ಬೆಂಗಳೂರು : 2028 ರಲ್ಲೂ ನಾವೇ ಅಧಿಕಾರಕ್ಕೆ ಬಂದು ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುವ ಕಾರ್ಯಕ್ರಮ ಮುಂದುವರೆಸುತ್ತೇವೆ. ಮಹಿಳೆಯರು ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯದ ರಕ್ಷಣೆಗೆ ಮುಂದಾಗಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
KPCC ಕಚೇರಿಯ ಭಾರತ್ ಜೋಡೋ ಭವನದಲ್ಲಿ ಸೌಮ್ಯ ರೆಡ್ಡಿಯವರು ಪ್ರದೇಶ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಜಾತ್ಯತೀತತೆ, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಮತ್ತು ಸಂವಿಧನದ ಮೌಲ್ಯಗಳ ಬಗ್ಗೆ ಸ್ಪಷ್ಟತೆ ಕೊಡುವ ಮೂಲಕ ಕಾರ್ಯಕರ್ತೆಯರನ್ನು ಸಜ್ಜುಗೊಳಿಸಿ ಪಕ್ಷ ಸಂಘಟನೆ ಮಾಡುವ ಸಮರ್ಥ್ಯ ಸೌಮ್ಯರೆಡ್ಡಿಯವರಿಗೆ ಇದ್ದು ಈ ದಿಕ್ಕಿನಲ್ಲಿ ಮುಂದುವರೆಯಿರಿ ಎಂದು ಕರೆ ನೀಡಿದರು.
ಬಿಜೆಪಿ ಪಕ್ಷವೇ ಬಹುಜನರ, ದುಡಿಯುವ ವರ್ಗಗಳ, ಶ್ರಮಿಕ ಸಂಸ್ಕೃತಿಯ ವಿರೋಧಿ. ಮುಖ್ಯವಾಗಿ ಬಿಜೆಪಿ ಮಹಿಳಾ ಮೀಸಲಾತಿಯ, ಮಹಿಳಾ ಹಕ್ಕುಗಳ ವಿರೋಧಿ. ಇದನ್ನು ಸಮಸ್ತ ಮಹಿಳೆಯರಿಗೆ ಅರ್ಥ ಮಾಡಿಸುವ ಕೆಲಸ ಮಾಡಿ ಎಂದು ಕರೆ ನೀಡಿದರು.
ಮಹಿಳಾ ಮೀಸಲಾತಿ ಜಾರಿಗೆ ತಂದಿದ್ದು ಕಾಂಗ್ರೆಸ್ ಪಕ್ಷ. ಮಹಿಳೆಯರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುವ ಕಾಳಜಿ ಇರುವುದು ಕಾಂಗ್ರೆಸ್ಸಿಗೆ ಮಾತ್ರ. ಹೀಗಾಗಿ ಎಲ್ಲಾ ಜಾತಿ, ಎಲ್ಲಾ ಧರ್ಮದ ಮಹಿಳೆಯರಿಗೆ ಆರ್ಥಿಕ ಶಕ್ತಿ ಕೊಡುವ ಗ್ಯಾರಂಟಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತಂದಿದ್ದು ನಾವು. ಇದನ್ನು ವಿರೋಧಿಸಿದ್ದು ಬಿಜೆಪಿ. ರಾಜ್ಯದ ಒಂದು ಕೋಟಿ 21 ಲಕ್ಷ ಕುಟುಂಬಗಳಿಗೆ ಪ್ರತಿ ತಿಂಗಳು ಆರ್ಥಿಕ ಶಕ್ತಿ ನೀಡುತ್ತಿರುವುದು ನಾವು. ಬಿಜೆಪಿಯವರು ಅತ್ತೆ ಸೊಸೆ ಜಗಳ ಆಡ್ತಾರೆ ಎನ್ನುವ ಸುಳ್ಳು ನೆಪ ಮುಂದಿಟ್ಟು ಮಹಿಳೆಯರ ಖಾತೆಗೆ ಹೋಗುವ ಹಣವನ್ನು ನಿಲ್ಲಿಸಲು ಷಡ್ಯಂತ್ರ ನಡೆಸಿತು ಎಂದು ಟೀಕಿಸಿದರು.
ಆದರೆ ಗೃಹಲಕ್ಷ್ಮಿ ಹಣದಲ್ಲಿ ಅತ್ತೆ ಸೊಸೆಗೆ ಬಳೆ ಅಂಗಡಿ ಹಾಕಿಕೊಟ್ಟ, ಹೊಲಿಗೆ ಯಂತ್ರ ಕೊಡಿಸಿದ ಉದಾಹರಣೆಗಳು ಸಾಕಷ್ಟಿವೆ ಎಂದು ವಿವರಿಸಿದರು.
2028 ರಲ್ಲೂ ನಾವೇ ಅಧಿಕಾರಕ್ಕೆ ಬಂದು ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುವ ಗ್ಯಾರಂಟಿ ಕಾರ್ಯಕ್ರಮಗಳನ್ನು ಮುಂದುವರೆಸುತ್ತೇವೆ. ನೀವು ನಮಗೆ ರಾಜಕೀಯ ಶಕ್ತಿ ಕೊಡಿ. ನಾವು ನಿಮಗೆ ಆರ್ಥಿಕ ಶಕ್ತಿ ನೀಡುವುದನ್ನು ಮುಂದುವರೆಸುತ್ತೇವೆ ಎಂದು ಭರವಸೆ ನೀಡಿದರು.
ಬಿಜೆಪಿಯವರು ಅನ್ನಭಾಗ್ಯವನ್ನೂ ವಿರೋಧಿಸುತ್ತಾರೆ, ಗೃಹಲಕ್ಷ್ಮಿ ಯೋಜನೆ, ಗೃಹಜ್ಯೋತಿ ಯೋಜನೆಯನ್ನೂ ವಿರೋಧಿಸುತ್ತಿದೆ. ಇದಕ್ಕೆ ತಕ್ಕ ಉತ್ತರ ನೀವೇ ನೀಡಬೇಕು ಎಂದು ಕರೆ ನೀಡಿದರು.
ಸಂವಿಧಾನ ಮಹಿಳೆಯರಿಗೆ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಶಕ್ತಿ ನೀಡಿದೆ. ಈ ಸಂವಿಧಾನವನ್ನು ಬಿಜೆಪಿ ವಿರೋಧಿಸುತ್ತದೆ. ಬಿಜೆಪಿಯವರ ಗುರೂಜಿ ಸಾವರ್ಕರ್ ಸಂವಿಧಾನ ವಿರೋಧಿಸಿದ್ದರು. ಈ ಇತಿಹಾಸವನ್ನು ರಾಜ್ಯದ ಮಹಿಳೆಯರು, ಯುವತಿಯರಿಗೆ ಸರಿಯಾಗಿ ಮನದಟ್ಟು ಮಾಡಿಸಿ ಎಂದು ಕರೆ ನೀಡಿದರು.
2028ಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ: ಡಿಸಿಎಂ ಡಿ.ಕೆ. ಶಿವಕುಮಾರ್
“ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಶಕ್ತಿ ತುಂಬಲು ಅನೇಕ ಕಾರ್ಯಕ್ರಮ ರೂಪಿಸಿದೆ. ಪಕ್ಷದ ಆಚಾರ ವಿಚಾರ ಹಾಗೂ ಯೋಜನೆಗಳನ್ನು ರಾಜ್ಯದ ಮೂಲೆ ಮೂಲೆಯಲ್ಲಿ ಪ್ರಚಾರ ಮಾಡಿ, ಆಗ 2028ರಲ್ಲೂ ನಮ್ಮ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
“ಕಾಂಗ್ರೆಸ್ ಪಕ್ಷ ಯಾವುದೇ ಕಾರ್ಯಕ್ರಮ ರೂಪಿಸಿದರು ಅದು ಮಹಿಳಾ ಕೇಂದ್ರಿತ ಕಾರ್ಯಕ್ರಮಗಳಾಗಿರುತ್ತವೆ. ಮಹಿಳೆಯರಿಗೆ ಶಕ್ತಿ ತುಂಬಲು ನಮ್ಮ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಇದನ್ನು ಬಳಸಿಕೊಂಡು ಈ ಯೋಜನೆಗಳ ಫಲಾನುಭವಿಗಳಿಗೆ ಕಾಂಗ್ರೆಸ್ ಸರ್ಕಾರದ ಕೊಡುಗೆಗಳನ್ನು ಮನದಟ್ಟು ಮಾಡಿ. ಆಮೂಲಕ ತಳಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟನೆ ಮಾಡಿ. ಆಗ ಬಿಜೆಪಿಯವರು ಏನೇ ತಿಪ್ಪರಲಾಗ ಹಾಕಿದರೂ 2028ಕ್ಕೆ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುತ್ತದೆ” ಎಂದು ತಿಳಿಸಿದರು.
“ಇಂದು ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ನಾವೆಲ್ಲರೂ ಅವರ ಕೈ ಬಲಪಡಿಸಬೇಕು. ನಮ್ಮ ಗುರಿ 2028ರ ಚುನಾವಣೆ. ಆನಂತರ 2029ರ ಚುನಾವಣೆ. ದೇಶದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು. ನಾನು ಎಷ್ಟು ದಿನ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಇರುತ್ತೇನೋ ಗೊತ್ತಿಲ್ಲ. ಆದರೆ ಅಧಿಕಾರದಲ್ಲಿ ಇರುವಾಗ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ನಮ್ಮ ಸಂಘಟನೆ ಇತಿಹಾಸದ ಪುಟಕ್ಕೆ ಹೋಗುತ್ತದೆ” ಎಂದು ತಿಳಿಸಿದರು.
ನನಗೆ ರಾಜಕೀಯ ಚದುರಂಗ ಗೊತ್ತಿದೆ:
“ಯಾವ ರೀತಿ ರಾಜಕಾರಣ ಮಾಡಬೇಕು, ಅವರು ಏನೇ ಚದುರಂಗ ಆಟವಾಡಿದರೂ ಹೇಗೆ ಚೆಕ್ ಮೇಟ್ ನೀಡಬೇಕು ಎಂದು ನನಗೆ ಗೊತ್ತಿದೆ. ರಾಜಕಾರಣ ಫುಟ್ಬಾಲ್ ಅಲ್ಲ. ಚದುರಂಗದಾಟ. ಆ ಆಟ ನನಗೆ ಗೊತ್ತಿದೆ. ನೀವು ಮಹಿಳೆಯರು ಪಂಚಾಯ್ತಿ, ಬೂತ್ ಮಟ್ಟದಲ್ಲಿ ಮಹಿಳೆಯರನ್ನು ಸಂಘಟನೆ ಮಾಡಿ. ಮತ್ತೆ ನಾವು ರಾಜ್ಯದಲ್ಲಿ ಅಧಿಕಾರಕ್ಕೆ ಯಾಕೆ ಬರುವುದಿಲ್ಲ ನೋಡುತ್ತೇನೆ” ಎಂದು ತಿಳಿಸಿದರು.
ರಾಮಲಿಂಗಾ ರೆಡ್ಡಿ ಜತೆ ಚರ್ಚೆ ಮಾಡದೇ ಸೌಮ್ಯ ಅವರ ಹೆಸರು ಸೂಚಿಸಿದೆ:
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸ್ಥಾನಕ್ಕೆ ನಾವು ನಾಲ್ಕೈದು ಹೆಸರು ಚರ್ಚೆ ಮಾಡಿದ್ದೆವು. ನಾನು ಸೌಮ್ಯರೆಡ್ಡಿ ಅವರ ಹೆಸರು ಸೂಚಿಸುವಾಗ ಆಕೆಯ ಜತೆಗಾಗಲಿ, ಅವರ ತಂದೆ ರಾಮಲಿಂಗಾ ರೆಡ್ಡಿ ಅವರ ಜತೆಗಾಗಲಿ ಚರ್ಚೆ ಮಾಡಲಿಲ್ಲ. ಸೌಮ್ಯ ರೆಡ್ಡಿ ಅವರು ಲೋಕಸಭೆ ಟಿಕೆಟ್ ಅನ್ನು ನೀಡಿರಲಿಲ್ಲ. ನಾನು ಮುಖ್ಯಮಂತ್ರಿಗಳು ಹಾಗೂ ಪ್ರಧಾನ ಕಾರ್ಯದರ್ಶಿಗಳು ಬಲವಂತ ಮಾಡಿ ಚುನಾವಣೆಗೆ ಸ್ಪರ್ಧಿಸುವಂತೆ ಮಾಡಿದ್ದೆವು. ಸೌಮ್ಯರೆಡ್ಡಿ ಅವರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಿದಾಗ ಅನೇಕರು ಟೀಕೆ ಮಾಡಿದರು. ಆದರೂ ನೀಡಿದ್ದೇವೆ. ಕಾರಣ ಬೆಂಗಳೂರಿನಲ್ಲಿ ರಾಜಕಾರಣ ಮಾಡುವುದು ಅಷ್ಟು ಸುಲಭವಲ್ಲ. ಪಕ್ಷಕ್ಕಾಗಿ ಅವರಿಗೆ ಜವಾಬ್ದಾರಿ ನೀಡುತ್ತಿದ್ದೇವೆ.
ಸೋನಿಯಾ ಗಾಂಧಿ ಅವರನ್ನು ಸ್ಮರಿಸಬೇಕು
ಸೋನಿಯಾ ಗಾಂಧಿ ಅವರು ಇಂದಿರಾ ಗಾಂಧಿ ಅವರ ನುಡಿಮುತ್ತುಗಳು ಎಂಬ ಪುಸ್ತಕ ಬರೆದಿದ್ದು, ಅದರ ಕಾಪಿರೈಟ್ ರಾಹುಲ್ ಗಾಂಧಿ ಅವರ ಬಳಿ ಇದೆ. ಆ ಪುಸ್ತಕವನ್ನು ನಾನು ತರ್ಜುಮೆ ಮಾಡಿಸಿದ್ದು, ನೀವೆಲ್ಲರೂ ಇಂದಿರಾ ಗಾಂಧಿ ಅವರ ನುಡಿಮುತ್ತುಗಳನ್ನು ಓದಬೇಕು. ಅವಕಾಶ ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ, ನಾವೇ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು ಎಂದು ಇಂದಿರಾ ಗಾಂಧಿ ಹೇಳಿದ್ದಾರೆ.ನಮ್ಮ ಉಕ್ಕಿನ ಮಹಿಳೆ ಇಂದಿರಾ ಗಾಂಧಿ. ನೀವೆಲ್ಲರೂ ಸೋನಿಯಾ ಗಾಂಧಿ ಅವರನ್ನು ಗಮನಿಸಬೇಕು. ದೇಶದಲ್ಲಿ ಪ್ರಧಾನಮಂತ್ರಿಯಾಗುವ ಅವಕಾಶವಿದ್ದರೂ ಅದನ್ನು ತ್ಯಾಗ ಮಾಡಿದ್ದರೆ ಅದು ಸೋನಿಯಾ ಗಾಂಧಿ. ದೇಶದ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರಿಗೆ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟರು. ಅವರ ಹೆಸರು ಕೇಳಿದರೆ ನಾನು ಭಾವುಕನಾಗುತ್ತೇನೆ. ಬಿಜೆಪಿಯವರು ನನ್ನನ್ನು ತಿಹಾರ್ ಜೈಲಿಗೆ ಹಾಕಿದಾಗ, ಆ ತಾಯಿ ಜೈಲಿಗೆ ಬಂದು ನನಗೆ ಧೈರ್ಯ ತುಂಬಿದರು. ಅದನ್ನು ನಾನು ಎಂದಿಗೂ ಮರೆಯುವುದಿಲ್ಲ.
ಮಹಿಳೆಯರಿಗೆ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಹೋರಾಟ – ಸೌಮ್ಯಾ ರೆಡ್ಡಿ
ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಹಾಗೂ ಕನ್ನಡಿಗರಿಗೆ ಅದರಲ್ಲೂ ರಾಜ್ಯದ ಮಹಿಳೆಯರಿಗೆ ಧನ್ಯವಾದ ಅರ್ಪಿಸುತ್ತೇನೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿ ಯೋಜನೆಗಳ ಜಾರಿ ಸೇರಿದಂತೆ ಅನೇಕ ಉತ್ತಮವಾದ ಕೆಲಸ ಮಾಡುತ್ತಿದೆ.
ಶಕ್ತಿ ಯೋಜನೆಯಿಂದ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುವ ಮಹಿಳೆ ಸ್ವಾಭಿಮಾನದಿಂದ ಬಸ್ ನಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾಳೆ. ಇನ್ನು ಗೃಹಲಕ್ಷ್ಮಿ ಯೋಜನೆಯಿಂದ ಗ್ರಾಮೀಣ ಭಾಗದ ಮಹಿಳೆಯರು ಹಳ್ಳಿಯಲ್ಲಿ ಗ್ರಂಥಾಲಯ ಆರಂಭಿಸಿದರೆ, ಮತ್ತೆ ಕೆಲವು ಮಗನಿಗೆ ಬೈಕ್ ಕೊಡಿಸಿದ್ದಾರೆ. ಮತ್ತೆ ಕೆಲವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ, ಗಂಡನ ಶಸ್ತ್ರ ಚಿಕಿತ್ಸೆ ನೀಡುತ್ತಿದ್ದಾರೆ. ಇನ್ನು ಕೆಲವು ಮಹಿಳೆಯರು ತಮ್ಮ ಮನೆಗೆ ಫ್ರಿಡ್ಜ್, ಟಿವಿ ಹಾಗೂ ಚಿನ್ನಾಭರಣ ಖರೀದಿ ಮಾಡುತ್ತಿದ್ದಾರೆ.
ಮಹಿಳೆಯರಿಗೆ ಆರ್ಥಿಕವಾಗಿ, ಸಾಮಾಜಿಕ ಹಾಗೂ ರಾಜಕೀಯವಾಗಿ ಸರಿಯಾದ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಹೋರಾಟ ಮುಂದುವರಿಯಲಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 1984ರಲ್ಲಿ ಬೆಂಗಳೂರಿನಲ್ಲಿ ಮಹಿಳಾ ಕಾಂಗ್ರೆಸ್ ಸ್ಥಾಪನೆ ಮಾಡಿದರು. 40 ವರ್ಷಗಳ ನಂತರ ಈ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸುತ್ತಿರುವುದು ನನ್ನ ಸೌಭಾಗ್ಯ.
ನಾನು ಅಧಿಕಾರ ಸ್ವೀಕರಿಸಿ 9 ತಿಂಗಳಲ್ಲಿ ದೇಶದ 18 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ -ಅಲ್ಕಾಲಂಬಾ
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮಾಜಿ ಅದ್ಯಕ್ಷರುಗಳಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರು ಸೌಮ್ಯ ರೆಡ್ಡಿ ಅವರನ್ನು ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ನೇಮಕ ಮಾಡಿದ್ದಾರೆ. ಅವರು ಇಂದು ತಮ್ಮ ಪ್ರತಿಜ್ಞಾವಿಧಿ ಸ್ವೀಕರಿಸಿ ಹೊಸ ಜವಾಬ್ದಾರಿ ವಹಿಸಲಿದ್ದಾರೆ.
ನಾನು ಅಧಿಕಾರ ಸ್ವೀಕರಿಸಿ 9 ತಿಂಗಳಲ್ಲಿ ದೇಶದ 18 ರಾಜ್ಯಗಳಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪ್ರವಾಸ ಮಾಡಿ ಮಹಿಳಾ ಕಾಂಗ್ರೆಸ್ ಸಂಘಟನೆ ಮಾಡುತ್ತಿದ್ದೇನೆ. ಸೆಪ್ಟೆಂಬರ್ ತಿಂಗಳಲ್ಲಿ ಮಹಿಳಾ ಕಾಂಗ್ರೆಸ್ ಸಂಸ್ಥಾಪನಾ ದಿನದಂದು ರಾಷ್ಟ್ರವ್ಯಾಪಿ ಮಹಿಳಾ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಆರಂಭಿಸಿದೆವು. ಈ ಅಭಿಯಾನದಲ್ಲಿ ಒಂದೇ ತಿಂಗಳಲ್ಲಿ 2.50 ಲಕ್ಷ ಮಹಿಳೆಯರು ಆನ್ಲೈನ್ ಮೂಲಕ ಸದಸ್ಯತ್ವ ಪಡೆದಿದ್ದಾರೆ. ತೆಲಂಗಾಣದಲ್ಲಿ 50 ಸಾವಿರ ಮಹಿಳೆಯರು ಸದಸ್ಯತ್ವ ಪಡೆದಿದ್ದು, ಕರ್ನಾಟಕದಲ್ಲಿ 30 ಸಾವಿರ ಮಹಿಳೆಯರು ಮಹಿಳಾ ಕಾಂಗ್ರೆಸ್ ಸದಸ್ಯತ್ವ ಪಡೆದಿದ್ದಾರೆ.
ಈ ಎರಡೂ ರಾಜ್ಯಗಳಲ್ಲಿ ಜನರು ಕಾಂಗ್ರೆಸ್ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ. ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿರುವುದರಿಂದ ಮಹಿಳೆಯರು ಕಾಂಗ್ರೆಸ್ ನತ್ತ ಒಲವು ತೋರಿ ಸದಸ್ಯತ್ವ ಪಡೆಯುತ್ತಿದ್ದಾರೆ. ಈ ಅಭಿಯಾನ ಮುಂದುವರಿಯಲಿದ್ದು, ದೇಶದಲ್ಲಿ ಈ ವರ್ಷದೊಳಗೆ 10 ಲಕ್ಷ ಸದಸ್ಯತ್ವ ಸಾಧಿಸುವ ಗುರಿ ಹೊಂದಿದ್ದೇವೆ. ಆಮೂಲಕ ಮಹಿಳೆಯರು ರಾಜಕೀಯ ನ್ಯಾಯ ಪಡೆಯುವ ಹೋರಾಟದಲ್ಲಿ ಭಾಗಿಯಾಗುವಂತೆ ಮಾಡುತ್ತಿದ್ದೇವೆ.
ಬೂತ್ ಸಮಿತಿ, ಬ್ಲಾಕ್ ಸಮಿತಿ, ಜಿಲ್ಲಾ ಸಮಿತಿ ಹಾಗೂ ರಾಜ್ಯ ಮಟ್ಟದ ಪದಾಧಿಕಾರಿಗಳನ್ನು ನೇಮಕ ಮಾಡಿ ಸಂಘಟನೆ ಮಾಡಲಾಗುವುದು. ಜತೆಗೆ ಮಹಿಳೆಯರಿಗಾಗಿ ಮಹಿಳಾ ನಾಯಕತ್ವ ತರಬೇತಿ ಶಿಬಿರ ನಡೆಸಲಾಗುವುದು. ಮಹಿಳಾ ಮೀಸಲಾತಿ ಕಾನೂನು ಜಾರಿಗೆ ನಮ್ಮ ಹೋರಾಟ ಮುಂದುವರಿಯಲಿದೆ. ಈ ಕಾನೂನು ಜಾರಿಯಾದರೆ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲಾಗುವುದು.
ಸಾಮಾನ್ಯ ಮಹಿಳೆಯನ್ನು ಲೋಕಸಭೆ ಸದಸ್ಯೆಯನ್ನಾಗಿ ಮಾಡುವುದು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ಗುರಿಯಾಗಿದೆ. ಇದನ್ನು ಜಾರಿಗೊಲಿಸಲು ಸಂಪೂರ್ಣ ಪ್ರಯತ್ನ ಮಾಡಲಾಗುವುದು. ಇನ್ನು ಮಹಿಳೆಯರಿಗೆ ಆರ್ಥಿಕ ನ್ಯಾಯ ಒಧಗಿಸಿ ಅವರನ್ನು ಆರ್ಥಿಕ ಸಬಲೀಕರಣ ಮಾಡುವ ಗುರಿ ಹೊಂದಿದ್ದೇವೆ. ಕರ್ನಾಟಕ ಸರ್ಕಾರ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ನೀಡುವ ಮೂಲಕ ಈ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದ್ದಾರೆ. ಮಹಿಳಾ ಕಾಂಗ್ರೆಸ್ ಸದಸ್ಯತ್ವ ಶುಲ್ಕವಾಗಿ ಸಂಗ್ರಹಿಸುವ 100 ರೂ. ಶುಲ್ಕದ ಮೊತ್ತವನ್ನು ನಾವು ಮಹಿಳಾ ಕಾಂಗ್ರೆಸ್ ಸದಸ್ಯರಿಗಾಗಿ ವೆಚ್ಚ ಮಾಡುತ್ತೇವೆ.
ಪ್ರತಿ ಮನೆಯ ಮಹಿಳೆಗೆ ಕೆಲಸ ಹಾಗೂ ಸಂಪಾದನೆ ಸಿಗುವಂತಾಗಬೇಕು. ದೇಶದಲ್ಲಿ ನಾವು ನಡೆಸಿದ ಸಮೀಕ್ಷೆಯಲ್ಲಿ ಗ್ರಾಮೀಣ ಮಹಿಳೆಯರು ತಮ್ಮ ಋತುಚಕ್ರದ ವೇಳೆ ಅಗತ್ಯವಿರುವ 10 ಸ್ಯಾನಿಟರಿ ಪ್ಯಾಡ್ ಖರೀದಿಸುವುದು ಕಷ್ಟವಾಗುತ್ತಿದೆ. ಇದರಿಂದ ಅನೇಕ ಮಹಿಳೆಯರು ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಮಹಿಳಾ ಕಾಂಗ್ರೆಸ್ ಸದಸ್ಯರಿಗೆ ಸ್ಯಾನಿಟರ್ ಪ್ಯಾಡ್ ತಯಾರಿ ಮಾಡುವ ಯಂತ್ರವನ್ನು ನೀಡಿ ಅವರಿಗೆ ಆರ್ಥಿಕವಾಗಿ ಸಬಲೀಕರಣ ಮಾಡುವ ಕಾರ್ಯಕ್ರಮ ರೂಪಿಸಿದ್ದೇವೆ. ಇದರಿಂದ ಉತ್ಪಾದನೆಯಾಗುವ ಪ್ಯಾಡ್ ಗಳನ್ನು ಉಚಿತವಾಗಿ ಪ್ರತಿ ಹಳ್ಳಿಯಲ್ಲಿ ಮಹಿಳೆಯರಿಗೆ ನೀಡಲಾಗುವುದು.
ಸಮಾರಂಭದಲ್ಲಿ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಲ್ಕಾಲಂಬಾ , ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ ಕೆ ಶಿವಕುಮಾರ್, ಸಚಿವರಾದ ಕೃಷ್ಣ ಬೈರೇಗೌಡ, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಪಕ್ಷದ ಕಾರ್ಯಾಧ್ಯಕ್ಷರುಗಳು, ಮಾಜಿ ಮಹಿಳಾ ಅಧ್ಯಕ್ಷರುಗಳು, ಶಾಸಕ ಹ್ಯಾರಿಸ್ ಸೃರಿ ಮತ್ತಿತರರು ಭಾಗವಹಿಸಿದ್ದರು.