ಬೆಂಗಳೂರು : ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಜಲ ಸಂರಕ್ಷಣೆ ಕುರಿತ ಗಿನ್ನೇಸ್ ದಾಖಲೆ ಪ್ರಯತ್ನದ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಇಂದು, ಬಿಎಂಎಸ್ ಮತ್ತು ನ್ಯಾಷನಲ್ ಕಾಲೇಜು ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಅಭಿಯಾನದಲ್ಲಿ ಭಾಗಿಯಾದರು. ನಾಳೆಯಿಂದ ನಗರದಾದ್ಯಂತ ಬೆಂಗಳೂರು ಜಲಮಂಡಳಿ ಸಿಬ್ಬಂದಿಗಳು ಹಾಗೂ ಸ್ವಯಂ ಸೇವಕರು ಮನೆಬಾಗಿಲಿಗೆ ತೆರಳಿ ಪ್ರತಿಜ್ಞಾ ವಿಧಿಯ ಪತ್ರಗಳಿಗೆ ನಾಗರೀಕರಿಂದ ಸಹಿ ಪಡೆದುಕೊಳ್ಳಲಿದ್ದಾರೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ವಿ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ನಗರದ ನ್ಯಾಷನಲ್ ಕಾಲೇಜು ಹಾಗೂ ಬಿಎಂಎಸ್ ಕಾಲೇಜಿನಲ್ಲಿ ನೂರಾರು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು. ಜಲ ಸಂರಕ್ಷಣೆ, ಹಲ್ಲುಜ್ಜುವಾಗ, ಅಡುಗೆ ಮತ್ತು ಸ್ನಾನ ಮಾಡುವಾಗ, ಬಟ್ಟೆ ತೊಳೆಯುವಾಗ ಕಡಿಮೆ ನೀರು ಬಳಸುತ್ತೇವೆ. ಅಂತರ್ಜಲ ಸಂರಕ್ಷಣೆ, ನೀರು ಸಂಸ್ಕರಿಸಿ ತೋಟಗಳಿಗೆ ಮತ್ತು ವಾಹನಗಳನ್ನು ತೊಳೆಯಲು ಬಳಸುತ್ತೇವೆ. ಜಲ ಮೂಲಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ನೀಡುವ, ಸುಸ್ಥಿರ ಅಭಿವೃದ್ಧಿಗಾಗಿ ಬದ್ಧನಾಗಿರುತ್ತೇವೆ ಎಂದು ಪ್ರತಿಜ್ಞೆ ಸ್ವೀಕರಿಸಿ ಅರ್ಜಿಯಲ್ಲಿ ಸಹಿ ಮಾಡಿದರು.
ಉಪ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಕಾವೇರಿ ಆರತಿಯ ಮೂಲಕ ಈ ಅಭಿಯಾನಕ್ಕೆ ಮಾರ್ಚ್ 21 ರಿಂದ ಈ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ಅಭಿಯಾನ ಇದೇ ಮಾರ್ಚ್, 28 ರ ವರೆಗೆ ಒಂದು ವಾರ ನಗರದ ವಿವಿಧೆಡೆ ಎಲ್ಲಾ ವರ್ಗ, ಸಮುದಾಯಗಳನ್ನು ಒಳಗೊಂಡಂತೆ ಈ ಅಭಿಯಾನ ನಡೆಯಲಿದೆ. ಜಲವೇ ಜೀವ – ನೀರೇ ಜೀವನ ಎಂಬ ಧ್ಯೇಯದಡಿ ಅಭಿಯಾನ ನಡೆಯತ್ತಿದೆ. ಈ ಅಭಿಯಾನದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜುಗಳು, ಸ್ವಯಂ ಸೇವಾ ಸಂಸ್ಥೆಗಳು, ಕೈಗಾರಿಕೆಗಳೂ ಹಾಗೂ ಐಟಿ ಕಂಪನಿಗಳೂ ಭಾಗವಹಿಸಬೇಕು. ಈ ಮೂಲಕ ನೀರು ಉಳಿತಾಯ ಹಾಗೂ ಜಲಮೂಲಗಳ ಸಂರಕ್ಷಣೆಗೆ ಕೈಜೋಡಿಸಬೇಕು. ಬೇಸಿಗೆ ಸಮಯದಲ್ಲಿ ಈ ಬೃಹತ್ ಅಭಿಯಾನ ನಡೆಯುತ್ತಿದ್ದು, ಕಳೆದ ವರ್ಷ ನೀರು ಕೊರತೆಯಿಂದ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಾರಿ ಅಭಿಯಾನದ ಮೂಲಕ ನಗರದ ನಾಗರಿಕರಲ್ಲಿ ನೀರಿನ ಸಂರಕ್ಷಣೆ ಕುರಿತು ತಿಳಿವಳಿಕೆ ನೀಡುವ ಉದ್ದೇಶ ಹೊಂದಲಾಗಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಜಲಮಂಡಳಿ ಅಧ್ಯಕ್ಷ ಡಾ. ವಿ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
*ಜಲಮಂಡಳಿ ಸಿಬ್ಬಂದಿಗಳು ಹಾಗೂ ಸ್ವಯಂ ಸೇವಕರಿಗೆ ಸಹಕರಿಸಿ:*
ನಾಳೆಯಿಂದ ನಮ್ಮ ಜಲಮಂಡಳಿ ಸಿಬ್ಬಂದಿಗಳು ಹಾಗೂ ಸ್ವಯಂ ಸೇವಕರು ಮನೆ ಮನೆಗೂ ತೆರಳಿ ಪ್ರತಿಜ್ಞಾ ವಿಧಿಗೆ ಸಹಿ ಸ್ವೀಕರಿಸಲಿದ್ದಾರೆ. ಈ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಹಾಗೆಯೇ ಸಿಬ್ಬಂದಿಗಳಿಗೆ ಸಹಕಾರ ನೀಡಬೇಕು ಎಂದು ಅಧ್ಯಕ್ಷರು ಮನವಿ ಮಾಡಿದ್ದಾರೆ.