ಬೆಂಗಳೂರು: ಇಂಡಿ ತಾಲ್ಲೂಕು ಲಚ್ಯಾಣ ಗ್ರಾಮದಲ್ಲಿ ಕೊಳವೆಬಾವಿಗೆ ಬಿದ್ದಿದ್ದ 14 ತಿಂಗಳ ಮಗುವನ್ನು 20 ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಎಲ್ಲರನ್ನೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ ಅವರು ಶ್ಲಾಘಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್, ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕಾರ್ಯಾಚರಣೆಗೆ ಸಹಕರಿಸಿದ ಸ್ಥಳೀಯ ಜನರು ಹಾಗೂ ನೇತೃತ್ವ ವಹಿಸಿದ ಜಿಲ್ಲಾಡಳಿತದ ಬಗ್ಗೆಯೂ ಪಾಟೀಲ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ಬೋರ್ವೆಲ್ ಗೆ ಜಾರಿದ್ದ ಮಗುವನ್ನು (ಸಾತ್ವಿಕ) ಜೀವಂತವಾಗಿ ರಕ್ಷಿಸಲು ಸಾಧ್ಯವಾಗಿರುವುದು ಅತ್ಯಂತ ಸಮಾಧಾನ ನೀಡಿದೆ ಎಂದಿದ್ದಾರೆ.
ಘಟನೆ ನಡೆದಿರುವ ಸುದ್ದಿ ಬುಧವಾರ ಸಂಜೆ ತಿಳಿಯುತ್ತಿದ್ದಂತೆಯೇ ತಕ್ಷಣ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲು ಸಚಿವರು ಜಿಲ್ಲಾಡಳಿತಕ್ಕೆ ಸೂಚನೆ ಕೊಟ್ಟಿದ್ದರು. ಗುರುವಾರ ಮಧ್ಯಾಹ್ನ ಕಾರ್ಯಾಚರಣೆ ಯಶಸ್ವಿಯಾಗಿ ಮುಗಿಯುವ ತನಕ ಜಿಲ್ಲಾಡಳಿತದೊಂದಿಗೆ ಪಾಟೀಲ ಅವರು ನಿರಂತರ ಸಂಪರ್ಕದಲ್ಲಿದ್ದರು.
ತೆರೆದ ಬೋರ್ ವೆಲ್: ಸರ್ವೆ ನಡೆಸಿ ಪ್ರಕರಣ ದಾಖಲಿಸಲು ಸೂಚನೆ
ಇದೆ ವೇಳೆ, ಸಚಿವ ಪಾಟೀಲ ಅವರು ಮುಚ್ಚದೆ ಹಾಗೆಯೇ ಬಿಟ್ಟಿರುವ ಕೊಳವೆಬಾವಿಗಳ ಬಗ್ಗೆ ಜಿಲ್ಲೆಯಾದ್ಯಂತ ಸರ್ವೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೊಳವೆಬಾವಿಗಳನ್ನು ಮುಚ್ಚದೆ ಬಿಟ್ಟರೆ ಕಠಿಣ ಕ್ರಮ ತೆಗೆದುಕೊಳ್ಳಲು ಈಗಾಗಲೇ ಕಾನೂನು ಇದೆ. ಜಿಲ್ಲೆಯಲ್ಲಿ ಸರ್ವೆ ನಡೆಸಿ, ಬೋರ್ವೆಲ್ ಗಳನ್ನು ಮುಚ್ಚದೆ ಬಿಟ್ಟಿದ್ದರೆ, ಸಂಬಂಧಪಟ್ಟವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿರುವಂತೆ ಪ್ರಕರಣ ದಾಖಲಿಸಲು ಅವರು ನಿರ್ದೇಶನ ನೀಡಿದ್ದಾರೆ.