*ಬೆಂಗಳೂರು* : ಕುಡಿಯುವ ನೀರು ಸರಬರಾಜು ಹಾಗೂ ತ್ಯಾಜ್ಯ ನೀರು ನಿರ್ವಹಣೆಯಲ್ಲಿ ಅಳವಡಿಸಿಕೊಂಡಿರುವ ಸುಸ್ಥಿರ ಯೋಜನೆಗಳು ದೇಶದಲ್ಲೇ ಬೆಂಗಳೂರು ಮಾದರಿ ಎನ್ನುವಂತೆ ಹೆಸರುವಾಸಿಯಾಗಿದ್ದು, ನಗರ ಪ್ರವಾಸದಲ್ಲಿರುವ ಇಂಡಿಯನ್ ಇನ್ಸಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ನಲ್ಲಿ ತರಬೇತಿ ಪಡೆಯುತ್ತಿರುವ ರಕ್ಷಣಾ ಸೇವೆಯ ಹಿರಿಯ ಅಧಿಕಾರಿಗಳ ತಂಡ *ಇಂದು ಬೆಂಗಳೂರು ಜಲಮಂಡಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ, ದೇಶದ ಮೂರನೇ ಅತಿದೊಡ್ಡ ನಗರಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆಯನ್ನು ನಿರ್ವಹಿಸುತ್ತಿದೆ. ಈ ಬಾರಿ ಬೇಸಿಗೆ ಸಂಧರ್ಭದಲ್ಲಿ ಬೆಂಗಳೂರು ನಗರ ತೀವ್ರ ನೀರಿನ ಅಭಾವದಿಂದ ಬಳಲಿತ್ತು. ಈ ಸಂಧರ್ಭದಲ್ಲಿ ಬೆಂಗಳೂರು ಜಲಮಂಡಳಿ ಹಲವಾರು ಸುಸ್ಥಿರ ಯೋಜನೆಗಳನ್ನು ಅನುಷ್ಠಾನಗೊಳಿಸಿತು. ಅಲ್ಲದೇ, ತ್ಯಾಜ್ಯ ನೀರನ್ನು ಸಂಸ್ಕರಿಸುವ ನಿಟ್ಟಿನಲ್ಲಿ ಹಲವಾರು ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ. ಶೇಕಡಾ 80 ರಷ್ಟು ತ್ಯಾಜ್ಯ ನೀರನ್ನು ಸಂಸ್ಕರಿಸುವ ಹಾಗೂ ಅದನ್ನು ಅಂತರ್ಜಲ ಅಭಿವೃದ್ದಿಗೆ ಉಪಯೋಗಿಸುವ ತಂತ್ರಜ್ಞಾನ ಏಷ್ಯಾದಲ್ಲೆ ಹೆಸರುವಾಸಿಯಾಗಿದೆ. ಇದರ ಬಗ್ಗೆ ಅಧ್ಯಯನ ಮಾಡುವ ನಿಟ್ಟಿನಲ್ಲಿ ರಕ್ಷಣಾ ಸೇವೆಯ ಹಿರಿಯ ಅಧಿಕಾರಿಗಳು ಬಿಡಬ್ಲೂಎಸ್ಎಸ್ಬಿಗೆ ಭೇಟಿ ನೀಡಿದ್ದರು.
ಕಬ್ಬನ್ ಪಾರ್ಕ್ನಲ್ಲಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಅಲ್ಲಿ ಅಳವಡಿಸಲಾಗಿರುವ ತೃತೀಯ ಹಂತದ ಸಂಸ್ಕರಣಾ ತಂತ್ರಗಳ ಮಾಹಿತಿಯನ್ನು ಪಡೆದುಕೊಂಡರು. ನಂತರ ಕೇಂದ್ರ ಕಚೇರಿಗೆ ಭೇಟಿ ನೀಡಿ ಯುನೈಟೆಡ್ ನೇಷನ್ಸ್ ನ ಕ್ಲೈಮೇಟ್ ಚೇಂಜ್ ಸಂಸ್ಥೆಯಿಂದ ಅನುಮೋದಿತ ಹಲವಾರು ಸುಸ್ಥಿರ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಇಂಡಿಯನ್ ಇನ್ಸಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ಸ್ ಸಂಸ್ಥೆಯ ಪ್ರೋ. ಕೆ.ಕೆ ಪಾಂಡೆ ಅವರ ನೇತೃತ್ವದ ತಂಡದಲ್ಲಿದ್ದ ಅಧಿಕಾರಿಗಳಿಗೆ ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್ ಮಾಹಿತಿ ನೀಡಿದರು.