ಬೆಂಗಳೂರು: ರಾಜ್ಯ ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದೇ ಜಾತಿ ಗಣತಿ ವರದಿಯನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಬೇಕು. ನಂತರ ಸಾರ್ವಜನಿಕರಿಂದ ಚರ್ಚೆ, ಅಭಿಪ್ರಾಯ ಹಾಗೂ ಪ್ರತಿಕ್ರಿಯೆಗಳನ್ನು ಸ್ವೀಕರಿಸಿ, ಮೀಸಲಾತಿಯ ರೂಪುರೇಷೆಗಳನ್ನು ಸಿದ್ಧಪಡಿಸಬೇಕು. ಈ ಮೂಲಕ “ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು” ಎಂಬ ತಮ್ಮದೇ ಘೋಷವಾಕ್ಯವನ್ನು ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿ ಎಎಪಿ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ರಾಜ್ಯದ ಕೆಲ ಪಟ್ಟಭದ್ರಾ ಹಿತಾಸಕ್ತಿಗಳು ಕಾಂತರಾಜ ಅರಸ್ ಮಂಡಿಸಿರುವ ಶೈಕ್ಷಣಿಕ, ಸಾಮಾಜಿಕ, ಹಾಗೂ ಜಾತಿ ಜನಗಣತಿ ವರದಿ ಮಂಡನೆಗೆ ಅಡ್ಡಿಪಡಿಸುತ್ತಿರುವುದು ಸರಿಯಲ್ಲ. ಈ ವರದಿ ಇನ್ನೂ ಯಾರ ಕೈಗೂ ಸೇರಿಲ್ಲ. ಆದರೂ ಅದನ್ನು ಹತ್ತಿಕ್ಕುವ ಪ್ರಯತ್ನಗಳು ಮೇಲ್ವರ್ಗದ ಸಮುದಾಯದ ಕೆಲವು ಮುಖಂಡರಿಂದ ನಡೆಯುತ್ತಿರುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಚಂದ್ರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಜಾತಿ ಸಮೀಕ್ಷೆ ನಡೆಸುವ ಮೂಲಕ ದೇಶದ ಎಲ್ಲ ರಾಜ್ಯಗಳಿಗೆ ನಮ್ಮ ರಾಜ್ಯ ಮೇಲ್ಪಂಕ್ತಿಯನ್ನು ಹಾಕಿತ್ತು. ಈ ಸಮೀಕ್ಷೆಯು ಹಿಂದುಳಿದ ವರ್ಗಕ್ಕೆ ಸೀಮಿತವಾಗಿ ನಡೆದಿಲ್ಲ. ಎಲ್ಲ ಜಾತಿ ಸಮುದಾಯಗಳ ಸಮೀಕ್ಷೆ ಮಾಡಲಾಗಿದೆ. ಒಕ್ಕಲಿಗ, ಲಿಂಗಾಯತ, ಬ್ರಾಹ್ಮಣ ಸಮುದಾಯಗಳ ಆದಿಯಾಗಿ ಎಲ್ಲ ಜಾತಿಗಳಲ್ಲಿ ಇರುವ ಬಡವರ ಮಾಹಿತಿಯೂ ಅದರಲ್ಲಿದೆ. ಹಾಗಾಗಿ ಒಂದು ಅರ್ಥದಲ್ಲಿ ಜಾತಿ ಸಮೀಕ್ಷೆ ವಿರೋಧಿಗಳು ತಮ್ಮದೇ ಜಾತಿಯ ಬಡವರ ವಿರೋಧಿಗಳಾಗಿದ್ದಾರೆ. ತಮ್ಮದೇ ಜಾತಿಯ ಭೂರಹಿತರನ್ನು ವಿರೋಧಿಸುತ್ತಿದ್ದಾರೆ. ಇವರೆಲ್ಲರೂ ಸಮೀಕ್ಷೆ ನಡೆಯುವ ಸಂದರ್ಭದಲ್ಲಿ ಯಾವುದೇ ವಿರೋಧವನ್ನು ಸಹ ಮಾಡಿರಲಿಲ್ಲ ಎಂದು ಮುಖ್ಯಮಂತ್ರಿ ಚಂದ್ರು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ಅಹಿಂದ ವರ್ಗಗಳು, ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ನ್ಯಾಯ ಸಿಗದೇ ಅವಕಾಶಗಳಿಂದ ವಂಚಿತವಾಗಿವೆ. ಈ ಸಮೀಕ್ಷೆಯು ಯಾವುದೇ ಜಾತಿಗಳ ಮೇಲಾಟಕ್ಕಾಗಿ ಮಾಡಿರುವಂತಹ ಪ್ರಕ್ರಿಯೆಯಲ್ಲ ಎಂಬುದನ್ನು ಮನಗಾಣಬೇಕಿದೆ. ಎಲ್ಲೂ ಲೋಪವಾಗದಂತೆ ಸುಮಾರು ₹170 ಕೋಟಿ ಕನ್ನಡಿಗರ ತೆರಿಗೆ ಹಣವನ್ನು ಖರ್ಚು ವೈಜ್ಞಾನಿಕವಾಗಿ ತಯಾರಿಸಿರುವ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡದೆ ಅವಗಣಿಸುವುದು ಸರಿಯಲ್ಲ. ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಎಚ್. ಡಿ. ಕುಮಾರಸ್ವಾಮಿ ಹಾಗೂ ಬಸವರಾಜ್ ಬೊಮ್ಮಾಯಿ ಅವರು ಕೆಲವು ಮೇಲ್ವರ್ಗದ ಜಾತಿಗಳ ರಾಜಕೀಯ ಒತ್ತಡಕ್ಕೆ ಮಣಿದು ಜಾತಿ ಗಣತಿ ವರದಿಯನ್ನು ಸ್ವೀಕರಿಸಲಿಲ್ಲ. ಸಮ ಸಮಾಜ ನಿರ್ಮಾಣ ಮಾಡಬೇಕು ಎಂಬ ಕನಸು ಹೊತ್ತಿರುವ ನೀವು ಈ ವರದಿಯನ್ನು ಸ್ವೀಕರಿಸದಿದ್ದರೆ ನಿಮ್ಮ ಕನಸಿಗೆ ನೀವೇ ದ್ರೋಹ ಬಗೆದಂತೆ ಎಂದು ಪತ್ರದಲ್ಲಿ ಮುಖ್ಯಮಂತ್ರಿ ಚಂದ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ 1,351 ಜಾತಿಗಳ ಪಟ್ಟಿಯನ್ನು ಸಿದ್ಧಪಡಿಸಿರುವುದಾಗಿ ಹೇಳಲಾಗುತ್ತಿದೆ. ಮೊದಲು ವರದಿ ಸಾರ್ವಜನಿಕರ ಕೈಗೆ ಸೇರಲಿ. ಆ ನಂತರ ಏನೇ ಆಕ್ಷೇಪಗಳಿದ್ದರೂ ಸಲ್ಲಿಸಬಹುದು. ಆದರೆ ವರದಿ ಪ್ರಕಟಗೊಳ್ಳುವ ಮೊದಲೇ ವಿರೋಧಿಸುತ್ತಿರುವುದು ಸ್ವಾಗತಾರ್ಹ ನಡೆಯಲ್ಲ. ಮುಖ್ಯಮಂತ್ರಿಗಳು ಇಂತಹ ಯಾವುದೇ ಒತ್ತಡಗಳಿಗೆ ಸೊಪ್ಪು ಹಾಕದೆ ತಕ್ಷಣ ವರದಿಯನ್ನು ಬಿಡುಗಡೆ ಮಾಡಬೇಕು ಎಂದು ಪತ್ರದ ಮೂಲಕ ಆಗ್ರಹಿಸಿದ್ದಾರೆ.