ಬೆಂಗಳೂರು: ದಿನನಿತ್ಯದ ಕಾರ್ಯಗಳಲ್ಲಿ ಒತ್ತಡ ಹೆಚ್ಚಾಗುವುದು ಸಹಜ, ಒತ್ತಡವನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸನ್ನದ್ದರಾಗಿರಬೇಕು. ಇದರಿಂದ ನಮ್ಮ ಕಾರ್ಯಕ್ಷಮತೆ ಹೆಚ್ಚಾಗುತ್ತದೆ ಎಂದು ಮೋಟಿವೇಷನಲ್ ಸ್ಪೀಕರ್ ಡಾ. ರೋಹಿತ್ ನಾಗೇಶ್ ಅಭಿಪ್ರಾಯಪಟ್ಟರು.
ಇಂದು ಕಾವೇರಿ ಭವನದ ಕೇಂದ್ರ ಕಚೇರಿಯಲ್ಲಿ ಬೆಂಗಳೂರು ಜಲಮಂಡಳಿ ಅಭಿಯಂತರರ ಸಂಘ ಆಯೋಜಿಸಿದ್ದ “ವ್ಯಕ್ತಿತ್ವ ವಿಕಸನ ಮತ್ತು ಒತ್ತಡರಹಿತ ಜೀವನ” ಎನ್ನುವ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಜವಾಬ್ದಾರಿಯುತ ಸ್ಥಾನದಲ್ಲಿ ಕಾರ್ಯನಿರ್ವಹಣೆಯ ಸಂಧರ್ಭದಲ್ಲಿ ಒತ್ತಡಕ್ಕೆ ಒಳಗಾಗುವುದು ಸಹಜ. ಅದನ್ನು ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸನ್ನದ್ದರಾಗಿಬೇಕು. ದೈಹಿಕ ಆರೋಗ್ಯ ಹಾಗೂ ಮಾನಸಿಕ ಆರೋಗ್ಯದತ್ತ ಹೆಚ್ಚಿನ ಆದ್ಯತೆ ನೀಡುವ ಮೂಲಕ ಒತ್ತಡವನ್ನು ನಿಭಾಯಿಸುವುದು ಹಾಗೂ ಹೆಚ್ಚಿನ ಒತ್ತಡಕ್ಕೆ ಒಳಗಾಗದಂತೆ ಜೀವನವನ್ನು ರೂಪಿಸಿಕೊಳ್ಳುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಜೀವನಶೈಲಿಯ ಬದಲಾವಣೆಗೆ ಆದ್ಯತೆ ನೀಡಬೇಕು. ಸಮರ್ಪಕ ಒತ್ತಡ ನಿರ್ವಹಣೆಯಿಂದ ನಮ್ಮ ಕಾರ್ಯಕ್ಷಮತೆ ಬಹಳಷ್ಟು ಹೆಚ್ಚಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಧಾನ ಮುಖ್ಯ ಅಭಿಯಂತರರಾದರಾದ ಬಿ ಸುರೇಶ್, ಬೆಂಗಳೂರು ಜಲ ಮಂಡಳಿ ಅಭಿಯಂತರರ ಸಂಘದ ಅಧ್ಯಕ್ಷರಾದ ಬಿ ಸಿ ಗಂಗಾಧರ್ , ಮಂಡಳಿಯ ಆಡಳಿತಾಧಿಕಾರಿಯಾದ ರಂಜಿತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.