ಬೆಂಗಳೂರು: ಬಿಬಿಎಂಪಿಯ ಹವಾಮಾನ ವೈಪರಿತ್ಯ ವಿಭಾಗದಿಂದ ಬೆಂಮಸಾಸಂಸ್ಥೆಯ ಹವಾಮಾನ ಸ್ನೇಹಿ ಕಾರ್ಯಚಟುವಟಿಕೆಗಳಿಗೆ ಬ್ಲೂಗ್ರೀನ್ ಪ್ರಶಸ್ತಿ 2025 ಗರಿ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ತನ್ನ ಪ್ರಗತಿಪರ ಹಸಿರು ಯೋಜನೆಗಳಿಗಾಗಿ 2025ರ ಪ್ರತಿಷ್ಠಿತ ಬ್ಲೂಗ್ರೀನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಒಟ್ಟು 8 ಕ್ಷೇತ್ರಗಳಿಂದ 175 ಸಂಸ್ಥೆಗಳು ಪ್ರಶಸ್ತಿಗಾಗಿ ಭಾಗವಹಿಸಿದ್ದು, ಬೆಂ.ಮ.ಸಾ.ಸಂಸ್ಥೆಗೆ ಮಾಲಿನ್ಯರಹಿತ ಪರಿಸರದ ಉಪಕ್ರಮಗಳಿಗೆ ಈ ಪ್ರಶಸ್ತಿಗೆ ಭಾಜನವಾಗಿದೆ. ಈ ಪ್ರಶಸ್ತಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸ್ಥಾಪಿಸಿದ್ದು, ನಗರದ ವ್ಯಾಪ್ತಿಯಲ್ಲಿನ ಪ್ರಮುಖ ಹವಾಮಾನ ಸ್ನೇಹಿ ಕಾರ್ಯಚಟುವಟಿಕೆಗಳನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ನೀಡಲಾಗುತ್ತದೆ.
ಬ್ಲೂಗ್ರೀನ್ ಪ್ರಶಸ್ತಿ ಎಂಬ ಬಿಬಿಎಂಪಿಯ ಪ್ರಮುಖ ಉಪಕ್ರಮವು, ಬೆಂಗಳೂರು ಹವಾಮಾನ ಕ್ರಮ ಮತ್ತು ತಾಳ್ಮೆ ಯೋಜನೆಗೆ ನೀಡುತ್ತಿರುವ ಶ್ರೇಷ್ಠ ನಿಷ್ಠೆ, ನವೋದ್ಯಮ ಮತ್ತು ಕೃತಜ್ಞತೆಯನ್ನು ವ್ಯಕ್ತಿಗಳು, ಸಮುದಾಯಗಳು ಮತ್ತು ಸಂಸ್ಥೆಗಳ ಮಟ್ಟದಲ್ಲಿ ಗುರುತಿಸಿ ಗೌರವಿಸುತ್ತದೆ. ಈ ಹಿನ್ನಲೆಯಲ್ಲಿ, ಪರಿಸರ ಸ್ನೇಹಿ ನಗರ ಸಾರಿಗೆ ವ್ಯವಸ್ಥೆ ನಿರ್ಮಾಣದತ್ತ ಬೆಂಮಸಾಸಂಸ್ಥೆಯು ತೋರಿದ ದೃಢ ನಿಷ್ಠೆ ಹಾಗೂ ಕ್ರಿಯಾತ್ಮಕತೆಯ ಹಿನ್ನೆಲೆಯಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಸರ್ಕಾರಿ ಇಲಾಖೆಗಳು, ಸಂಶೋಧನಾ ಸಂಸ್ಥೆ, ಶೈಕ್ಷಣಿಕ ಸಂಸ್ಥೆಗಳ 14 ತೀರ್ಪುಗಾರರ ಸದಸ್ಯರು ಈ ಪ್ರಶಸ್ತಿಗೆ ವಿವಿಧ ಸಂಸ್ಥೆಗಳನ್ನು ಆಯ್ಕೆ ಮಾಡಿದ್ದಾರೆ. ಆದ್ದರಿಂದ, ತಮ್ಮ ಅಮೂಲ್ಯ ಸಮಯವನ್ನು ತೆಗೆದುಕೊಂಡು ತಮ್ಮ ಪಾತ್ರವನ್ನು ನಿರ್ವಹಿಸಿದ್ದಕ್ಕಾಗಿ ಎಲ್ಲಾ ತೀರ್ಪುಗಾರರ ಸದಸ್ಯರಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ.
ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ಯು.ಆರ್. ರಾವ್ ಭವನದಲ್ಲಿ ನಡೆಯಿತು. ಬೆಂಮಸಾಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ರಾಮಚಂದ್ರನ್.ಆರ್, ಭಾ.ಆ.ಸೇ ಅವರು ಕರ್ನಾಟಕದ ಉಪಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ದಿ ಸಚಿವರಾದ ಡಿ.ಕೆ. ಶಿವಕುಮಾರ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.
ಸದರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಹೇಶ್ವರ್ ರಾವ್, ಮುಖ್ಯ ಆಯುಕ್ತರು, ಬಿಬಿಎಂಪಿ, ಶ್ರೀ ಡಾ. ಕೆ.ಹರೀಶ್ ಕುಮಾರ್, ಮಾನ್ಯ ವಿಶೇಷ ಆಯುಕ್ತರು, ಬಿಬಿಎಂಪಿ ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಬಿ.ಎಸ್.ಡಬ್ಲ್ಯೂ.ಎಂ.ಎಲ್, ಪ್ರೀತಿ ಗೆಹ್ಲೋಟ್, ಮಾನ್ಯ ವಿಶೇಷ ಆಯುಕ್ತರು, ಅರಣ್ಯ ಪರಿಸರ ಮತ್ತು ಹವಾಮಾನ ವೈಪರಿತ್ಯ, ರಾಮ್ ಪ್ರಸಾತ್ ಮನೋಹರ್, ಅಧ್ಯಕ್ಷರು, ಬಿ. ಡಬ್ಲ್ಯೂ.ಎಸ್. ಎಸ್.ಡಿ, ರಾಜೇಂದ್ರ ಚೋಳನ್, ಮುಖ್ಯ ಆಯುಕ್ತರು, ಬಿ.ಎಂ.ಆರ್.ಡಿ.ಎ ಹಾಗೂ ಪ್ರಶಾಂತ್ ಪ್ರಕಾಶ್, ಅನ್ಬಾಕ್ಸಿಂಗ್ ಬೆಂಗಳೂರು ರವರುಗಳು ಪಾಲ್ಗೊಂಡಿದ್ದರು.
*ಸಂಸ್ಥೆಯ ಮಾಲಿನ್ಯರಹಿತ ಪರಿಸರದತ್ತ ಉಪಕ್ರಮಗಳು:*
ಇತ್ತೀಚಿನ ವರ್ಷಗಳಲ್ಲಿ, ಸಂಸ್ಥೆಯು ತನ್ನ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಿದೆ. ವಿದ್ಯುತ್ ಬಸ್ಸುಗಳ ಸಂಚರಣೆ, ಕೊನೆಯ ಮೈಲೆಯ ಸಂಪರ್ಕ ಸುಧಾರಣೆ ಮತ್ತು ಸಂಚಾರ ಕ್ರಿಯಾವಿಧಿಗಳ ಶ್ರೇಷ್ಠತೆಗೆ ಬದ್ಧವಾಗಿದೆ. ಪ್ರತಿ ದಿನ, ಬಿಎಂಟಿಸಿಯ ಇಲೆಕ್ಟ್ರಿಕ್ ಬಸ್ಸುಗಳು ಸರಾಸರಿ 2.5 ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ತಡೆಯುತ್ತಿವೆ. ಇದು ನಗರದ ವಾತಾವರಣದ ಗುಣಮಟ್ಟ, ಸಾರ್ವಜನಿಕ ಆರೋಗ್ಯ ಮತ್ತು ಜೀವಮಾನ ಮಟ್ಟ ಸುಧಾರಣೆಗೆ ಸಹಕಾರ ನೀಡುತ್ತಿದೆ. 2021ರಿಂದ ಇದುವರೆಗೆ 1,420 ವಿದ್ಯುತ್ ಬಸ್ಸುಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮುಂದೆ ಇನ್ನೂ 359 ಬಸ್ಸುಗಳು ಬೆಂಗಳೂರಿನ ಎಲ್ಲಾ ಭಾಗಗಳಲ್ಲಿ ಸಂಚರಿಸಲಿವೆ.
*ಪ್ರಮುಖ ಹಸಿರು ತಂತ್ರಜ್ಞಾನ ಯೋಜನೆಗಳು:*
*1. ಡಿಜಿಟಲ್ ಪಾಸುಗಳು – ಕಾಗದ ಮುಕ್ತ ಪ್ರಯಾಣ:*
• ಕಾಗದ ಮುಕ್ತ ವ್ಯವಸ್ಥೆ ಮೂಲಕ ಮರಗಳ ರಕ್ಷಣೆ
• 160 ಜಿ.ಎಸ್.ಎಂ 8 cm X 5.5 cm ಅಳತೆಯ ಪಾಸುಗಳ ಮುದ್ರಣ ಕಾಗದವು ಉಳಿತಾಯವಾಗಿರುತ್ತದೆ
• ಈವರೆವಿಗೂ ಒಟ್ಟು 46,68,289 ಡಿಜಿಟಲ್ ಪಾಸುಗಳನ್ನು ವಿತರಿಸಲಾಗಿದೆ.
*2. ಪರಿಸರ ಸ್ನೇಹಿ ಬಸ್ಸುಗಳು – ಶುದ್ಧ ಉಸಿರಾಟಕ್ಕೆ ದಾರಿ*
• 1420 ಇವಿ ಆಧಾರಿತ ಬಸ್ಸುಗಳಿಂದ ಶೂನ್ಯ ಹೊಗೆ ಹೊರಸೂಸುವಿಕೆ
• 770 BS-III ಬಸ್ಸುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ
• ಸಂಸ್ಥೆಯ ವಿದ್ಯುತ್ ಬಸ್ಸುಗಳಿಂದ 2.5 ಟನ್ ಇಂಗಾಲದ ಡೈಆಕ್ಸೈಡ್ ಅನ್ನು ತಡೆಗಟ್ಟಲಾಗಿದೆ
• 1643 BS-VI ಪರಿಸರ ಸ್ನೇಹಿ ಬಸ್ಸುಗಳು ಸಾರ್ವಜನಿಕ ಸೇವೆಗೆ ಲಭ್ಯ
*3. ನೀರಿನ ಮರುಬಳಕೆ – ಸೌರ ಶಕ್ತಿಯ ಸದುಪಯೋಗ:*
• ಸಂಸ್ಕರಿಸಿದ ನೀರಿನಿಂದ ಬಸ್ಸುಗಳನ್ನು ಸ್ವಚ್ಚಗೊಳಿಸಲಾಗುತ್ತಿದೆ
• ಎಸ್.ಟಿ.ಪಿ/ಇಟಿಪಿಗಳನ್ನು ಟಿಟಿಎಂಸಿ/ಘಟಕಗಳಲ್ಲಿ ಅಳವಡಿಸಲಾಗಿದೆ.
• ಸುಮಾರು 40 ಕೆಎಲ್ ಡಿಯಷ್ಟು ನೀರನ್ನು ಘಟಕಗಳಲ್ಲಿ ಸಂಸ್ಕರಿಸಲಾಗುತ್ತಿದೆ.
• ಸಂಸ್ಕರಿಸಿದ ಶೇ.90% ರಷ್ಟು ನೀರು ಮರುಬಳಕೆ
*4. ಸೌರಶಕ್ತಿಯಿಂದ ಚಾಲಿತ ಡಿಪೋಗಳು – ಶುದ್ಧ ಇಂಧನ ಬಳಕೆ:*
• 1424 KWp ಸಾಮರ್ಥ್ಯದ ಸೌರ ಸ್ಥಾವರಗಳು – 22 ಡಿಪೋಗಳು, 2 ಕಾರ್ಯಾಗಾರಗಳಲ್ಲಿ ಅಳವಡಿಕೆ
• 1,68,000 ಗ್ರಾಂ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯ ಪ್ರಮಾಣ ಹೊರಸೂಸುವಿಕೆ ತಡೆಯಲಾಗಿದೆ
• ಇದುವರೆಗೆ 42 ಲಕ್ಷ ವಿದ್ಯುತ್ ಯೂನಿಟ್ಗಳು ಉತ್ಪಾದನೆ – 8400 ಮರಗಳ ಸಂರಕ್ಷಣೆಗೆ ಸಮನಾದದ್ದು.