ಬೆಂಗಳೂರು: ಪ್ರೀತಿ ನಿರಾಕರಿಸಿದ ಕಾಲೇಜು ವಿದ್ಯಾರ್ಥಿನಿಯನ್ನು ಕಾಲೇಜು ಆವರಣದಲ್ಲಿಯೇ ಬರ್ಬರವಾಗಿ ಕೊಲೆ ಮಾಡಿದ ಆರೋಪಿಯನ್ನು ರಕ್ಷಣೆ ಮಾಡಲು ಕಾಣದ ಕೈಗಳು ಪ್ರಯತ್ನಿಸುತ್ತಿವೆ ಎಂದು ಜಾತ್ಯತೀತ ಜನತಾದಳ ಆರೋಪಿಸಿದೆ.
ಈ ಬಗ್ಗೆ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪಕ್ಷವು; ಲವ್ ಜಿಹಾದ್ ಮೋಹದ ಪಾಶವನ್ನು ಸಮರ್ಥನೆ ಮಾಡಿಕೊಂಡಿದ್ದ ಇದೇ ಕಾಣದ ಕೈಗಳು, ಈಗ ಹುಬ್ಬಳ್ಳಿ ವಿದ್ಯಾರ್ಥಿನಿ ಕುಮಾರಿ ನೇಹಾ ಹಿರೇಮಠ ಅವರನ್ನು ಹಾಡುಹಗಲೇ ಕಾಲೇಜು ಆವರಣದಲ್ಲಿಯೇ ಬರ್ಬರವಾಗಿ ಕೊಲೆ ಮಾಡಿದ ವಿಕೃತ ಪಾಪಿಯನ್ನು ರಕ್ಷಿಸಲು ಹೊಂಚು ಹಾಕುತ್ತಿವೆ ಎಂದು ದೂರಿದ.
ಈ ಘಟನೆ ಅತ್ಯಂತ ಆಘಾತಕಾರಿ. ಕಾನೂನು ಸುವ್ಯವಸ್ಥೆ ಹಳಿತಪ್ಪಿದೆ ಎನ್ನುವುದಕ್ಕೆ ಇದೇ ಜ್ವಲಂತ ಉದಾಹರಣೆ. ರಾಜ್ಯ ಕಾಂಗ್ರೆಸ್ ಸರಕಾರದ ಅತಿಯಾದ ತುಷ್ಟೀಕರಣವು ಅಪರಾಧ ಮನೋಭಾವದ ಕಿಡಿಗೇಡಿಗಳಿಗೆ ಅಫೀಮಿನಂತಾಗಿದೆ. ಕೆಲವರಿಗಂತೂ ಈ ನೆಲದ ಕಾನೂನು ಕಟ್ಟಳೆ ಅನ್ವಯ ಆಗುತ್ತಿಲ್ಲವೇನೋ ಎಂಬ ಅನುಮಾನವೂ ಕಾಡುತ್ತಿದೆ. ಈ ಸರಕಾರವೂ ಹಾಗೆಯೇ ವರ್ತಿಸುತ್ತಿದೆ ಎಂದು ಜೆಡಿಎಸ್ ಟೀಕಿಸಿದೆ.
ಪ್ರೀತಿ ನಿರಾಕರಿಸಿದ ಕಾರಣಕ್ಕೆ ಜೀವ ತೆಗೆದ ಪರಮ ಪಾಪಿಯನ್ನು ಸುಮ್ಮನೆ ಬಿಡಬಾರದು. ಮುಂದೆ ಇಂತಹ ಘಟನೆಗಳು ನಡೆಯದಂತೆ ಸರಕಾರ ಕಟ್ಟೆಚ್ಚರ ವಹಿಸಬೇಕು. ಆ ನತದೃಷ್ಟ ವಿದ್ಯಾರ್ಥಿನಿಯ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಜೆಡಿಎಸ್ ತಿಳಿಸಿದೆ.