ಬೆಂಗಳೂರು :ಪಂಚೆಯ ದಡಿ ಮತ್ತು ರಾಜ್ಯದ ಗಡಿ ಭದ್ರವಾಗಿರಬೇಕುʼʼ ಎನ್ನುತ್ತಲೇ ಸದ್ದಿಲ್ಲದೆ ನಾಡಿನ ಗಡಿಭಾಗದಲ್ಲಿ ಕನ್ನಡ ಉಳಿಸಿ-ಬೆಳೆಸುವಲ್ಲಿ ತಮ್ಮನ್ನು ತಾವು ತೊಡಗಿಕೊಳ್ಳುವ ಮೂಲಕ ‘ಕನ್ನಡದ ಸ್ವಾಮೀಜಿ’ ಎಂದೇ ಖ್ಯಾತಿಯಾಗಿದ್ದ ʻಚಿಂಚಣಿಯ ಶ್ರೀ ಅಲ್ಲಮಪ್ರಭು ಮಹಾಸ್ವಾಮೀಜಿʼ ಅವರು ಲಿಂಗೈಕ್ಯರಾಗಿರುವುದು ಕನ್ನಡ ನಾಡಿಗೆ ತುಂಬಲಾರದ ನಷ್ಟ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೊಶಿ ಅವರು ಕಂಬನಿ ಮಿಡಿದಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚಣಿ ಮಠದ ಸ್ವಾಮೀಜಿಯಾಗಿದ್ದ ಇವರು ಕನ್ನಡ ಕೈಂಕರ್ಯದಲ್ಲಿ ತೋಡಗಿಸಿಕೊಳ್ಳುವ ಮೂಲಕ ಅಪಾರ ಭಕ್ತರನ್ನು, ಅನುಯಾಯಿಗಳನ್ನು ಹೊಂದಿದ್ದರು. ಕೆಲ ದಿನಗಳಿಂದ ಅವರು ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದು, ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕ್ಕೋಡಿ ನಗರದಿಂದ 6 ಕಿ.ಮೀ ದೂರದಲ್ಲಿ ಇರುವ ಚಿಂಚಣಿ ಎಂಬ ಪುಟ್ಟ ಗ್ರಾಮದಲ್ಲಿನ ಶ್ರೀ ಅಲ್ಲಮಪ್ರಭು ಸಿದ್ದಸಂಸ್ಥಾನ ಮಠದ ಮೂಲಕ ಕನ್ನಡ ಕಾಯಕದಲ್ಲಿ ತೊಡಗಿಕೊಂಡು ಇಡೀ ನಾಡಿನಾದ್ಯಂತ ಚಿರಪರಿಚಿತವಾಗಿದ್ದರು.
ಕನ್ನಡ ನಾಡು, ನುಡಿ, ಗಡಿ, ಸಂಸ್ಕೃತಿ ಸಂರಕ್ಷಣೆ ಮತ್ತು ಸಂವರ್ಧನೆಯ ದೀಕ್ಷೆ ತೊಟ್ಟ ಶ್ರೀ ಅಲ್ಲಮಪ್ರಭುಗಳು ಕನ್ನಡದ ಅಸ್ಮಿತೆಯನ್ನು ಗಟ್ಟಿಗೊಳಿಸುವಲ್ಲಿ ಕ್ರಿಯಾಶೀಲರಾಗಿದ್ದರು. ಪ್ರತಿ ವರ್ಷ ಕನ್ನಡ ರಾಜ್ಯೋತ್ಸವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಕನ್ನಡ ಜಾಗೃತಿಯುಂಟು ಮಾಡುತ್ತ, ಕನ್ನಡ ನಿತ್ಯೋತ್ಸವ ಆಗಬೇಕು ಎಂಬ ಕನಸು ಕಟ್ಟಿಕೊಂಡ ಮಾಹಾನುಭಾವರಾಗಿದ್ದರು ಎಂದು ನಾಡೋಜ ಡಾ. ಮಹೇಶ ಜೋಶಿ ಅವರು ಶ್ರೀಗಳ ಕನ್ನಡಾಭಿಮಾನವನ್ನು ನೆನಪಿಸಿಕೊಂಡರು.
ಶ್ರೀ ಅಲ್ಲಮಪ್ರಭು ಮಹಾಸ್ವಾಮಿಗಳು ಚಿಂಚಣಿಯ ಮಠದಲ್ಲಿಯೇ ʻಜನಕಲ್ಯಾಣ ಸಂಸ್ಥೆʼಯನ್ನು ಹುಟ್ಟುಹಾಕಿ ಆ ಮೂಲಕ ಕನ್ನಡ ಜಾಗೃತಿ ಪುಸ್ತಕ ಮಾಲೆಯನ್ನು ಪ್ರಕಟಿಸುತ್ತ ಬಂದಿದ್ದರು. ಇದುವರೆಗೆ ಆಧುನಿಕ ಕರ್ನಾಟಕದ ಆತಂಕಗಳು, ಕನ್ನಡತನ ಮತ್ತು ಭಾರತೀಯತೆ, ಮಹಾಜನ ವರದಿ ಒಂದು ಅವಲೋಕನ, ಕನ್ನಡದ ಕೋಟೆ, ಕೆಎಲ್ಇ ಸಂಪ್ರದಾಯದ ಇತಿಹಾಸ, ರಂಗಭೂಮಿ-ಕನ್ನಡದ ಸಂವೇದನೆ, ನಮ್ಮ ನಾಡು, ನುಡಿ ಮತ್ತು ಗಡಿ, ಕನ್ನಡ ಕಟ್ಟೋಣ, ಕರ್ನಾಟಕ ಏಕೀಕರಣ ಚಳವಳಿ, ಕನ್ನಡ-ಕನ್ನಡಿಗ, ಕರ್ನಾಟಕ ಏಕೀಕರಣ ಚಳವಳಿ ಮತ್ತು ಮಹಿಳೆ, ಮಹಾದಾಯಿ ನೀರಿಗಾಗಿ ಹೋರಾಟ ಮತ್ತು ಕನ್ನಡಕ್ಕೆ ಕೈ ಎತ್ತು ಇತ್ಯಾದಿ 45 ಕ್ಕೂ ಹೆಚ್ಚು ಮೌಲಿಕ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಮರಾಠಿಯ ಹಲವು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಕನ್ನಡ-ಮರಾಠಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಹೆಚ್ಚಿಸಿದ್ದವರು ಶ್ರೀ ಅಲ್ಲಮಪ್ರಭುಗಳು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದ ಅವರು ಕಾಲ ಕಾಲಕ್ಕೆ ಕನ್ನಡ ಉಳಿಸಿ ಬೆಳೆಸುವಲ್ಲಿ, ನಾಡು ನುಡಿ ಸಂಸ್ಕೃತ ವಿಷಯದಲ್ಲಿ, ಕನ್ನಡ ಶಾಲೆ ಉಳಿಸಿ ಬೆಳೆಸುವ ಹೋರಾಟದಲ್ಲಿ ನಮ್ಮೊಂದಿಗಿದ್ದರು. ಕನ್ನಡ ಪರವಾದ ಅಪರೂಪದ ಪುರಾತನ ದಾಖಲೆಗಳನ್ನು ಸಂಗ್ರಹಿಸುವ ಜೊತೆಗೆ ಅದನ್ನು ಕನ್ನಡದ ಹೋರಾಟಕ್ಕೆ ಬಳಸಿಕೊಳ್ಳುವಂತೆ ಮಾರ್ಗದರ್ಶನ ಮಾಡುತ್ತಿದ್ದರು.
ದೇಶ-ವಿದೇಶದ ಕರೆನ್ಸಿಗಳನ್ನು ಸಂಗ್ರಹಿಸುವ ಮೂಲಕ ಹಾಗೂ ಜಗತ್ತಿನಲ್ಲಿ ಅಪರೂಪ ಎನ್ನಲಾದ ಬೋನ್ಸಾಯ್ ಸಸ್ಯ ಬೆಳೆಸುವ ಹವ್ಯಾಸವನ್ನು ಹೊಂದಿದ್ದ ಸ್ವಾಮಿಗಳ ಜೊತೆಗೆ ತಾವು ನಿರಂತರ ಸಂಪರ್ಕದಲ್ಲಿ ಇದ್ದೆವು. ಕನ್ನಡ ಸಾಹಿತ್ಯ ಪರಿಷತ್ತಿನ ಇತ್ತೀಚಿನ ದಿನಗಳ ಏಳಿಗೆಯನ್ನು ನೋಡಿ ಕನ್ನಡ ಗಟ್ಟಿಯಾಗುತ್ತಿದೆ ಎನ್ನುವ ತಮ್ಮ ಇಂಗಿತವನ್ನು ತಿಳಿಸಿದ್ದರು. ತಮ್ಮ ಆರೋಗ್ಯ ಸುಧಾರಣೆ ಆದ ತಕ್ಷಣ ಮೊದಲ ಬೇಟಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ ನೀಡುವುದಾಗಿ ಹೇಳಿದ್ದರು. ಆದರೆ ಇಂದು ಚಿಂಚಣಿಯ ಶ್ರೀ ಅಲ್ಲಮಪ್ರಭು ಮಹಾಸ್ವಾಮಿಗಳು ನಮ್ಮನ್ನು ಅಗಲಿದ್ದಾರೆ ಎನ್ನುವ ಸಂಗತಿ ಆಘಾತ ತಂದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಸಂತಾಪ ಸೂಚಿಸಿದ್ದಾರೆ.