ಬೆಂಗಳೂರು: ಅತ್ಯಂತ ಶೀಘ್ರವಾಗಿ ಮತ್ತು ತ್ವರಿತವಾಗಿ ಸಿಗುವ ಸೇವೆ ಯಾವುದು?? ಎಂದು ಸಾಮಾನ್ಯವಾಗಿ ಯಾರನ್ನಾದರೂ ಕೇಳಿದರೆ ಉತ್ತರ ಬರುವುದುBlinkit, zepto, Dunzo ಅಥವಾ ಓಲಾ, ಊಬರ್ ಅಂತ ಹೇಳುತ್ತಾರೆ, ಆದರೆ ಇದನ್ನೇ ಭಾವಿಸಿದ್ರೆ ನಿಮ್ಮ ಊಹೆ ತಪ್ಪು!ಸರಿಯಾದ ಉತ್ತರ : ಬೆಂಗಳೂರು ಪೋಲೀಸ್!
ಹೌದು.. ನೀವೇನಾದರೂ ಸಂಕಟಕ್ಕೆ ಸಿಲುಕಿದ್ರೆ, ಬೆಂಗಳೂರು ನಗರದಲ್ಲಿ ನೀವು ಎಲ್ಲೇ ಇದ್ದರೂ ಬರೀ ಏಳೇ ಏಳು ನಿಮಿಷಕ್ಕೆ ಹೊಯ್ಸಳ ವಾಹನ ನಿಮ್ಮ ಬಳಿ ಬಂದಿರುತ್ತೆ.
ನಮ್ಮ ಬೆಂಗಳೂರಿನ ಪೋಲೀಸ್ ವ್ಯವಸ್ಥೆ ಅತ್ಯಾಧುನಿಕವಾಗಿದೆ, ದಕ್ಷವಾಗಿದೆ.ಈ ಹಿಂದೆ ಇದ್ದ ಪೋಲೀಸ್ ಸಹಾಯವಾಣಿ 100ರ ಬದಲಾಗಿ, ಅಗ್ನಿಶಾಮಕ, ಅಂಬ್ಯುಲೆನ್ಸ್ ಮತ್ತು ಪೋಲೀಸ್ ಸಹಾಯವಾಣಿ ಒಟ್ಟಾಗಿ ಹೊಸ ಸಂಖ್ಯೆ 112 ಬಂದಿದೆ.
ಬೆಂಗಳೂರಿನ ಸಾರ್ವಜನಿಕರ ದೂರುಗಳನ್ನು ಸ್ವೀಕರಿಸುವುದಕ್ಕೆ, ಟ್ರಾಫಿಕ್ ಮತ್ತು ಪ್ಯಾಟ್ರೋಲಿಂಗ್ ಮೇಲೆ ನಿಗಾವಹಿಸಲು ಅಂತಲೇ ಹೊಸದಾಗಿ, ಸುಂದರವಾಗಿ ಯಾವುದೇ ಕಾರ್ಪೋರೇಟ್ ಆಫೀಸಿಗಿಂತ ಆಧುನಿಕವಾಗಿ ನೂತನ ಪೋಲೀಸ್ ಕಮಾಂಡ್ ನಿರ್ಮಿಸಲಾಗಿದೆ. ಇಲ್ಲಿ ಬರೀ ಪೋಲೀಸ್ ಸಹಾಯವಾಣಿ 112 ಕ್ಕೆ ಬರುವ ದೂರುಗಳನ್ನು ಸ್ವೀಕರಿಸಲಿಕ್ಕೇ 200 ಜನ ನುರಿತ ಸಿಬ್ಬಂದಿಗಳಿದ್ದಾರೆ.
ದಿನಕ್ಕೆ ಸರಾಸರಿ 7000 ಕರೆಗಳು, ವಾರಾಂತ್ಯದಲ್ಲಿ 10000ಕ್ಕೂ ಹೆಚ್ಚು ಕರೆಗಳನ್ನು ಇವರು ಅಟೆಂಡ್ ಮಾಡುತ್ತಾರೆ, ಇವರಿಗೆ ಪೂರಕವಾಗಿ ನಗರದ ವಿವಿಧ ಭಾಗಗಳಲ್ಲಿ ನಿಂತಿರುವ 240 ಹೊಯ್ಸಳ ವಾಹನಗಳು ಸಜ್ಜಾಗಿರುತ್ತವೆ ಜೊತೆಗೆ ಸ್ಥಳೀಯ ಠಾಣೆಗಳ ಸಿಬ್ಬಂದಿಗಳೂ ಕೂಡ. ವರ್ಷಕ್ಕೆ ಇಪ್ಪತ್ತೈದು ಲಕ್ಷ (೨೫,೦೦,೦೦೦) ಕರೆ ಸ್ವೀಕರಿಸುವ ಇಲಾಖೆ ಎಷ್ಟು ಒತ್ತಡದಲ್ಲಿ ಕೆಲಸ ಮಾಡುತ್ತಿರಬಹುದು ಯೋಚಿಸಿ!
ನಿನ್ನೆ ಬೆಂಗಳೂರು ಪೋಲೀಸ್ ಆಯುಕ್ತರ ಆಹ್ವಾನದ ಮೇರೆಗೆ ನೂತನವಾಗಿ ನಿರ್ಮಿಸಲಾಗಿರುವ ಹೊಸ ಕಮಾಂಡ್ ಸೆಂಟರ್ಗೆ ಭೇಟಿ ಕೊಟ್ಟಿದ್ದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಹೇಗೆ ಪೋಲಿಸ್ ಸೇವೆ ಕಾರ್ಯನಿರ್ವಹಿಸುತ್ತಿದೆ ಅಂತ ವಿವರವಾಗಿ ತಿಳಿದುಕೊಳ್ಳುವ ಅವಕಾಶ ಸಿಕ್ಕಿತ್ತು.
AI ತಂತ್ರಜ್ಞಾನ, ಡ್ರೋನ್ಗಳು, ಬಾಡಿ ಕ್ಯಾಮೆರಾಗಳು, ಸಿಸಿಟಿವಿ ಕ್ಯಾಮೆರಾಗಳನ್ನು ಬಳಸಿಕೊಂಡು ಕೆಲವೇ ಸಾವಿರ ಪೋಲೀಸರು ಒಂದೂವರೆ ಕೋಟಿ ಜನ ಇರುವ ದೊಡ್ಡ ನಗರವನ್ನು ಹೇಗೆ ನಿಭಾಯಿಸುತ್ತಾರೆ ಅಂತ ತಿಳಿದುಕೊಂಡೆ.
ಮಹಾನಗರಗಳಲ್ಲಿ ಅತ್ಯಂತ ಕಮ್ಮಿ ಪೋಲಿಸರು ಇರುವ ನಗರ ನಮ್ಮದು ಅದರೂ ಸಿಬ್ಬಂದಿ ಕೊರತೆಯನ್ನು ಸರಿದೂಗಿಸಿಕೊಂಡು, ವಿಶ್ವದ ಯಾವುದೇ ಮಹಾನಗರಕ್ಕೂ ಕಮ್ಮಿ ಇಲ್ಲದ ಹಾಗೆ ಅಚ್ಚುಕಟ್ಟಾಗಿ, ಅಧುನಿಕವಾಗಿ ನಮ್ಮ ಪೋಲೀಸ್ ವ್ಯವಸ್ಥೆ ಕಾರ್ಯ ನಿರ್ವಹಿಸುತ್ತಿದೆ, ಜೊತೆಗೆ ದಿನದಿಂದ ಜನಸ್ನೇಹಿ ಆಗುತ್ತಿದೆ.
ಪೋಲೀಸ್ ಸಹಾಯವಾಣಿ ಮಾತ್ರ ಅಲ್ಲ, ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್, ಫೇಸ್ಬುಕ್, ಇನ್ಸ್ಟಾಗ್ರಾಮ್,ವಾಟ್ಸಾಪ್, ಡೈಲೀ ಹಂಟ್ನಲ್ಲಿಯೂ ಪೋಲೀಸರು ಸದಾ ಕಾಲ ಸಕ್ರಿಯರಾಗಿದ್ದಾರೆ ಜೊತೆಗೆ, ಜಾಲತಾಣಗಳಲ್ಲಿ ಬಂದ ದೂರುಗಳನ್ನೂ ತ್ವರಿತವಾಗಿ ಅಟೆಂಡ್ ಮಾಡುತ್ತಾರೆ.
ಕಮಾಂಡ್ ಸೆಂಟರ್ನ ಕಾರ್ಯಾಚರಣೆಯ ಮಾಹಿತಿ ಪಡೆದುಕೊಂಡ ನಂತರ ಪೋಲಿಸ್ ಆಯುಕ್ತರು ಮತ್ತು ಜಂಟಿ ಆಯುಕ್ತರು – ನಗರ ಸಂಚಾರ ಇಬ್ಬರೂ ಪೋಲೀಸ್ ಕಾರ್ಯಾಚರಣೆಗಳ ಬಗ್ಗೆ, ನಗರದಲ್ಲಿ ಸುಗಮ ಸಂಚಾರಕ್ಕೆ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ, ಇಲಾಖೆಯನ್ನು ಜನಸ್ನೇಹಿಯಾಗಿ ಪರಿವರ್ತಿಸುತ್ತಿರುವ ಕ್ರಮಗಳ ಬಗ್ಗೆ ತುಂಬಾ ಹೊತ್ತು ತಮ್ಮ ವಿಚಾರಗಳನ್ನು ಹಂಚಿಕೊಂಡರು, ಜೊತೆಗೆ ಬಂದಿದ್ದ ನಾಗರಿಕರ ಸಲಹೆಗಳನ್ನೂ ಸ್ವೀಕರಿಸಿ ಚರ್ಚೆ ನಡೆಸಿದರು.
ಪೋಲಿಸ್ ಇಲಾಖೆ ಇನ್ನಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಲು, ನಮ್ಮ ನಗರ ಇನ್ನಷ್ಟು ಸುರಕ್ಷಿತವಾಗಲು, ಜನರ ಮಿತ್ರನಾಗಲು ಸಾರ್ವಜನಿಕರ ಸಹಕಾರ ಮತ್ತು ಸಹಯೋಗವೂ ಬಹಳ ಅಗತ್ಯ. ಈಗಾಗಲೇ ಹಲವಾರು RWA,ಎನ್ಜಿಓ, ಸ್ವಯಂಸೇವಾ ಸಂಸ್ಥೆಗಳು, ಸಕ್ರಿಯ ನಾಗರಿಕರ ಜೊತೆಗೆ ಪೋಲೀಸರು ಸತತ ಸಂಪರ್ಕದಲ್ಲಿದ್ದಾರೆ.
ಜನರಿಗೆ ಮಾರಕವಾಗಬಲ್ಲ ಯಾವುದೇ ಕಾನೂನು ಉಲ್ಲಂಘನೆಯನ್ನು ಪಬ್ಲಿಕ್ ಐ ಅ್ಯಪ್ ಮೂಲಕವೂ, ಪೋಲಿಸರಿಗೆ ದೂರು ನೀಡುವುದರ ಮುಖಾಂತರವೂ ಮಾಡಬಹುದು. ನಮ್ಮ ಬೆಂಗಳೂರನ್ನು ಅತ್ಯಂತ ಸುರಕ್ಷಿತ ನಗರವನ್ನಾಗಿಸಲು, ಪೋಲಿಸ್ ಇಲಾಖೆಯನ್ನು ಜನಸ್ನೇಹಿಯನ್ನಾಗಿಸಲು ಪೋಲೀಸರು ಪಡುತ್ತಿರುವ ಶ್ರಮ ಶ್ಲಾಘನೀಯ. ಈ ನಿಟ್ಟಿನಲ್ಲಿ ಅವಿರತವಾಗಿ ಕೆಲಸ ಮಾಡುತ್ತಿರುವ ನಮ್ಮ ಕನ್ನಡಿಗ ಪೋಲೀಸ್ ಆಯುಕ್ತರಿಗೂ, ಅವರ ತಂಡಕ್ಕೂ ಅಭಿನಂದನೆಗಳು.