ಬೆಂಗಳೂರು: ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಲು ಇನ್ನು ಕೆಲ ದಿನಗಳಷ್ಟೇ ಬಾಕಿ ಉಳಿದಿರುವಂತೆಯೇ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ಮುಖಂಡರ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ರಾಮನಗರ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಪ್ರಮುಖ ಮುಖಂಡರ ಸಭೆ ಕರೆದಿದ್ದರು. ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ರಾಮನಗರ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕರಾದ ಎ.ಮಂಜುನಾಥ್ ಸೇರಿ ಕ್ಷೇತ್ರದ ಅನೇಕ ಮುಖಂಡರು ಈ ಸಭೆಯಲ್ಲಿ ಭಾಗಿಯಾಗಿದ್ದರು.
ಎಲ್ಲಾ ಮುಖಂಡರ ಅಭಿಪ್ರಾಯ ಆಲಿಸಿದ ಮಾಜಿ ಮುಖ್ಯಮಂತ್ರಿಗಳು; ಮುಖಂಡರಿಗೆ ಕೆಲ ಸ್ಪಷ್ಟ ಸೂಚನೆಗಳನ್ನು ಕೊಟ್ಟರಲ್ಲದೆ; ನಮ್ಮ ಕಾರ್ಯಕರ್ತರು, ಮುಖಂಡರು ಪಕ್ಷದ ಹಿತರಕ್ಷಣೆ ಬಗ್ಗೆ ಆತಂಕಪಡಬೇಕಾಗಿಲ್ಲ. ಕಹಿಯನ್ನು ಮರೆತು ಕೆಲಸ ಮಾಡೋಣ, ಹಿಂದೆ ಆಗಿರುವ ತಪ್ಪುಗಳನ್ನು ಸರಿ ಮಾಡಿಕೊಂಡು ಮುಂದೆ ಹೋಗೋಣ ಎಂದರು.
ರಾಮನಗರ ಕ್ಷೇತ್ರದ ಜನರು ಯಾವತ್ತೂ ಜಾತಿ ಮೇಲೆ ಚುನಾವಣೆ ಮಾಡಿದವರಲ್ಲ. ನಾನೆಂದೂ ಗುತ್ತಿಗೆದಾರರಿಂದ ಹಣ ಕೇಳಿದವನಲ್ಲ, ಚುನಾವಣೆ ಅದ ಮೇಲೆ ನಾನು ಊರುಗಳಲ್ಲಿ ಜಗಳ ತಂದಿಡಲಿಲ್ಲ. ನಿಮ್ಮಲ್ಲಿ ಒಬ್ಬನಾಗಿ ಪಕ್ಷಕ್ಕೆ ದುಡಿಮೆ ಮಾಡಿದ್ದೇನೆ. ಇವತ್ತು ಕಾಂಗ್ರೆಸ್ ನವರು ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ. ನಾನು ಯಾವ ರೀತಿ ನಡೆದುಕೊಂಡಿದ್ದೇನೆ ಎನ್ನುವುದು ರಾಜ್ಯಕ್ಕೆ ಗೊತ್ತಿದೆ ಎಂದು ಮುಖಂಡರಿಗೆ ಮಾಜಿ ಮುಖ್ಯಮಂತ್ರಿಗಳು ತಿಳಿಸಿದರು.
ಡಾ.ಸಿ.ಎನ್.ಮಂಜುನಾಥ್ ಪರವಾಗಿ ಮೈತ್ರಿ ಪಕ್ಷಗಳ ಒಲವು
ಜಯದೇವ ಹೃದ್ರೋಗ ಸಂಸ್ಥೆಯ ವಿಶ್ರಾಂತ ನಿರ್ದೇಶಕರಾದ ಡಾ.ಸಿ.ಎನ್.ಮಂಜುನಾಥ್ ಅವರನ್ನೇ ಬೆಂಗಳೂರು ಗ್ರಾಮಾಂತರ ನಿಲ್ಲಿಸಬೇಕು ಎಂಬುದು ಬಿಜೆಪಿ ಹೈಕಮಾಂಡ್ ಹಾಗೂ ರಾಜ್ಯ ಬಿಜೆಪಿ ನಾಯಕರ ಒತ್ತಾಸೆ ಇದೆ. ನಮ್ಮ ಪಕ್ಷದ ನಾಯಕರು, ಮುಖಂಡರು ಅದೇ ಅಭಿಲಾಷೆ ಹೊಂದಿದ್ದಾರೆ. ಎನ್ ಡಿಎ ಮೈತ್ರಿಕೂಟದ ಒಮ್ಮತ ಅಭ್ಯರ್ಥಿ ಆಗಬೇಕು ಎರಡೂ ಪಕ್ಷಗಳೂ ಬಯಸಿವೆ. ಅವರು ಚುನಾವಣೆಗೆ ನಿಲ್ಲಬೇಕೋ ಬೇಡವೋ ಎನ್ನುವ ತೀರ್ಮಾನವನ್ನು ಮುಖಂಡರಾದ ನಿಮಗೆ ಬಿಡುತ್ತೇನೆ ಎಂದು ಸಭೆಯಲ್ಲಿ ಕುಮಾರಸ್ವಾಮಿ ಅವರು ಹೇಳಿದರು.
ಸಿ.ಪಿ.ಯೋಗೇಶ್ವರ್ ಅವರು ಎನ್ ಡಿಎ ಅಭ್ಯರ್ಥಿ ಆಗಬೇಕು ಎಂದು ನಾನು ಹೇಳಿದ್ದೇನೆ. ಸ್ವತಃ ಯೋಗೇಶ್ವರ್ ಅವರಿಗೂ ಹೇಳಿದ್ದೇನೆ. ಆದರೆ; ಯೋಗೇಶ್ವರ್ ಅವರು ಕೂಡ ಡಾ.ಮಂಜುನಾಥ್ ಅವರೇ ನಿಲ್ಲಬೇಕು ಎಂದು ಒತ್ತಡ ಹಾಕುತ್ತಿದ್ದಾರೆ. ಮಿತ್ರ ಪಕ್ಷದ ವರಿಷ್ಠರು, ರಾಜ್ಯದ ಬಿಜೆಪಿ ನಾಯಕರ ಭಾವನೆಗಳನ್ನು ನಾವು ಗೌರವಿಸಬೇಕಿದೆ ಎಂದು ಕುಮಾರಸ್ವಾಮಿ ಅವರು ಸಭೆಯಲ್ಲಿ ಹೇಳಿದರು.
ಭಾನುವಾರ ನಾನು ನಮ್ಮ ತಂದೆಯವರ ಜತೆ ಎರಡು ಗಂಟೆ ಕಾಲ ಚರ್ಚೆ ಮಾಡಿದೆ. ಡಾ.ಮಂಜುನಾಥ್ ಅವರ ಸ್ಪರ್ಧೆ ವಿಚಾರವನ್ನು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ನನ್ನ ಸಹೋದರಿ ಮನೆಯಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ನಮ್ಮನ್ನು ಯಾಕೆ ರಾಜಕೀಯಕ್ಕೆ ಎಳೆಯುತ್ತೀರಿ, ನೆಮ್ಮದಿಯಿಂದ ಇದ್ದೇವೆ, ನಮಗೆ ರಾಜಕೀಯ ಬೇಡ ಅಂತ ಅಳ್ತಾ ಕೂತಿದ್ದಾರೆ. ಇದು ನಮ್ಮ ಮನೆಯ ಪರಿಸ್ಥಿತಿ. ನನ್ನ ನೋವು ನನಗೇ ಗೊತ್ತು. ಆದರೆ, ವಿರೋಧಿಗಳನ್ನು ಮಣಿಸಲೇಬೇಕು. ಇದು ನನ್ನ ಗುರಿ ಎಂದು ನೇರ ಮಾತುಗಳಲ್ಲಿ ಹೇಳಿದರು ಮಾಜಿ ಮುಖ್ಯಮಂತ್ರಿಗಳು.
ಈ ಚುನಾವಣೆಯನ್ನು ಸವಾಲಾಗಿ ಸ್ವೀಕಾರ ಮಾಡಿ. ರಾಮನಗರ ಜನರು ನಿಖಿಲ್ ರನ್ನು ಸೋಲಿಸಿದ್ದಾರೆ ಎಂದು ನಾನು ದೋಷ ಕೊಡಲ್ಲ. ನಮ್ಮದೇ ತಪ್ಪುಗಳಿಂದ ನಿಖಿಲ್ ಸೋತಿದ್ದಾರೆ, ಆ ತಪ್ಪುಗಳನ್ನು ಸರಿ ಮಾಡೋಣ ಎಂದವರು ಅವರು.
ಡಿಕೆಶಿ ಮೇಲೆ ಕಿಡಿ
ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಕಣ್ಣೀರು ಹಾಕೋದು ಅವರ ಕುಟುಂಬಕ್ಕೆ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಾರೆ. ಅವರಿಗೆ ಆತ್ಮಸಾಕ್ಷಿ ಅನ್ನೋದು ಇದೆಯಾ? ಎಂದು ಕಿಡಿಕಾರಿದ ಮಾಜಿ ಮುಖ್ಯಮಂತ್ರಿಗಳು; ಅವರು ಏನೆಲ್ಲಾ ಮಾಡಿದ್ದಾರೆ, ಏನೆಲ್ಲಾ ಕೆಡುಕು ಮಾಡಿದ್ದಾರೆ ಎನ್ನುವುದು ಈ ರಾಜ್ಯಕ್ಕೆ ಗೊತ್ತಿದೆ. ನಾವು ಹಾಗೆ ಮಾಡಿದ್ದೇವೆಯಾ? ಖಂಡಿತಾ ಇಲ್ಲ ಎಂದರು.
ಇಡೀ ವಿಶ್ವವೇ ಮೋದಿ ಅವರನ್ನು ಗೌರವಿಸುತ್ತದೆ. ಅಂತಹ ಮೋದಿ ಅವರು ದೇವೇಗೌಡರು ಬಂದರೆ ಎಷ್ಟು ಗೌರವ ಕೊಡುತ್ತಾರೆ ಎನ್ನುವುದನ್ನು ಇಡೀ ದೇಶವೇ ನೋಡಿದೆ. ಯಾವ ರೀತಿ ಅವರು ದೇವೆಗೌಡರನ್ನು ಆದರಿಸುತ್ತಾರೆ ಎಂಬುದನ್ನು ಆ ವ್ಯಕ್ತಿ ಅರ್ಥ ಮಾಡಿಕೊಳ್ಳಬೇಕು ಎಂದು ಕೆಂಡ ಕಾರಿದರು.
ಮಾಗಡಿ ಬಾಲಕೃಷ್ಣಗೆ ತಿರುಗೇಟು
ನಮ್ಮ ಪಕ್ಷದಿಂದಲೇ ಬೆಳೆದು ಹೋದ ಮಾಗಡಿ ನಾಯಕನ ಬಗ್ಗೆ ಪ್ರಸ್ತಾಪ ಮಾಡಿದ ಹೆಚ್ಡಿಕೆ ಅವರು; ಗೌಡರ ಮನೆಯಲ್ಲಿ ಅಳಿಯನನ್ನೇ ಹರಕೆಯ ಕುರಿ ಮಾಡಲು ಹೊರಟಿದ್ದಾರೆ ಎಂದು ಹೇಳಿದ್ದಾರೆ. ಆ ವ್ಯಕ್ತಿಗೆ ಸತ್ಯ ಗೊತ್ತಿಲ್ಲ. ಮಂಜುನಾಥ್ ಅವರು ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಲಕ್ಷಾಂತರ ಬಡ ಜನರ ಹೃದಯ ಕಾಪಾಡಿದ್ದಾರೆ. ದೇಶದಲ್ಲಿಯೇ ಅವರ ಸೇವೆಯನ್ನು ಕೊಂಡಾಡುತ್ತಾರೆ. ಅಂತಹ ವ್ಯಕ್ತಿ ದೆಹಲಿಗೆ ಹೋದರೆ ಇಡೀ ದೇಶಕ್ಕೆ ಸೇವೆ ಮಾಡಬಹುದು. ಅವರನ್ನು ಹರಕೆಯ ಕುರಿ ಮಾಡುತ್ತಿಲ್ಲ ನಾವು. ಎಲ್ಲರೂ ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿದ್ದಾರೆ ಎಂದು ಮಾಗಡಿ ಶಾಸಕ ಬಾಲಕೃಷ್ಣಗೆ ತಿರುಗೇಟು ಕೊಟ್ಟರು ಕುಮಾರಸ್ವಾಮಿ ಅವರು.
ಕಾಂಗ್ರೆಸ್ ಗೆಲ್ಲಿಸಿದ್ದು ನಾವು ಮಾಡಿದ ಇನ್ನೊಂದು ದೊಡ್ಡ ತಪ್ಪು ಎಂದ ನಿಖಿಲ್ ಕುಮಾರಸ್ವಾಮಿ
ಈ ಮೈತ್ರಿ ದೇವೇಗೌಡರು, ನರೇಂದ್ರ ಮೋದಿ ಅವರ ಮಟ್ಟದಲ್ಲಿ ಆಗಿದೆ. 2018ರ ಸರ್ಕಾರದ ಅವಧಿಯಲ್ಲಿ ಅದ ಕಹಿ ಅನುಭವ, ತುಮಕೂರಿನಲ್ಲಿ ದೇವೆಗೌಡರ ಸೋಲನ್ನು ನಾವು ಮರೆತಿಲ್ಲ. ಕಳೆದ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸಿದ್ದು ನಾವು ಮಾಡಿದ ಇನ್ನೊಂದು ದೊಡ್ಡ ತಪ್ಪು. ಅದನ್ನು ಸರಿ ಮಾಡಿಕೊಳ್ಳುವ ಕಾಲ ಸನ್ನಿಹಿತವಾಗಿದೆ, ಈ ಚುನಾವಣೆ ನಿರ್ಣಾಯಕ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು.
ಇನ್ನು 45 ದಿನಗಳ ಕಾಲ ಪಕ್ಷದ ಪರವಾಗಿ ಪ್ರಚಾರ, ಕೆಲಸ ಮಾಡುತ್ತೇನೆ. ಮೈತ್ರಿಕೂಟದ ಪರವಾಗಿ ಕೆಲಸ ಮಾಡುತ್ತೇನೆ. ಒಳ್ಳೆಯ ಫಲಿತಾಂಶ ಬರಲು ಕಾಯಾ ವಾಚಾ ಮನಸಾ ಕೆಲಸ ಮಾಡುತ್ತೇನೆ. ನನಗೆ ಹಾಗೂ ಕುಮಾರಣ್ಣ ಅವರಿಗೆ ಮಂಡ್ಯದಿಂದ ಸ್ಪರ್ಧೆ ಮಾಡುವಂತೆ ಅತೀವ ಒತ್ತಡವಿದೆ. ಇದನ್ನು ಪ್ರಾಮಾಣಿಕವಾಗಿ ನಿಮ್ಮ (ಮುಖಂಡರು) ಮುಂದೆ ಇಡುತ್ತೇನೆ. ದೇವೇಗೌಡರು 30 ವರ್ಷದಿಂದ ಪಕ್ಷವನ್ನು ಕಟ್ಟಿದ್ದಾರೆ. ನಮ್ಮ ತಂದೆಯವರು 15 ವರ್ಷಗಳಿಂದ ಪಕ್ಷವನ್ನು ಉಳಿಸಿಕೊಂಡು ಬಂದಿದ್ದಾರೆ. ಹೀಗಾಗಿ ಪಕ್ಷದ ಉಳಿವಿಗಾಗಿ ನಾನು ಈ ಚುನಾವಣೆಯಲ್ಲಿ ದುಡಿಯುತ್ತೇನೆ ಎಂದರು ಅವರು.
ಮಂಡ್ಯ ನಮ್ಮ ಪಕ್ಷದ ಹೃದಯ ಇದ್ದಂತೆ. ಅಲ್ಲಿ ಒಮ್ಮೆ ಎಲ್ಲಾ ಕ್ಷೇತ್ರಗಳನ್ನು ಜೆಡಿಎಸ್ ಗೆದ್ದಿತ್ತು. ಕಳೆದ ಚುನಾವಣೆಯಲ್ಲಿ ಕೆ ಆರ್ ಪೇಟೆ ಬಿಟ್ಟು ಎಲ್ಲಾ ಕಡೆ ಸೋತಿದ್ದೇವೆ. ಎಷ್ಟು ನೋವಾಗುತ್ತೆ ಎನ್ನುವುದನ್ನು ಆಲೋಚನೆ ಮಾಡಿ. ಹೀಗಾಗಿ ಎಲ್ಲಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತೇನೆ, ನಾನು ಚುನಾವಣೆಗೆ ನಿಲ್ಲುವುದಿಲ್ಲ. ರಾಮನಗರ ಬಿಟ್ಟು ನಾನು ಎಲ್ಲಿಯೂ ಹೋಗುವುದಿಲ್ಲ. ರಾಮನಗರ ಹೊರತುಪಡಿಸಿ ನನ್ನ ರಾಜಕೀಯ ಜೀವನವನ್ನು ನಾನು ಊಹೆಯೂ ಮಾಡೋದಿಲ್ಲ.ನಮ್ಮ ಮೈತ್ರಿಕೂಟದ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು, ಇದು ನಮ್ಮ ಸಂಕಲ್ಪ ಎಂದು ನಿಖಿಲ್ ಕುಮಾರಸ್ವಾಮಿ ಅವರು ನೇರ ಮಾತುಗಳಲ್ಲಿ ಹೇಳಿದರು.
ಗಿಫ್ಟ್ ಕೂಪನ್ ಹಂಚುತ್ತಾರೆ ಎಂದ ಮಂಜುನಾಥ್
ಜೆಡಿಎಸ್ ಬಿಜೆಪಿ ಮೈತ್ರಿ ಆಗಿದೆ. ವರಿಷ್ಠರು ಕೊಟ್ಟ ಸೂಚನೆ ಪಾಲಿಸಿ ನಾವು ಗೆಲುವು ಸಾಧಿಸಬೇಕು. ಮೈತ್ರಿ ಅಭ್ಯರ್ಥಿ ಪರವಾಗಿ ನಾವು ಕೆಲಸ ಮಾಡಬೇಕು. ವಿಧಾನಸಭೆ ಚುನಾವಣೆಯಲ್ಲಿ ಕೊಟ್ಟಂತೆ ಗಿಫ್ಟ್ ಕೂಪನ್ ಗಳನ್ನು ಈ ಬಾರಿಯೂ ಕಾಂಗ್ರೆಸ್ ಹಂಚುವ ಸಾಧ್ಯತೆ ಇದೆ. ನಾವು ಎಚ್ಚರಿಕೆಯಿಂದ ಇರಬೇಕು. ದರ್ಪ ಮತ್ತು ದೌರ್ಜನ್ಯದ ವಿರುದ್ಧ ನಾವು ಚುನಾವಣೆ ನಡೆಸಬೇಕು. ಒಮ್ಮತ, ಒಗ್ಗಟ್ಟಿನಿಂದ ನಾವೆಲ್ಲರೂ ಕೆಲಸ ಮಾಡಬೇಕು ಎಂದು ಮಾಗಡಿ ಮಾಜಿ ಶಾಸಕರು, ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಎ.ಮಂಜುನಾಥ್ ಹೇಳಿದರು.