ಬೆಂಗಳೂರು: ತೆರಿಗೆ ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ರಾಜ್ಯ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದು, ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರದ ಒಟ್ಟಾರೆ ತೆರಿಗೆ ಆದಾಯಕ್ಕೆ ಕರ್ನಾಟಕವು ಸುಮಾರು 8% ಕೊಡುಗೆ ನೀಡಿದ್ದರೂ, ನಾವು ನಿಧಿ ಹಂಚಿಕೆಯ 3.64% ಅನ್ನು ಮಾತ್ರ ಪಡೆಯುತ್ತೇವೆ. ರಾಜ್ಯದ ಜನ ಉದಾರವಾಗಿದ್ದರೂ, ಜನಸಂಖ್ಯೆ, ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆ ವಿಚಾರದಲ್ಲಿ ಕರ್ನಾಟಕದ ಪರಿಸ್ಥಿತಿಗಳಿಗೆ ವಿಶೇಷ ಗಮನ ನೀಡಬೇಕು. ಕರ್ನಾಟಕ ದೊಡ್ಡ ರಾಜ್ಯವಾಗಿದೆ ಮತ್ತು ಬೆಂಗಳೂರು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಹೊರತುಪಡಿಸಿ, ಉತ್ತರ ಕರ್ನಾಟಕದ ಅನೇಕ ಪ್ರದೇಶಗಳು ಇನ್ನೂ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿದೆ. ಈ ಜಿಲ್ಲೆಗಳನ್ನು ತ್ವರಿತವಾಗಿ ರಾಷ್ಟ್ರೀಯ ಸರಾಸರಿಗೆ ತರಲು ದೊಡ್ಡ ಹಣಕಾಸು ಹಂಚಿಕೆ ಅಗತ್ಯವಿದೆ ಎಂದರು.
ಮುಖ್ಯವಾಗಿ ಮಳೆ ಆಧಾರಿತ ಕೃಷಿಯನ್ನು ಅವಲಂಬಿಸಿರುವ ಉತ್ತರ ಕರ್ನಾಟಕದ ಭಾಗಗಳು ಸತತ ಬರ ಮತ್ತು ಇತರ ನೈಸರ್ಗಿಕ ವಿಕೋಪಗಳಿಂದ ಮತ್ತಷ್ಟು ಆರ್ಥಿಕ ಕುಸಿತ ಕಂಡಿವೆ. ಕೇಂದ್ರದ ಹಂಚಿಕೆಯನ್ನು ಸರಿಪಡಿಸದಿದ್ದರೆ ಮತ್ತು ಹೆಚ್ಚಿಸದ ಹೊರತು, ಈ ಜಿಲ್ಲೆಗಳ ಅಭಿವೃದ್ಧಿ ಮಾಡುವುದು ಸವಾಲಾಗಿದೆ. ಈ ಅಂಶಗಳನ್ನು ಪರಿಗಣಿಸಿ, ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರದ ನಿಧಿಯ ಪ್ರಮಾಣವು ಹೆಚ್ಚಾಗಬೇಕಾಗಿತ್ತು 2015-2020ರಲ್ಲಿ 4.71% ಇದ್ದ ನಿಧಿ ಹಂಚಿಕೆ 2020-2025 ರಲ್ಲಿ 3.64% ಗೆ ಕಡಿತಗೊಳಿಸಿರುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಚಂದ್ರು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ರಾಜ್ಯದ ಬರಪರಿಹಾರಕ್ಕಾಗಿ ₹18,177 ಕೋಟಿ ಕೇಳಿದ್ದರೆ ಕೇಂದ್ರ ಸರ್ಕಾರ ಏನೂ ಕೊಟ್ಟಿಲ್ಲ. 15ನೇ ಹಣಕಾಸು ಆಯೋಗದಿಂದ ವಿಶೇಷ ಅನುದಾನ ₹5,495 ಕೋಟಿ ಕೂಡ ಕೊಟ್ಟಿಲ್ಲ. ಸಹಕಾರಿ ಯೋಜನೆಗಳಲ್ಲಿ ಅನುದಾನ ₹33,000 ಕೋಟಿ, ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗೆ ₹5,300 ಕೋಟಿ, ಪರಿಷ್ಕೃತ ತೆರಿಗೆ ಪಾಲು ನೀತಿಯಿಂದಾಗಿ ಕೊರತೆ ₹62,098 ಕೋಟಿ ಬರಬೇಕಿದೆ. ಪಕ್ಷ ರಾಜಕಾರಣ, ಅನುದಾನ ಹಂಚಿಕೆ ವಿಳಂಬ ರಾಜ್ಯದ ಜನರ ಜೀವನದ ಮೇಲೆ ಪರಿಣಾಮ ಬೀರುತ್ತಿವೆ. ಪ್ರಧಾನಿ ನರೇಂದ್ರ ಮೋದಿ ತಕ್ಷಣ ಮಧ್ಯಸ್ಥಿಕೆ ವಹಿಸಿ ಸರಿಪಡಿಸಬೇಕೆಂದು ಆಗ್ರಹಿಸಿದ್ದಾರೆ. ಕರ್ನಾಟಕದ ಜನ ಬಿಜೆಪಿ ಮೇಲೆ ನಂಬಿಕೆ ಇಟ್ಟು ಕಳೆದ ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನಗಳನ್ನು ಗೆಲ್ಲಿಸಿದ್ದಾರೆ. ಅವರ ನಂಬಿಕೆಗೆ ನ್ಯಾಯ ಒದಗಿಸಿಕೊಡಬೇಕು ಎಂದು ಚಂದ್ರು ಅವರು ಒತ್ತಾಯಿಸಿದ್ದಾರೆ.