಾನದ ಭಾಗವಾಗಿ:*
* ಮಿಶ್ರ ಕಸ, ಪ್ಲಾಸ್ಟಿಕ್ ಮತ್ತು ಕಟ್ಟಡ ಭಗ್ನಾವಶೇಷಗಳ ತ್ಯಾಜ್ಯವನ್ನು ಸರ್ವಿಸ್ ರಸ್ತೆಗಳಿಂದ ತೆರವುಗೊಳಿಸಲಾಯಿತು.
* ಮೆಕ್ಯಾನಿಕಲ್ ಸ್ವೀಪರ್ಗಳನ್ನು ಬಳಸಿಕೊಂಡು ಮುಖ್ಯ ರಸ್ತೆ ಮತ್ತು ಸರ್ವೀಸ್ ಲೇನ್ಗಳಲ್ಲಿ ಸಿಲ್ಟ್ ಮತ್ತು ಕಸವನ್ನು ಶುದ್ಧಗೊಳಿಸುವ ಕಾರ್ಯ ಕೈಗೊಳ್ಳಲಾಯಿತು.
* ರಸ್ತೆ ಪಕ್ಕದ ದೃಷ್ಯ ವೀಕ್ಷಣೆ ಸುಧಾರಣೆಗಾಗಿಯೂ ಹಾಗೂ ಹಸಿರು ನಿರ್ವಹಣೆಗಾಗಿಯೂ ರಸ್ತೆ ಇಕ್ಕೆಲಗಳಲ್ಲಿನ ಕಳೆಗಳನ್ನು ಕತ್ತರಿಸಲಾಯಿತು.
*ಬಳಕೆಯಾದ ಶ್ರಮಿಕ ಶಕ್ತಿ ಮತ್ತು ಯಂತ್ರೋಪಕರಣಗಳು:*
* ಪೌರಕಾರ್ಮಿಕರು ಹಾಗೂ ಕಾರ್ಮಿಕರು: 508
* ಎನ್ಸಿಸಿಸಿ ಮತ್ತು ಜಿಕೆವಿಕೆ ಸ್ವಯಂಸೇವಕರು: 240
* ಸಿಂಪಡಣಾ ಸಿಬ್ಬಂದಿ : 16
* ಸಿಲ್ಟ್ ಟ್ರ್ಯಾಕ್ಟರ್ಗಳು: 29
* ಜೆಸಿಬಿಗಳು: 3
* ಮೆಕ್ಯಾನಿಕಲ್ ಸ್ವೀಪರ್ಗಳು: 6
* ವೀಡ್ ಕಟಿಂಗ್ ಯಂತ್ರಗಳು: 14
* ಆಟೋ ಟಿಪ್ಪರ್ಗಳು: 8
*ಅಭಿಯಾನದಲ್ಲಿ ಪಾಲ್ಗೊಂಡವರು:*
ಈ ಅಭಿಯಾನದ ಯಶಸ್ಸು, ವಿವಿಧ ಸಂಸ್ಥೆಗಳಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಎನ್ಸಿಸಿಸಿ ಏರ್ ವಿಂಗ್, ಜಿಕೆವಿಕೆ ಹಾಗೂ ಎನ್ಎಸ್ಎಸ್ ಸ್ವಯಂಸೇವಕರ ಸಕ್ರಿಯ ಸಹಭಾಗಿತ್ವದ ಫಲಿತಾಂಶವಾಗಿದೆ.
*ನಗರ ಪಾಲಿಕೆಯ ಮುಂದಿನ ನಡೆ:*
ಈ ಸಮನ್ವಿತ ಪ್ರಯತ್ನವು ಬೆಂಗಳೂರಿನ ಪ್ರಮುಖ ರಸ್ತೆಗಳನ್ನು ಸ್ವಚ್ಛವಾಗಿಡಲು, ಸುರಕ್ಷಿತವಾಗಿಡಲು ಮತ್ತು ಪ್ರಯಾಣಿಕರಿಗೆ ಅನುಕೂಲವಾಗಲು ವಿವಿಧ ನಾಗರಿಕ ಸಂಸ್ಥೆಗಳು, ರಕ್ಷಣಾ ಘಟಕಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳ ಬದ್ಧತೆಯನ್ನು ಪ್ರದರ್ಶಿಸುತ್ತದೆ.
ಬೆಂಗಳೂರು ಉತ್ತರ ನಗರ ಪಾಲಿಕೆಯು, ಇಂತಹ ಸ್ವಚ್ಛತಾ ಅಭಿಯಾನಗಳನ್ನು ನಿಯಮಿತವಾಗಿ ಕೈಗೊಂಡು, ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯರಹಿತ ಪರಿಸರದ ಕುರಿತು ನಾಗರಿಕರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಮುಂದುವರೆಸಲಿದೆ.
ಈ ವೇಳೆ ನಗರ ಪಾಲಿಕೆಯ ಜಂಟಿ ಆಯುಕ್ತರಾದ ಮೊಹ್ಮದ್ ನಯೀಮ್ ಮೊಮಿನ್, ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಆರೋಗ್ಯ ಮತ್ತು ಘನತ್ಯಾಜ್ಯ ನಿರ್ವಹಣಾ ವಿಭಾಗದ ಸಿಬ್ಬಂದಿಗಳು, ಪೌರಕಾರ್ಮಿಕರು, ಮಾರ್ಷಲ್ಸ್ ಸೇರಿದಂತೆ ಇತರೆ ಸಂಬಂಧಪಟ್ಟ ಸಿಬ್ಬಂದಿಗಳು ಹಾಜರಿದ್ದರು.