ಬೆಂಗಳೂರು: ಪಟಾಕಿಗಳು ಮಾರಾಟ ಮತ್ತು ಬಳಕೆ ನಿಯಂತ್ರಿಸುವ ಕುರಿತು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶಗಳನ್ನು ಜಾರಿಗೊಳಿಸುವ ಬಗ್ಗೆ ಕಛೇರಿ ಆದೇಶ ಮಾಡಲಾಗಿದೆ ಎಂದು ಪಾಲಿಕೆ ಆಯುಕ್ತ ತುಷಾರ್ ಗಿರಿ ನಾಥ್ ತಿಳಿಸಿದರು.
ಮಾನ್ಯ ಸರ್ವೋಚ್ಛ ನ್ಯಾಯಾಲಯವು ಪಟಾಕಿ ಬಳಕೆ ಕುರಿತಂತೆ ಸ್ಪಷ್ಟ ನಿರ್ದೇಶನಗಳನ್ನು ನೀಡಿದ್ದು ಮತ್ತು ಅವುಗಳನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಾಗಿರುತ್ತದೆ.
ಮಾನ್ಯ ಸರ್ವೋಚ್ಛ ನ್ಯಾಯಾಲಯವು ಪಟಾಕಿಗಳಿಗೆ ಸಂಬಂಧಿಸಿದಂತೆ ಹಲವಾರು ನಿರ್ದೇಶನಗಳನ್ನು ನೀಡಿರುತ್ತದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶದನ್ವಯ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಸೂಚನೆಯಂತೆ ರಾತ್ರಿ 8.00 ಗಂಟೆಯಿಂದ ರಾತ್ರಿ 10.00 ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ದಿನಾಂಕ: 31/10/2024 ರಿಂದ 02/11/2024ರವೆಗೆ ಸ್ಫೋಟಿಸಲು ಅವಕಾಶ ನೀಡಿದೆ. ಉಳಿದ ಸಮಯದಲ್ಲಿ ಪಟಾಕಿಗಳ ಸ್ಪೋಟವನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಇದಲ್ಲದೆ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಮೇಲ್ಕಾಣಿಸಿದ ನಿರ್ದೇಶನಗಳಲ್ಲಿ ಅನುಮತಿಸಿರುವ ಹಸಿರು ಪಟಾಕಿಗಳನ್ನು, ಬಿಟ್ಟು ಉಳಿದ ಯಾವುದೇ ಇತರೆ ಪಟಾಕಿಗಳ ಮಾರಾಟ ಹಾಗೂ ಬಳಕೆಯನ್ನು ಸಹ ನಿಷೇಧಿಸಿರುತ್ತದೆ. ಅಲ್ಲದೇ, ‘ಹಸಿರು ಪಟಾಕಿ’ ಕುರಿತು ಕರ್ನಾಟಕ ರಾಜ್ಯ ಮಾಲಿನ್ಯ ಮಂಡಳಿಯ ವೆಬ್ಸೈಟ್ನಲ್ಲಿ ಮಾಹಿತಿ ಲಭ್ಯವಿರುತ್ತದೆ.
ಮುಂದುವರೆದು, 2024 ನೇ ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಿ ಸಾರ್ವಜನಿಕರು ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಬಳಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಹಾಗೂ ಹಸಿರು ಪಟಾಕಿಗಳನ್ನಲ್ಲದೆ, ಬೇರೆ ನಿಷೇಧಿತ ಪಟಾಕಿಗಳ ಮಾರಾಟ, ದಾಸ್ತಾನು ಮಾಡುವವರ ವಿರುದ್ಧ ಇಡೀ ಗೋದಾಮನ್ನು ಮುಟ್ಟುಗೋಲು ಹಾಕಿಕೊಂಡು ಸಂಬಂಧಿತ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಲು ಕ್ರಮ ವಹಿಸಬೇಕೆಂದು *ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್* ರವರು ಎಲ್ಲಾ ವಕಯ ಆಯುಕ್ತರಿಗೆ ಕಛೇರಿ ಆದೇಶದ ಮೂಲಕ ಸೂಚಿಸಿರುತ್ತಾರೆ.