ಬೆಂಗಳೂರು: ನಗರದ ಎಂ.ಜಿ.ರಸ್ತೆಯಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್(ಪಿ.ಯು.ಬಿ) ಕಟ್ಟಡದ ನೆಲ ಅಂತಸ್ತಿನಲ್ಲಿರುವ ಬ್ಯಾಂಕ್ ಆಫ್ ಬರೋಡಾ(ವಿಜಯಾ ಬ್ಯಾಂಕ್) ಹಾಗೂ ಅಂಚೆ ಕಛೇರಿ ಇಲಾಖೆಗಳು ಬಾಕಿ ಬಾಡಿಗೆ ಪಾವತಿಸದ ಕಾರಣ ಬೀಗ ಹಾಕಲಾಗಿದೆ.
ಪಿ.ಯು.ಬಿ ಕಟ್ಟಡದ ನೆಲ ಅಂತಸ್ತಿನಲ್ಲಿರುವ ಮಳಿಗೆ ಸಂಖ್ಯೆ: 14/15 ಬ್ಯಾಂಕ್ ಆಫ್ ಬರೋಡಾ(ವಿಜಯಾ ಬ್ಯಾಂಕ್) ಮತ್ತು ಮಳಿಗೆ ಸಂಖ್ಯೆ: 17, ಅಂಚೆ ಕಛೇರಿ ಇಲಾಖೆಗಳಿವೆ.
ಬ್ಯಾಂಕ್ ಆಫ್ ಬರೋಡಾ (ವಿಜಯಾ ಬ್ಯಾಂಕ್):
ಬ್ಯಾಂಕ್ ಆಫ್ ಬರೋಡಾ(ವಿಜಯಾ ಬ್ಯಾಂಕ್)ರವರು 2011 ರಿಂದ ಹಳೆಯ ಬಾಡಿಗೆಯನ್ನು ಪಾವತಿಸುತ್ತಿದ್ದು, ಪರಿಷ್ಕೃತ ಬಾಡಿಗೆಯನ್ನು ಪಾವತಿಸುತ್ತಿರುವುದಿಲ್ಲ. ಅಲ್ಲದೆ ಡಿಸೆಂಬರ್ 2022 ರಿಂದ ಯಾವುದೇ ಬಾಡಿಗೆಯನ್ನು ಪಾವತಿಸದೇ ಇದ್ದ ಕಾರಣ ಹಲವಾರು ಬಾರಿ ನೋಟೀಸ್ ಜಾರಿ ಮಾಡಿದ್ದರೂ ಕೂಡ ಬಾಡಿಗೆಯನ್ನು ಪಾವತಿಸಿರುವುದಿಲ್ಲ.
ಬ್ಯಾಂಕ್ ಆಫ್ ಬರೋಡಾ ಪಾಲಿಕೆಗೆ 17.56 ಕೋಟಿ ರೂ. ಬಾಡಿಗೆ ಪಾಲಿಕೆಗೆ ಪಾವತಿಸಬೇಕಿದ್ದು, ಈ ಸಂಬಂಧ ಪೂರ್ವ ವಲಯ ಆಯುಕ್ತರ ಆದೇಶದಂತೆ ಇಂದು ಬೆಳಗ್ಗೆ 6.45ರ ಸಮಯದಲ್ಲಿ ಸದರಿ ಮಳಿಗೆಗೆ ಬೀಗಮುದ್ರೆ ಹಾಕಲಾಗಿರುತ್ತದೆ.
* ಪಾವತಿಸಬೇಕಾದ ಬಾಡಿಗೆ ಮೊತ್ತ: 7,61,70,155/-
* ಬಾಕಿ ಸಿ.ಎಸ್.ಟಿ./ಜಿ.ಎಸ್.ಟಿ. ಮೊತ್ತ: 1,25,98,845/-
* ಬಡ್ಡಿ ಮೊತ್ತ: 8,69,22,095/-
* ಒಟ್ಟು ಬಾಕಿ ಮೊತ್ತ: 17,56,91,095/-
ಅಂಚೆ ಕಛೇರಿ:
ಅಂಚೆ ಕಛೇರಿ ಇಲಾಖೆಯವರು 2006 ರಿಂದ ಹಳೆಯ ಬಾಡಿಗೆಯನ್ನು ಪಾವತಿಸುತ್ತಿದ್ದು, ಪರಿಷ್ಕೃತ ಬಾಡಿಗೆಯನ್ನು ಪಾವತಿಸುತ್ತಿರುವುದಿಲ್ಲ. ಈ ಬಗ್ಗೆ ಹಲವಾರು ಬಾರಿ ನೋಟೀಸ್ ಜಾರಿ ಮಾಡಿ ಪರಿಷ್ಕೃತ ಬಾಡಿಗೆಯನ್ನು ಪಾವತಿಸುವಂತೆ ಸೂಚಿಸಲಾಗಿದ್ದರೂ ಬಾಡಿಗೆಯನ್ನು ಪಾವತಿಸಿರುವುದಿಲ್ಲ.
ಅಂಚೆ ಕಛೇರಿಯಿಂದ 2.32 ಕೋಟಿ ರೂ. ಬಾಡಿಗೆ ಪಾಲಿಕೆಗೆ ಪಾವತಿಸಬೇಕಿದ್ದು, ಈ ಸಂಬಂಧ ಪೂರ್ವ ವಲಯ ಆಯುಕ್ತರ ಆದೇಶದಂತೆ ಇಂದು ಬೆಳಗ್ಗೆ 6.45ರ ಸಮಯದಲ್ಲಿ ಸದರಿ ಮಳಿಗೆಗೆ ಬೀಗಮುದ್ರೆ ಹಾಕಲಾಗಿರುತ್ತದೆ.
* ಪಾವತಿಸಬೇಕಾದ ಬಾಡಿಗೆ ಮೊತ್ತ: 93,27,168/-
* ಬಾಕಿ ಸಿ.ಎಸ್.ಟಿ./ಜಿ.ಎಸ್.ಟಿ. ಮೊತ್ತ 10,09,124/-
* ಬಡ್ಡಿ ಮೊತ್ತ: 1,29,27,119/-
* ಒಟ್ಟು ಬಾಕಿ ಮೊತ್ತ: 2,32,63,410/-
ಬ್ಯಾಂಕ್ ಆಫ್ ಬರೋಡಾ ಹಾಗೂ ಅಂಚೆ ಕಛೇರಿಯನ್ನು ಪಾಲಿಕೆಯ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಪೋಲೀಸ್ ಸಿಬ್ಬಂದಿ ಬಂದೋಬಸ್ತ್ ನೊಂದಿಗೆ ಬೀಗಮುದ್ರೆ ಹಾಕಲಾಗಿದೆ.