ಬೆಂಗಳೂರು: ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರು ದಿನನಿತ್ಯ ಅನುಭವಿಸುತ್ತಿರುವ ವಿವಿಧ ಸಮಸ್ಯೆಗಳ ಹಿನ್ನೆಲೆ ಬೆಂಗಳೂರಿನಲ್ಲಿ ಭಾನುವಾರ freedom park ನಲ್ಲಿ ಕಾರ್ಮಿಕರ ಹಕ್ಕಿಗಾಗಿ ಬೃಹತ್ ಪ್ರತಿಭಟನೆಯನ್ನು ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದಿಂದ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಒಕ್ಕೊಟ್ಟದ ವತಿಯಿಂದ ಪತ್ರಿಕಾಗೋಷ್ಟಿ ನಡೆಸಿ ರಾಜ್ಯಾಧ್ಯಕ್ಷರಾದ ಬಿ ದೇವರಾಜ್ ಮಾತನಾಡಿ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಸಾಮಾನ್ಯವಾಗಿ ಬಡತನದ ಬದುಕಿನಲ್ಲಿ ಬದುಕುತ್ತಾ ಹೆಚ್ಚಾಗಿ ಅವಿದ್ಯಾವಂತರಾಗಿರುತ್ತಾರೆ. ಇವರು ಕೆಲಸದಿಂದ ಕೆಲಸಕ್ಕೆ ಅಲೆದಾಡುತ್ತಾ ಕಟ್ಟಡ ನಿರ್ಮಾಣದಲ್ಲಿ ಮೇಸನ್, ಸೆಂಟ್ರಿಂಗ್, ಕಾರ್ಪೆಂಟರ್, ಪ್ಲಂಬಿಂಗ್, ಸಿಮೆಂಟ್ ಕಾಂಕ್ರೀಟ್ ಕೆಲಸ ಹಾಗೂ ಇನ್ನಿತರ ಕಟ್ಟಡ ನಿರ್ಮಾಣ ಕೆಲಸಗಳಲ್ಲಿ ತೊಡಗಿರುತ್ತಾರೆ.
ಇವರಿಗೆ ಯಾವುದೇ ಭದ್ರತೆಯ ಬದುಕು ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಹಾಗೂ ನವೀಕರಣ ಮಾಡಿಸಿಕೊಳ್ಳಲು ಮಂಡಳಿಯು ಹಲವಾರು ಷರತ್ತುಗಳು ವಿಧಿಸಿರುತ್ತದೆ. ವೇತನ ಚೀಟಿ ಹಾಗೂ ಹಾಜರಾತಿ ನಿಯಮಗಳನ್ನು ರದ್ದುಗೊಳಿಸಬೇಕು. ಕಾರಣ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗೆ ಕಾರ್ಮಿಕರ ನೋಂದಣಿ ನವೀಕರಣಕ್ಕಾಗಿ ನಿಯಮಗಳನ್ನು ಸರಳೀಕರಣಗೊಳಿಸಲು ಸೂಕ್ತ ಆದೇಶವನ್ನು ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.
ಕಾಮಿಕರು ಆತಂತ್ರ ಬದುಕು ಸಾಗಿಸುತ್ತ ಕೆಲಸ ನಿರ್ವಹಿಸುವ ಸಮಯದಲ್ಲಿ ನೋಂದಣಿಯಾಗಿ ಹಾಗೂ ನವೀಕರಣಕ್ಕಾಗಿ ಕಟ್ಟಡ ಪರವಾನಿಗೆ ಪತ್ರ ಹಾಗೂ ನಕ್ಷೆ, ವೇತನ ಚೀಟಿ ಹಾಗೂ ಹಾಜರಾತಿ ಪುಸ್ತಕ ಸರ್ಕಾರದ ಇಲಾಖೆಗಳಿಂದ ಕೇಳಿರುವುದು ಇವರಿಗೆ ಒದಗಿಸಿಕೊಡುವುದು ಅಸಾಧ್ಯ ವಿಷಯವಾಗಿರುತ್ತದೆ.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಇಂತಹ ಜಾಗದಲ್ಲಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದಾಗ ಅದನ್ನು ಪರಿಶೀಲಿಸಿ ಸತ್ಯ ಅಸತ್ಯತೆಯನ್ನು ತನಿಖೆ ಮಾಡುವ ಅಧಿಕಾರ ಸಂಬಂಧಪಟ್ಟ ಕಾರ್ಮಿಕ ನಿರೀಕ್ಷಕರಿಗೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಈ ರೀತಿಯ ಕಾನೂನುಗಳನ್ನು ಜಾರಿ ಮಾಡಿರುವುದರಿಂದ ಸಾವಿರಾರು ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ಪ್ರತಿಭಟನೆಯಲ್ಲಿ 23 ಕ್ಕಿಂತ ಹೆಚ್ಚು ಕಾರ್ಮಿಕರ ಹಕ್ಕುಗಳನ್ನು ಸರ್ಕಾರಕ್ಕೆ ಕೇಳುವ ಮೂಲಕ ಕಿವಿ ಹಿಂಡುವ ಕೆಲಸ ಮಾಡಲಾಗುತ್ತದೆ. ರಾಜ್ಯದ 26 ಜಿಲ್ಲೆಗಳಿಂದ 5 ಸಾವಿರಕ್ಕೂ ಹೆಚ್ಚು ವಿವಿಧ ಕ್ಷೇತ್ರದ ಕಾರ್ಮಿಕರು ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಬೆಳಿಗ್ಗೆಯಿಂದ ಸಂಜೆ ತನಕ ಧರಣಿ ಮಾಡಲಾಗುತ್ತದೆ ಅಷ್ಟರಲ್ಲಿ ಸರ್ಕಾರದ ಪರವಾಗಿ ಇಲಾಖೆಯ ಅಧಿಕಾರಿಗಳು ಪ್ರತಿಭಟನಾ ನಿರತ ಸ್ಥಳಕ್ಕೆ ಬರುತ್ತಾರಾ ಎಂದು ಕಾದು ನೀಡುತ್ತೇವೆ, ಒಂದು ವೇಳೆ ಬರದಿದ್ದರೆ ಸಂಘಟನೆಯ ಮುಖಂಡರು ಚರ್ಚಿಸಿ ಅನಿರ್ದಿಷ್ಟಾವಧಿ ಧರಣಿ ಮಾಡುವ ಕೆಲಸವನ್ನು ಮಾಡಲಾಗುತ್ತದೆ ಎಂದರು.
ಇನ್ನು ಇದೇ ವೇಳೆ ಕಾರ್ಮಿಕ ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆಯನ್ನು ನೀಡಿದರು. ಸಚಿವರಿಗೆ ಈಗಾಗಲೇ ಹಲವು ಭಾರಿ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಂಡಿಲ್ಲ, ಅವರಿಗೆ ಎಚ್ಚರಿಕೆ ಕೊಡುವ ಕೆಲಸವನ್ನು ಮಾಡಲಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮೇಲುಕೋಟೆ ಬೆಟ್ಟೆಗೌಡ ಸ್ವಾಮಿ,ಎಂ ಮಹೇಶ್ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು ಭಾಗಿ.