ಚಿಕ್ಕಬಳ್ಳಾಪುರ: ಎಂ.ಎಸ್. ರಾಮಯ್ಯ ಯೂತ್ ಫೌಂಡೇಷನ್ ನಿಂದ 75 ನೇ ಗಣರಾಜ್ಯೋತ್ಸವದ ಅಂಗವಾಗಿ ಪ್ರಬುದ್ಧ ರಾಷ್ಟ್ರ ನಿರ್ಮಾಣಕ್ಕಾಗಿ ಬೃಹತ್ ತಿರಂಗಾ ರಾಲಿ ಆಯೋಜಿಸಲಾಗಿತ್ತು.
ಎಂ.ಎಸ್. ರಾಮಯ್ಯ ಯೂತ್ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷರಾದ ಎಂ.ಎಸ್. ರಕ್ಷಾ ರಾಮಯ್ಯ ಅವರ ಸಾರಥ್ಯದಲ್ಲಿ ಚಿಕ್ಕಬಳ್ಳಾಪುರದ ಡಿವೈಸ್ ಸಿಟಿ ಎಂ.ಜಿ. ರಸ್ತೆಯಿಂದ ಭೋಗ ನಂದೀಶ್ವರ ದೇವಸ್ಥಾನದವರೆಗೆ ತಿರಂಗಾ ಜಾಥ ಸಾಗಿತು. ಬೃಹತ್ ಜನ ಸಮೂಹ ರಕ್ಷಾ ರಾಮಯ್ಯ ಅವರ ಜೊತೆಯಾಯಿತು.
ದೇಶದ ಸಾರ್ವಭೌಮತೆ, ಸಮಗ್ರತೆ ಎತ್ತಿಹಿಡಿಯುವ ಘೋಷಣೆಗಳೊಂದಿಗೆ ಅಪಾರ ಜನಸ್ತೋಮ ರಾಲಿಯಲ್ಲಿ ಭಾಗವಹಿಸಿತ್ತು. ತ್ರಿವರ್ಣ ಧ್ವಜ ಹಿಡಿದು ಸಾಗಿದ ಜನ, ಸಂವಿಧಾನ, ತ್ರಿವರ್ಣ ಧ್ವಜದ ಮಹಿಮೆ, ಗಣರಾಜ್ಯೋತ್ಸವದ ವೈಶಿಷ್ಟ್ಯಗಳ ಕುರಿತು ಜನರಲ್ಲಿ ಅರಿವು ಮೂಡಿಸಿದರು.
ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ರಕ್ಷಾ ರಾಮಯ್ಯ, ಸ್ವಾತಂತ್ರ್ಯ ಪೂರ್ವದಿಂದಲೂ ದೇಶ ಕಟ್ಟಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಸರ್ಕಾರಿ ಸಂಸ್ಥೆಗಳನ್ನು ಖಾಸಗಿಕರಣ ಮಾಡುತ್ತಿದ್ದಾರೆ.ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡದೆ ಜನಸಾಮಾನ್ಯರು ತೀವ್ರ ತೊಂದರೆಗೆ ಸಿಲುಕಿದ್ದಾರೆ.ದಿನಬಳಕೆ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ದೇಶದ ಸಮಸ್ಯೆಗಳ ಬಗ್ಗೆ ಮಾಧ್ಯಮಗಳ ಮುಂದೆ ಬಂದು ಈವರೆಗೆ ಚಕಾರ ಎತ್ತಿಲ್ಲ. ಜನರ ಬದುಕುಕಟ್ಟಿಕೊಳ್ಳುವ ನಿಟ್ಟಿನಲ್ಲಿ ಯಾವುದೇ ಮಾಹಿತಿ ನೀಡದೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ನಮ್ಮಿಂದಲೇ ಪ್ರಗತಿಯಾಗಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ಟೀಕಿಸಿದರು.
ರಾಲಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು, ಬ್ಲಾಕ್ ಕಾಂಗ್ರೆಸ್ ಮುಖಂಡರು ಮತ್ತು ಪದಾಧಿಕಾರಿಗಳು, ಎಲ್ಲಾ ಮುಂಚೂಣಿ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರದಂತೆ ಕಾಂಗ್ರೆಸ್ಸಿನ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.