ಬೆಂಗಳೂರು: ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಳೆದ ಹತ್ತು ವರ್ಷಗಳಿಂದ ಕರ್ನಾಟಕ ರಾಜ್ಯಕ್ಕೆ ಹಾಗೂ 6 ಕೋಟಿ ಕನ್ನಡಿಗರಿಗೆ ಖಾಲಿ ಚೊಂಬು ಕೊಟ್ಟು ಅವಮಾನಿಸಿದೆ. ಇದಕ್ಕೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ತಮ್ಮ ಸ್ವಾಭಿಮಾನ ಮೆರೆಯಬೇಕೆಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಕರೆ ನೀಡಿದ್ದಾರೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ಎಂ.ವಿ.ರಾಜೀವ್ ಗೌಡ ಪರ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಬಾಗಲೂರು ಸರ್ಕಲ್, ಕೊಡಿಗೆಹಳ್ಳಿ ಸರ್ಕಲ್, ಅಗ್ರಹಾರ ಲೇಔಟ್, ಕುವೆಂಪು ನಗರ ಸೇರಿದಂತೆ ವಿವಿಧೆಡೆ ಕಾಂಗ್ರೆಸ್ ಪಕ್ಷ ಆಯೋಜಿಸಿರುವ ಚುನಾವಣಾ ಪ್ರಚಾರ ಸಭೆಗಳನ್ನು ಉದ್ದೇಶಿಸಿ ಸಚಿವ ಕೃಷ್ಣ ಭೈರೆಗೌಡ ಮಾತನಾಡಿದರು.
ಕಳೆದ ಹತ್ತು ವರ್ಷಗಳಿಂದ ಜನರಿಗೆ ಸುಳ್ಳು ಆಶ್ವಾಸನೆ ನೀಡಿ ದೇಶವನ್ನು ಆಳುತ್ತಿರುವ ನರೇಂದ್ರವಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರತಿ ಹೆಜ್ಜೆ ಹಜ್ಜೆಗೂ ಕರ್ನಾಟಕ ರಾಜ್ಯಕ್ಕೆ ಅನ್ಯಾಯ ಮಾಡುತ್ತಲೇ ಬಂದಿದೆ. ಇದನ್ನು ಪ್ರಶ್ನಿಸಬೇಕಿದ್ದ ರಾಜ್ಯದಿಂದ ಗೆದ್ದು ಹೋಗಿದ್ದ ಬಿಜೆಪಿ ಪಕ್ಷದ 26 ಜನ ಸಂಸದರು ಬಾಯಿಗೆ ಶಾಶ್ವತವಾಗಿ ಬಾಯಿ ಮುಚ್ಚಿಕೊಂಡಿದ್ದರು. ಬಹುಶಃ ಅವರುಗಳಿಗೆ ಇಡಿ, ಸಿಬಿಐ, ಸಿಡಿ ಭಯ ಕಾಡಿರಬಹುದು ಎಂದು ಸಚಿವ ಕೃಷ್ಣ ಭೈರೆಗೌಡ ವ್ಯಂಗ್ಯವಾಡಿದರು.
ನಮ್ಮ ರಾಜ್ಯಕ್ಕೆ ಬರಬೇಕಿದ್ದ ನ್ಯಾಯಬದ್ದ ತೆರಿಗೆ ಪಾಲನ್ನು ವಂಚಿಸಲಾಗಿದೆ. ಬರ ಪರಿಹಾರ ನೀಡಲು ಕೂಡ ಹಿಂದೇಟು ಹಾಕಲಾಗಿದೆ. ಬೆಂಗಳೂರು ನಗರಕ್ಕೆ ಶಾಶ್ವತವಾಗಿ ಕುಡಿಯಲು ನೀರುಣಿಸುವ ಮೇಕೆದಾಟು ಯೋಜನೆಗೆ ಬೇಕಂತಲೇ ಕೇಂದ್ರದ ಪರಿಸರ ಇಲಾಖೆಯಿಂದ ಕಾನೂನು ತೊಡಕು ಸೃಷ್ಟಿಯಾಗುವಂತೆ ಮಾಡಲಾಗಿದೆ. ಮಧ್ಯ ಕರ್ನಾಟಕದ ಜಲಮೂಲವಾಗಿರುವ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಘೋಷಿಸಿ ಇದುವರೆಗೂ ಕವಡೆ ಕಾಸನ್ನೂ ಕೂಡ ಬಿಡುಗಡೆ ಮಾಡಲಾಗಿಲ್ಲ. ಇವೆಲ್ಲಾ ನೋಡಿದರೆ ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಖಾಲಿ ಚೊಂಬು ನೀಡಿದಂತಲ್ಲವೇ ಎಂದು ಸಚಿವ ಕೃಷ್ಣ ಭೈರೆಗೌಡ ಪ್ರಶ್ನಿಸಿದ್ದಾರೆ.
ಇನ್ನು ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆಯವರು ಗೆಲ್ಲಿಸಿದ ಜನರಿಂದಲೇ ‘ಗೋ ಬ್ಯಾಕ್’ ಅನ್ನಿಸಿಕೊಂಡವರು. ಕೊಟ್ಟ ಕುದುರೆಯನ್ನು ಏರದವರು ಶೂರರು ಅಲ್ಲ ಧೀರರೂ ಅಲ್ಲ ಅನ್ನುವಂತೆ ಶೋಭಾ ಕರಂದ್ಲಾಜೆ ಗೆದ್ದ ಕ್ಷೇತ್ರಗಳನ್ನು ಅಭಿವೃದ್ದಿ ಮಾಡದೇ, ಪದೆ ಪದೇ ವಲಸೆ ಹೋಗುವ ಜಾಯಮಾನದವರು ಎಂಬುದು ಈಗಾಗಲೇ ಸಾಬಿತಾಗಿದೆ. ಅವರಿಂದ ಬೆಂಗಳೂರಿನ ಜನ ಅಭಿವೃದ್ದಿಯನ್ನು ನಿರಿಕ್ಷಿಸಲ ಸಾಧ್ಯವಿಲ್ಲ. ಹೀಗಾಗಿ ಯಾವತ್ತೂ ಜನರೊಟ್ಟಿಗೆ ಇರುವ ಜನಗಳ ಕಷ್ಟ ಸುಖದಲ್ಲಿ ಪಾಲ್ಗೊಂಡು ನೈತಿಕ ಸ್ಥೈರ್ಯ ನೀಡುವ ಪ್ರೊ.ಎಂ.ವಿ.ರಾಜೀವ್ ಗೌಡರಿಗೆ ಮತ ನೀಡಿ ಎಂದು ಸಚಿವ ಕೃಷ್ಣ ಭೈರೇಗೌಡ ಮತಯಾಚನೆ ಮಾಡಿದರು.