ಬೆಂಗಳೂರು: ತಂತ್ರಜ್ಞಾನ ಆವಿಷ್ಕಾರಗಳು ಸಾಮಾನ್ಯರ ಬದುಕು ಪ್ರವೇಶಿಸಿ ಉಪಯೋಗವಾಗುತ್ತಿರುವುದು ನಿಜ ಇದರ ಜೊತೆಗೆ ಮೂಲ ವಿಜ್ಞಾನವನ್ನು ನಾವು ಎಂದಿಗೂ ಮರೆಯಬಾರದು ಎಂದು ಸಂಸದ ಡಾ. ಸಿ.ಎನ್ ಮಂಜುನಾಥ್ ತಿಳಿಸಿದರು.
ಬೆಂಗಳೂರಿನ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯಲ್ಲಿ ನಡೆದ ಸಂಸ್ಥಾಪಕರ ದಿನಾಚರಣೆಯಲ್ಲಿ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು, ಆರೋಗ್ಯ ಕ್ಷೇತ್ರ ನಮ್ಮ ಈಗಿನ ದೈಹಿಕ ಆರೋಗ್ಯ ಮಾತ್ರವಲ್ಲ ಮುಂದಿನ 20 ವರ್ಷದಲ್ಲಿ ಬರಬಹುದಾದ ರೋಗಗಳ ಮಾಹಿತಿಯನ್ನು ನೀಡುವ ಮಟ್ಟಿಗೆ ಬೆಳೆದಿದೆ. ಈ ರೀತಿ ಆತಂಕ ಹುಟ್ಟಿಸುವ ತಂತ್ರಜ್ಞಾನವನ್ನು ನಾವು ಹೆಚ್ಚು ಬಳಸದೆ ಇರುವುದು ಸೂಕ್ತ. ಅದಲ್ಲದೆ ಜೀವನ ಶೈಲಿಗೆ ಮಾರಕ ವಾಗುತ್ತಿರುವ ಸಾಮಾಜಿಕ ಮಾಧ್ಯಮಗಳ ಬಳಕೆಗೆ ನಿಯಂತ್ರಣ ಹೇರಿಕೊಳ್ಳಬೇಕು ಎಂದರು.
AI ತಂತ್ರಜ್ಞಾನದಿಂದ ಏನೆಲ್ಲಾ ಅನಾಹುತಗಳು ಆಗಲಿವೆ, ಉದ್ಯೋಗ ಕಡಿತಗೊಳ್ಳಲಿದೆ ಎನ್ನುವ ಅನಗತ್ಯ ಬಯಕೆಗೆ ಒಳಗಾಗದೆ ವೈದ್ಯಕೀಯ ಸೇರಿ ಹೆಚ್ಚಿನ ಕ್ಷೇತ್ರದಲ್ಲಿ ಬದಲಾವಣೆಗೆ ಅವಕಾಶಗಳಾಗುತ್ತಿರುವುದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಯುವ ಸಮುದಾಯವನ್ನು ಸಜ್ಜುಗೊಳಿಸಿ ಎಂದು ಕಿವಿಮಾತು ಹೇಳಿದರು.
ಪ್ರಸ್ತುತ ಪ್ರಾಮಾಣಿಕತೆ ಕೊರತೆಯಿಂದ ಗುಣಮಟ್ಟದ ಕಾಮಗಾರಿಗಳು ಆಗದೆ ಇರುವ ಸ್ಥಿತಿಗತಿಗಳನ್ನು ನೋಡುತ್ತಿದ್ದೇವೆ. ಅವೆಲ್ಲವೂ ಸಹ ನಮ್ಮ ಕಣ್ಣ ಮುಂದೆಯೇ ನಡೆಯುತ್ತಿವೆ, ಪ್ರಾಮಾಣಿಕತೆ,ವೃತ್ತಿಪರತೆ ಸಮಯ ಪ್ರಜ್ಞೆಯಿಂದ ಅವರು ಈಗಲೂ ಜೀವಂತವಾಗಿರುವ ಸರ್ ಎಂವಿ ಅವರು ಯುವ ಇಂಜಿನಿಯರ್ ಗಳಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.
ಸರ್ ಎಂವಿ ಅವರ ದೂರ ದೃಷ್ಟಿ ಹಾಗೂ ಮುಂದಾಲೋಚನೆಯ ಕಾರ್ಯವೈಕರಿಗಳು ಇಂದಿನ ಪ್ರಸ್ತುತ ಇಂಜಿನಿಯರಿಂಗ್ ಕ್ಷೇತ್ರಕ್ಕೆ ಹಾಗೂ ಇಂಜಿನಿಯರ್ ಗಳಿಗೆ ಬೇಕಾಗಿದೆ. ಗುಣಮಟ್ಟದ ಕಾಮಗಾರಿಗೆ ಹೆಚ್ಚು ಆದ್ಯತೆ ನೀಡಬೇಕಾಗಿದೆ. ಒಂದು ರಾಜ್ಯ ಅಭಿವೃದ್ಧಿ ಆಗಬೇಕಾದರೆ ಅಲ್ಲಿನ ಮೂಲಭೂತ ಸೌಕರ್ಯಗಳ ಜೊತೆಗೆ ರಸ್ತೆ ಚರಂಡಿ ನೈರ್ಮಲ್ಯ ಇವೆಲ್ಲವೂ ಸಹ ಒಟ್ಟಾಗಿ ಆಗಬೇಕಾಗಿದೆ ಎಂದು ತಿಳಿಸಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ ಸಂಸ್ಥಾಪಕರ ದಿನಾಚರಣೆ ಪ್ರಯುಕ್ತ ಸಂಸದ ಡಾ. ಸಿ ಎಂ ಮಂಜುನಾಥ್ ದಂಪತಿಗೆ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾ ನಂದನಾಥ ಸ್ವಾಮೀಜಿ, FKCCI ಅಧ್ಯಕ್ಷ ಎಂಜಿ ಬಾಲಕೃಷ್ಣ, ಚುನಾಯಿತ ಅಧ್ಯಕ್ಷೆ ಉಮಾರೆಡ್ಡಿ,ಉಪಾಧ್ಯಕ್ಷ ಸಾಯಿರಾಂ ಪ್ರಸಾದ್,ಮಾಜಿ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ, ಅನುಸೂಯ ಮಂಜುನಾಥ ಹಾಗೂ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸೇರಿದಂತೆ ನಿರ್ದೇಶಕರು ಪದಾಧಿಕಾರಿಗಳು ಇದೇ ವೇಳೆ ಉಪಸ್ಥಿತರಿದ್ದರು.