ಬೆಂಗಳೂರು: ಬೆಂಗಳೂರು ನಗರದಲ್ಲಿನ ನೂರಾರು ಅಮಾಯಕ ವ್ಯಾಪಾರಸ್ಥರ ಬಳಿ ಅಕ್ರಮ ಹಣ ವಸೂಲು ಮಾಡಲು ಮುಂದಾಗಿರುವ ಬಿಬಿಎಂಪಿಯ ಆರೋಗ್ಯ ವಿಭಾಗದ ಅಧಿಕಾರಿಗಳನ್ನು ಈ ಕೂಡಲೇ ಅಮಾನತ್ತು ಮಾಡಬೇಕೆಂದು ಪಕ್ಷದ ಬೆಂಗಳೂರು ನಗರ ಮಾಧ್ಯಮ ಉಸ್ತುವಾರಿ ಅನಿಲ್ ನಾಚಪ್ಪ ಇಂದಿಲ್ಲಿ ಆಗ್ರಹಿಸಿದರು.
ನಗರದ ಶಾಂತಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ವ್ಯಾಪಾರಸ್ಥರ ಬಳಿ ಹಣ ವಸೂಲಿ ಮಾಡಲು ಪದೇ ಪದೇ ಧಮಕಿ ಹಾಕುತ್ತಿದ್ದ ಅಧಿಕಾರಿಗಳ ವಿರುದ್ಧ ನೂರಾರು ವ್ಯಾಪಾರಸ್ಥರುಗಳ ಸಮೇತ ಬಿಬಿಎಂಪಿಯ ವಲಯ ಆಯುಕ್ತೆ ಸ್ನೇಹಲ್ ರಾಯಮನೆ ರವರ ಬಳಿ ದೂರನ್ನು ನೀಡಿ ಲಕ್ಷಾಂತರ ರೂಪಾಯಿಗಳ ಹಣ ವಸೂಲಿಗೆ ಮುಂದಾಗಿದ್ದ ಅಧಿಕಾರಿಗಳ ವಿರುದ್ಧ ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೆ ಈ ಕೂಡಲೇ ಅಮಾನತು ಮಾಡಬೇಕೆಂದು ಆಗ್ರಹಿಸಿದರು.
ಕಳೆದ ಅನೇಕ ದಿವಸಗಳಿಂದ ಆರೋಗ್ಯ ವಿಭಾಗದ ಕೆಲ ಭ್ರಷ್ಟ ಅಧಿಕಾರಿಗಳು ಈ ವ್ಯಾಪಾರಸ್ಥರ ಬಳಿ ಹಣಕ್ಕಾಗಿ ಪದೇ ಪದೇ ಪೀಡಿಸುತ್ತಿದ್ದಾರೆ ಹಾಗೂ ಲಕ್ಷಾಂತರ ರೂಪಾಯಿಗಳನ್ನು ಈಗಾಗಲೇ ವಸೂಲಿಯನ್ನು ಸಹ ಮಾಡಿದ್ದಾರೆ. ಲಕ್ಷಾಂತರ ರೂಪಾಯಿ ಬಂಡವಾಳವನ್ನು ಹಾಕಿಕೊಂಡು ವ್ಯಾಪಾರ ಮಾಡುತ್ತಿರುವ ಈ ವ್ಯಾಪಾರಿ ಸಮೂಹವು ಸರ್ಕಾರಕ್ಕೆ ತೆರಿಗೆ ಕಟ್ಟುತ್ತಿದ್ದರು ಸಹ ಭ್ರಷ್ಟ ಅಧಿಕಾರಿಗಳು ಇವರಿಗೆ ಯಾವುದೇ ನೆರವನ್ನು ನೀಡುವುದನ್ನು ಬಿಟ್ಟು ಅವರ ಬಳಿಯೇ ಹಸ್ತ ವಸೂಲಿಗೆ ಮುಂದಾಗಿರುವುದು ಬಿಬಿಎಂಪಿಯ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.
ಇಂತಹ ಭ್ರಷ್ಟ ಅಧಿಕಾರಿಗಳನ್ನು ಈ ಕೂಡಲೇ ಅಮಾನತ್ತು ಮಾಡುವ ಮೂಲಕ ವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಅನಿಲ್ ನಾಚಪ್ಪ ಆಗ್ರಹಿಸಿದರು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಲಾಗಿದ್ದು ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಿ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ವ್ಯಾಪಾರಸ್ಥರ ನಿಯೋಗದೊಂದಿಗೆ ಶಾಂತಿನಗರ ವಿಧಾನಸಭಾ ಕ್ಷೇತ್ರದ ಪಕ್ಷದ ಮುಖಂಡ ಶಿವಕುಮಾರ್ ಸಹ ಉಪಸ್ಥಿತರಿದ್ದರು.