ಬೆಂಗಳೂರು: ಬಿಎಂಟಿಸಿ ವತಿಯಿಂದ ಚಾಲಕರಿಗೆ ನೀಡುತ್ತಿರುವ ವಾಹನ ತರಬೇತಿ ಶಿಬಿರವನ್ನು ಚಾಲಕರು ಎಲ್ಲರೂ ಸದುಪಯೋಗಪಡಿಸಿಕೊಂಡು ಸ್ವಾವಲಂಬನೆಯನ್ನು ಹೊಂದುವಂತೆ ಬಿಎಂಟಿಸಿ ಸಂಸ್ಥೆಯ ಭದ್ರತಾ ಮತ್ತು ಜಾಗೃತದಳದ ನಿರ್ದೇಶಕರಾದ ಕಲಾ ಕೃಷ್ಣಸ್ವಾಮಿ ತಿಳಿಸಿದರು.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಸರ್ಕಾರದ ಯೋಜನೆಯಾದ ಎಸ್.ಸಿ.ಎಸ್.ಪಿ – ಟಿ.ಎಸ್.ಪಿ ಯೋಜನೆ ಅಡಿಯಲ್ಲಿ ಅರ್ಹ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಉಚಿತವಾಗಿ ಊಟ ಮತ್ತು ವಸತಿಯೊಂದಿಗೆ 30 ದಿನಗಳ ಲಘು ಹಾಗೂ ಭಾರಿ ವಾಹನ ಚಾಲನೆ ತರಬೇತಿಯನ್ನು ಕಾರ್ಯಕ್ರಮಕ್ಕೆ ಸಂಸ್ಥೆಯ ಭದ್ರತಾ ಮತ್ತು ಜಾಗೃತದಳದ ನಿರ್ದೇಶಕರಾದ ಕಲಾ ಕೃಷ್ಣಸ್ವಾಮಿ, ಭಾ.ಪೋ.ಸೇ ರವರು ವಿದ್ಯುಕ್ತವಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡುತ್ತಾ, ತರಬೇತಿಯ ಸದುಪಯೋಗ ಪಡೆದುಕೊಂಡು ಸ್ವಾವಲಂಭನೆಯನ್ನು ಹೊಂದುವಂತೆ ಅಭ್ಯರ್ಥಿಗಳಿಗೆ ಕಿವಿ ಮಾತು ಹೇಳಿದರು.
2023-24ನೇ ಸಾಲಿನಲ್ಲಿ ಸದರಿ ಯೋಜನೆ ಅಡಿ 970 ಫಲಾನುಭವಿಗಳಿಗೆ ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ಸೌಲಭ್ಯವನ್ನು ಸಹ ಕಲ್ಪಿಸುವುದರೊಂದಿಗೆ ಭಾರಿ ಹಾಗೂ ಲಘು ವಾಹನ ತರಬೇತಿಯನ್ನು ನೀಡುವ ಮೂಲಕ ಚಾಲನ ಪರವಾನಗಿಯನ್ನು ವಿತರಿಸಲಾಗುತ್ತದೆ. ಇದರಿಂದ ನಿರುದ್ಯೋಗ ಯುವಕ ಯುವತಿಯರಿಗೆ ಸ್ವಉದ್ಯೋಗವನ್ನು ಹೊಂದಲು ನೆರವಾಗುವುದರ ಜೊತೆಗೆ ಆರ್ಥಿಕ ಸ್ವಾವಲಂಬನೆಯನ್ನು ಹೊಂದಲು ಅನುಕೂಲವಾಗಲಿದೆ.
ಅಲ್ಲದೆ ಯೋಜನೆಯಡಿ ಕಳೆದ 2021-22 ನೇ ಸಾಲಿನಲ್ಲಿ 465 ಹಾಗೂ 2022-23 ನೇ ಸಾಲಿನಲ್ಲಿ 1475 ಅಭ್ಯರ್ಥಿಗಳಿಗೆ ಲಘು ಹಾಗೂ ಭಾರಿ ವಾಹನ ಚಾಲನ ತರಬೇತಿಯನ್ನು ಉಚಿತವಾಗಿ ನೀಡುವ ಮೂಲಕ ಚಾಲನ ಪರವಾನಾಗಿಯನ್ನು ವಿತರಿಸಲಾಗಿರುತ್ತದೆ. ಈ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ಅಧಿಕಾರಿಗಳು ಹಾಗೂ ಇತರೆ ಗಣ್ಯರು ಭಾಗವಹಿಸಿದ್ದರು.