ಬೆಂಗಳೂರು: ದೆಹಲಿ ಮತ್ತು ಪಂಜಾಬ್ ಮಾದರಿಯಲ್ಲಿ ರಾಜ್ಯದ ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸುವಂತೆ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷರಾದ ಡಾ. ಮುಖ್ಯಮಂತ್ರಿ ಚಂದ್ರು, ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಕಳೆದ ಒಂದು ವಾರದಿಂದ ರಾಜ್ಯದ ಅತಿಥಿ ಉಪನ್ಯಾಸಕರು ತರಗತಿಗಳನ್ನು ಬಹಿಷ್ಕರಿಸಿ, ತುಮಕೂರು ಸಿದ್ಧಗಂಗಾ ಮಠದಿಂದ ಬೆಂಗಳೂರಿಗೆ ಬೃಹತ್ ಪಾದಯಾತ್ರೆ ಮೂಲಕ ಆಗಮಿಸಿದ್ದು, ನಗರದ ಫ್ರೀಡಂ ಪಾರ್ಕ್ನಲ್ಲಿ ಧರಣಿ ಮತ್ತು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಆಮ್ ಆದ್ಮಿ ಪಕ್ಷ ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಬೆಂಬಲ ನೀಡಿದ್ದು, ಪ್ರತಿಭಟನೆಯಲ್ಲಿ ಭಾಗವಹಿಸಿದೆ.
ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 11 ಸಾವಿರಕ್ಕಿಂತ ಹೆಚ್ಚಿನ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಇವರಿಗೆ ಸರಿಯಾದ ವೇತನ ಸಿಗುತ್ತಿಲ್ಲ. ಸಾವಿರಾರು ಉಪನ್ಯಾಸಕರ ವಯೋಮಿತಿ ಮೀರುತ್ತಿದ್ದು, ಕೆಲಸ ಕಾಯಂ ಆಗದೇ ಇರುವುದು ಆತಂಕಕ್ಕೆ ಕಾರಣವಾಗಿದೆ. ಅತಿಥಿ ಉಪನ್ಯಾಸಕರ ವೇತನ ಕಡಿಮೆ ಇದ್ದು, ಅದೂ ಕೂಡ ಸಮಯಕ್ಕೆ ಸರಿಯಾಗಿ ಪಾವತಿಯಾಗುತ್ತಿಲ್ಲ. ಅತಿಥಿ ಅಪನ್ಯಾಸಕ ಎನ್ನುವ ಅವೈಜ್ಞಾನಿಕ ಪದ್ಧತಿಯಿಂದ ಶಿಕ್ಷಣದ ಗುಣಮಟ್ಟ ಕೂಡ ಹಾಳಾಗುತ್ತಿದೆ ಎಂದು ಮುಖ್ಯಮಂತ್ರಿ ಚಂದ್ರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಯಂ ಗೊಳಿಸುವುದಾಗಿ ಕಾಂಗ್ರೆಸ್ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಭರವಸೆ ನೀಡಿತ್ತು. ಈಗ ಕೊಟ್ಟ ಮಾತಿನಂತೆ ದೆಹಲಿ ಮತ್ತು ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರದ ಮಾದರಿಯಲ್ಲಿ ವಿಶೇಷ ನಿಯಮಾವಳಿ ರೂಪಿಸಿ ಸೇವೆ ಕಾಯಂ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ.