ಚಿಕ್ಕಬಳ್ಳಾಪುರ; ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ರಕ್ಷಾರಾಮಯ್ಯ ಅವರಿಗೆ ಅಹಿಂದ ಮತ್ತು ಒಕ್ಕಲಿಗ ಸಮುದಾಯದ ಅಖಂಡ ಬೆಂಬಲ ದೊರೆತಿದೆ.
ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲೇಬೇಕು ಎಂಬ ಸಂಕಲ್ಪದೊಂದಿಗೆ ನಗರದಲ್ಲಿ “ಅಹಿಂದ ಒ ಬೃಹತ್ ಸಮಾವೇಶ” ನಡೆಯಿತು.
ಚಿಕ್ಕಬಳ್ಳಾಪುರದ ಶಾಸಕರಾದ ಪ್ರದೀಪ್ ಈಶ್ವರ್ ನೇತೃತ್ವದಲ್ಲಿ ಸಚಿವರಾದ ಡಾ. ಎಂ.ಸಿ ಸುಧಾಕರ್ ಅವರ ಮುಂದಾಳತ್ವದಲ್ಲಿ, ವಿಧಾನಪರಿಷತ್ ಸದಸ್ಯರಾದ ಡಾ.ಎಂ.ಆರ್ ಸೀತಾರಾಮ್, ನಾಗರಾಜ್ ಯಾದವ್, ಮಾಜಿ ಸಚಿವರಾದ ಎಚ್.ಎಂ. ರೇವಣ್ಣ, ಮಾಜಿ ಶಾಸಕರಾದ ಕೆ.ಪಿ. ಬಚ್ಚೇಗೌಡ,ಅವರ ಸಮ್ಮುಖದಲ್ಲಿ ಸಮಾವೇಶ ಯಶಸ್ವಿಯಾಗಿ ನಡೆಯಿತು.
ಜೆಡಿಎಸ್, ಬಿಜೆಪಿ ತೊರೆದು ನೂರಾರು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು. ಯುವಕರಿಂದ ಹಿಡಿದು ಹಿರಿಯರವೆರೆಗೆ ಎಲ್ಲಾ ಹಂತದ ನಾಯಕರು ಕಾಂಗ್ರೆಸ್ ಗೆ ಬೆಂಬಲ ವ್ಯಕ್ತಪಡಿಸಿದರು.
ಬಿಜೆಪಿ – ಜೆಡಿಎಸ್ ಮೈತ್ರಿಯಿಂದ ತಮಗೆ ಅಸಮಾಧಾನವಾಗಿದ್ದು, ತಳಮಟ್ಟದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಮೈತ್ರಿಮಾಡಿಕೊಳ್ಳಲಾಗಿದೆ. ನಾವು ಚಿಕ್ಕಬಳ್ಳಾಪುರದಲ್ಲಿ ಮೈತ್ರಿ ವಿರೋಧಿಸಿ ಕಾಂಗ್ರೆಸ್ ಪಕ್ಷ ಸೇರುತ್ತಿರುವುದಾಗಿ ಯುವ ಕಾರ್ಯಕರ್ತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಜಿ ಸಚಿವರಾದ ಎಚ್.ಎಂ. ರೇವಣ್ಣ ಮಾತನಾಡಿ, ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ರಕ್ತ ರಹಿತ ಕ್ರಾಂತಿ ಮಾಡಿದ್ದು ಕಾಂಗ್ರೆಸ್ ಮುಖ್ಯಮಂತ್ರಿ ದೇವರಾಜ ಅರಸು. ಅವರು ನಮ್ಮ ನಿಜವಾದ ಹಿಂದುಳಿದ ವರ್ಗಗಳ ಹರಿಕಾರರು. ಹಿಂದುಳಿದ ವರ್ಗದವರಿಗೆ ರಾಜಕೀಯ ಸ್ವಾತಂತ್ರ್ಯ ದೊರಕಿಸಿಕೊಟ್ಟಿದ್ದು ದೇವರಾಜ ಅರಸರು ಎಂದು ಸ್ಮರಿಸಿಕೊಂಡರು.
ಹಿಂದುಳಿದ ವರ್ಗಗಳಿಗೆ ಕಾಂಗ್ರೆಸ್ ಕೊಡುಗೆ ಅನನ್ಯ. ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರು ಆರ್ಥಿಕ ಸ್ವಾತಂತ್ರ್ಯ ದೊರಕಿಸಿಕೊಟ್ಟರು. ದೇಶದಲ್ಲಿ ಅವರು ನೀಡಿದ 20 ಅಂಶಗಳ ಕಾರ್ಯಕ್ರಮ ಅನನ್ಯವಾದದ್ದು. ಇದರಡಿ ಮಹಿಳೆಯರ ಶ್ರೇಯೋಭಿವೃದ್ಧಿಗೆ ಒತ್ತು ನೀಡಲಾಗಿತ್ತು. ವೃದ್ಧಾಪ್ಯ ವೇತನ, ಪಡಿತರ ವಿತರಣೆ ಮಾಡಿದ್ದು ಕಾಂಗ್ರೆಸ್ ಪಕ್ಷ. ಉಳುವವನೇ ಭೂಮಿಯ ಒಡೆಯ ಕಾರ್ಯಕ್ರಮ ಜಾರಿಗೆ ತಂದಿದ್ದು ನಮ್ಮ ಹೆಮ್ಮೆ ಎಂದು ಹೇಳಿದರು.