ಬೆಂಗಳೂರು:ನಾವು ಕರ್ನಾಟಕದಲ್ಲಿ ಪ್ರಣಾಳಿಕೆ ಸಿದ್ಧಪಡಿಸುವಾಗಲೂ ಇದೇ ರೀತಿ ಎಲ್ಲರ ಅಬಿಪ್ರಾಯ ಸಂಗ್ರಹಿಸಲಾಗಿತ್ತು. ಅವುಗಳ ಆಧಾರದ ಮೇಲೆ, ಜನ ಸಾಮಾನ್ಯರಿಗೆ ನೆರವಾಗಲು 5 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆವು.
ಮನಮೋಹನ್ ಸಿಂಗ್ ಅವರ 10 ವರ್ಷಗಳ ಅಧಿಕಾರ ಅವಧಿಯಲ್ಲಿ ನಾವು ಜನರ ಬದುಕು ಕಟ್ಟಿಕೊಡುವ ಬಗ್ಗೆ ಆಲೋಚನೆ ಮಾಡಲಾಗಿತ್ತು. ಬಿಜೆಪಿಯ 10 ವರ್ಷಗಳ ಅವಧಿಯಲ್ಲಿ ಜನರ ಬದುಕಿನಲ್ಲಿ ಬದಲಾವಣೆ ತರುವಂತಹ ಒಂದು ಯೋಜನೆ ತರಲಿಲ್ಲ. ನಮ್ಮ ಅವಧಿಯಲ್ಲಿ ಆಹಾರ ಭದ್ರತಾ ಕಾಯ್ದೆ, ಗ್ರಾಮೀಣ ಉದ್ಯೋಗ ಖಾತ್ರಿ, ಶೈಕ್ಷಣಿಕ ಹಕ್ಕು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದೆವು.
ನರೆಗಾ ಯೋಜನೆ ಮೂಲಕ ಗ್ರಾಮೀಣ ಭಾಗದಲ್ಲಿ ಉದ್ಯೋಗಕ್ಕೆ ಆದ್ಯತೆ ನೀಡಿ ಗ್ರಾಮೀಣ ಪ್ರದೇಶ ಅಭಿವೃದ್ಧಿಗೆ ಭದ್ರ ಅಡಿಪಾಯ ಹಾಕಲಾಯಿತು. ನಾವು ಆಹಾರ ಭದ್ರತಾ ಕಾಯ್ದೆ ಮೂಲಕ ಜನರಿಗೆ ಆಹಾರ ಸಿಗುವಂತೆ ಮಾಡಿದೆವು. ಅರಣ್ಯ ಸಂರಕ್ಷಣಾ ಕಾಯ್ದೆ ಜಾರರಿಗೆ ತಂದೆವು.
ನಮ್ಮದು ಪ್ರಗತಿಪರ ರಾಜ್ಯವಾದರೂ ನಮ್ಮ ಶೇ.61ರಷ್ಟು ಜನಸಂಖ್ಯೆ ಗ್ರಾಮೀಣ ಪ್ರದೇಶದಲ್ಲಿದ್ದಾರೆ. ಇನ್ನು ನಮ್ಮ ರಾಜ್ಯದ ತೆರಿಗೆ ವಿಚಾರದಲ್ಲಿ ಶೇ.96ರಷ್ಟು ನಗರ ಪ್ರದೇಶಗಳಿಂದ ಬಂದರೆ, ಕೇವಲ ಶೇ.4ರಷ್ಟು ಮಾತ್ರ ಗ್ರಾಮೀಣ ಪ್ರದೇಶದಿಂದ ಬರುತ್ತಿವೆ. ನಮ್ಮ ರೈತರ ಕೃಷಿ, ತೋಟಗಾರಿಕೆ ಬೆಳೆಗಳಿಂದ ನಮಗೆ ಹೆಚ್ಚಿನ ಶಕ್ತಿ ಇದೆ. ಇವುಗಳ ಹೊರತಾಗಿ ನಾವು ಮುನ್ನಡೆಯಲು ಅಸಾಧ್ಯ.
ಬಡವರಿಗೆ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಉತ್ತೇಜನ ನೀಡುವ ಯಾವುದೇ ಕಾರ್ಯಕ್ರಮಗಳಿದ್ದರೂ ಅವುಗಳನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದೆ. ನಾವು ಕಳೆದ ಚುನಾವಣೆ ಸಮಯದಲ್ಲಿ ನ್ಯಾಯ್ ಯೋಜನೆ ಪರಿಚಯಿಸಿದ್ದರು. ನಾವು ಅದರ ಆಧಾರದ ಮೇಲೆ ಕೆಲವು ಕಾರ್ಯಕ್ರಮ ರೂಪಿಸಿದೆವು. ನಾವು ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸುವಾಗ ಗೃಹಜ್ಯೋತಿ ಯೋಜನೆ ಘೋಷಣೆ ಮಾಡುವಾಗ ಆರಂಭದಲ್ಲಿ 300 ಯೂನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಲು ನಾನು, ಸಿದ್ದರಾಮಯ್ಯನವರು ಹಾಗೂ ಸುರ್ಜೆವಾಲ ಅವರು ತೀರ್ಮಾನಿಸಿದ್ದೆವು. ನಾನು ಇಂಧನ ಇಲಾಖೆ ಸಚಿವನಾಗಿದ್ದ ಕಾರಣ, ಅಧಿಕಾರಿಗಳ ಜತೆ ಪರಿಶೀಲನೆ ನಡೆಸಿದಾಗ, ಈ ಯೋಜನೆ ಪ್ರಕಟಿಸುವ ದಿನ ಬೆಳಗಿನ ಜಾವ ಅದನ್ನು 200 ಯೂನಿಟ್ ಗೆ ಇಳಿಸಲಾಯಿತು. ಈಗ ಮೋದಿ ಅವರು ಸೋಲಾರ್ ಪ್ಯಾನಲ್ ಗಳ ಮೂಲಕ 300 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂದು ಹೇಳಿದ್ದಾರೆ.
ನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದ ಬಿಜೆಪಿಯವರು ಈಗ ಮೋದಿ ಗ್ಯಾರಂಟಿ ಎಂದು ಹೇಳಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ. ಆರ್ಥಿಕತೆ ಹಾಳಾಗಲಿದೆ ಎಂದು ಹೇಳುತ್ತಿದ್ದವರು ಎಲ್ಲಾ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆ ಪ್ರಕಟಿಸಿದರು. ನಾವು ನಮ್ಮ ಜನರ ಬದುಕಿನಲ್ಲಿ ಬದಲಾವಣೆ ತರುವುದು ಮುಖ್ಯ. ನಮ್ಮ ಯೋಜನೆಗಳಿಂದ ವಿದ್ಯುತ್ ಬಿಲ್ ನಲ್ಲಿ 1500, ಗೃಹಲಕ್ಷ್ಮಿ ಯೋಜನೆಯಲ್ಲಿ 2000, ಶಕ್ತಿ ಯೋಜನೆಯಲ್ಲಿ 3000 ಹಣ ಉಳಿಯುತ್ತದೆ. ನಮ್ಮ ಐದು ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ ಸುಮಾರು 5-6 ಸಾವಿರ ಪ್ರತಿ ತಿಂಗಳು ಉಳಿತಾಯವಾಗಲಿದೆ.
ನಮ್ಮ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ವಾಸ್ತವಾಂಶಕ್ಕೆ ಹತ್ತಿರವಾಗುವಂತೆ ಸಲಹೆ ನೀಡಬೇಕು. ಇಂದು ನಮಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತುತ್ತಿದ್ದೇವೆ. ನಾವು ಲೆಕ್ಕಾಚಾರ ಹಾಕಲು ಆರಂಭಿಸಿದ ನಂತರ ಬೇರೆ ರಾಜ್ಯಗಳು ತಮಗಾಗಿರುವ ಅನ್ಯಾಯ ಪ್ರಶ್ನಿಸುತ್ತಿದ್ದಾರೆ. ನಿರ್ಮಲಾ ಸೀತರಾಮನ್ ಅವರು ಹಣಕಾಸು ಆಯೋಗದ ಕಡೆ ಬೆಟ್ಟು ಮಾಡಿ ತೋರುತ್ತಿದ್ದಾರೆ. ಹಣಕಾಸು ಆಯೋಗ ಬಜೆಟ್ ಮಂಡನೆ ಮಾಡುವುದಿಲ್ಲ ಅಲ್ಲವೇ? ಸರ್ಕಾರ ಬಜೆಟ್ ಮಂಡನೆ ಮಾಡುವಾಗ, ರಾಜ್ಯಕ್ಕೆ ಆಗುವ ಅನ್ಯಾಯ ಸರಿಪಡಿಸಬಹುದಲ್ಲವೇ?
ನಮ್ಮ ರಾಜ್ಯದಲ್ಲಿ ನಾಗ್ಪುರ ಶಿಕ್ಷಣ ನೀತಿಯನ್ನು ತೆಗೆದುಹಾಕಲು ಮುಂದಾಗಿದ್ದೇವೆ. ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಬಿಜೆಪಿ ಸ್ನೇಹಿತರ ಬಳಿಯೇ ನಾನು ಚರ್ಚೆ ಮಾಡಿದ್ದೇನೆ. ಈ ಎನ್ಇಪಿ ಜಾರಿ ಅಸಾಧ್ಯ ಎಂದು ಅವರೇ ಅಭಿಪ್ರಾಯಪಟ್ಟಿದ್ದಾರೆ. ಬಿಜೆಪಿ ರಾಜ್ಯಗಳಲ್ಲಿ ಜಾರಿ ಮಾಡಲಾಗದನ್ನು ನಮ್ಮ ರಾಜ್ಯದಲ್ಲಿ ಆತುರದಲ್ಲಿ ಜಾರಿ ಮಾಡಲು ಮುಂದಾದರು. ಇದನ್ನು ಸರಿಪಡಿಸಲು ಸಮಿತಿ ರಚಿಸಲಾಗಿದೆ. ಇದೆಲ್ಲದರ ಜವಾಬ್ದಾರಿಯನ್ನು ಸಚಿವ ಸುಧಾಕರ್ ಅವರ ಹೆಗಲಿಗೆ ನೀಡಲಾಗಿದೆ. ನಮ್ಮ ಶಿಕ್ಷಣ ವ್ಯವಸ್ಥೆ ವಿಶ್ವದಾದ್ಯಂತ ಪ್ರಶಂಸೆ ಪಡೆದಿದೆ. ಈ ಕಾರಣಕ್ಕೆ ಪ್ರಪಂಚದ ಪ್ರಮುಖ 500 ಕಂಪನಿಗಳಲ್ಲಿ ಭಾರತೀಯರೇ ಹೆಚ್ಚು ನಿಯಂತ್ರಣ ಹೊಂದಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆ ಸಮಿತಿ ಸಭೆಯಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್, ಎಐಸಿಸಿ ಪ್ರಣಾಳಿಕೆ ಸಮಿತಿ ಸದಸ್ಯ ರಾಜು, ಸಚಿವರಾದ ಎಚ್ ಸಿ ಮಹದೇವಪ್ಪ, ಡಾ. ಎಂ.ಸಿ. ಸುಧಾಕರ್, ಶಿವರಾಜ್ ತಂಗಡಗಿ, ಲಕ್ಷ್ಮೀ ಹೆಬ್ಬಾಳ್ಕರ್ ಮತ್ತಿತರರು ಭಾಗವಹಿಸಿದ್ದರು.