ಬೆಂಗಳೂರು : ಬೆಂಗಳೂರು ನಗರದ ಭವಿಷ್ಯದ ಬೆಳವಣಿಗಾಗಿ ಕಾವೇರಿ 6 ನೇ ಹಂತದ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ತಿಳಿಸಿದರು.
ಇಂದು ಬೆಂಗಳೂರು ನಗರದ ಎಲ್ಲಾ ಪ್ರದೇಶಗಳಿಗೂ ಸಮರ್ಪಕ ನೀರು ಸರಬರಾಜು ಮಾಡುವ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಕಾವೇರಿ 5 ನೇ ಹಂತದ ಕುಡಿಯುವ ನೀರು ಯೋಜನೆಯನ್ನು, ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ತೊರೆಕಾಡನಹಳ್ಳಿಯಲ್ಲಿರುವ ಜಲಮಂಡಳಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಲೋಕಾರ್ಪಣೆಗೊಳಿಸಿದರು.
ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬೆಂಗಳೂರು ನಗರ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದು. ಈ ನಗರದ ಭವಿಷ್ಯದ ಬೆಳವಣಿಗೆಯನ್ನ ದೃಷ್ಟಿಯಲ್ಲಿಟ್ಟುಕೊಂಡು 10 ವರ್ಷಗಳ ಹಿಂದೆಯೇ ಮುಖ್ಯಮಂತ್ರಿಯಾಗಿದ್ದ ಸಂಧರ್ಭದಲ್ಲಿ ಕಾವೇರಿ 5 ನೇ ಹಂತದ ಯೋಜನೆಯನ್ನು ರೂಪಿಸಲಾಗಿತ್ತು. ಈಗ ಈ ಯೋಜನೆಯನ್ನು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಚಾಲನೆ ನೀಡುತ್ತಿರುವುದು ಬಹಳ ಸಂತಸದ ವಿಷಯವಾಗಿದೆ. ಸುಮಾರು 800 ಚದುರ ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿರುವ ಬೃಹತ್ ಬೆಂಗಳೂರು ನಗರಕ್ಕೆ ಸಮರ್ಪಕ ನೀರು ಸರಬರಾಜು ಮಾಡಲು 2200 ಎಂ.ಎಲ್.ಡಿ ನೀರಿನ ಅಗತ್ಯವಿದೆ. ಆದರೆ ನಾಲ್ಕೂ ಹಂತಗಳ ಕಾವೇರಿ ಯೋಜನೆಯಿಂದ ನಮಗೆ ದೊರಕುತ್ತಿದ್ದದ್ದು ಕೇವಲ 1450 ಎಂ.ಎಲ್.ಡಿ ಯಷ್ಟು ನೀರು ಮಾತ್ರ. ಈ ಬಾರಿ ಬೆಂಗಳೂರು ನಗರ ಕಂಡ ಬಿರು ಬೇಸಿಗೆಯನ್ನ ಇದೇ ನೀರಿನಲ್ಲಿ ಸಮರ್ಥವಾಗಿ ನಿಭಾಯಿಸುವಲ್ಲಿ ಬೆಂಗಳೂರು ಜಲಮಂಡಳಿ ಯಶಸ್ವಿಯಾಗಿದೆ. ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ನಗರಕ್ಕೆ ಹೆಚ್ಚುವರಿ ನೀರನ್ನು ತರುವ ದಶಕದ ಹಿಂದಿನ ಕನಸು ಇಂದು ನನಸಾಗಿದೆ. ಈ ಒಂದೇ ಹಂತದಿಂದ 775 ಎಂ.ಎಲ್.ಡಿಯಷ್ಟು ನೀರು ನಮಗೆ ಲಭ್ಯವಾಗಲಿದ್ದು, 110 ಹಳ್ಳಿಗಳಿಗೂ ಹಾಗೂ ಬೆಂಗಳೂರು ನಗರದ ಮೂಲೆ ಮೂಲೆಗೂ ಸಮರ್ಪಕವಾಗಿ ನೀರು ಪೂರೈಕೆಯಾಗಲಿದೆ. ಕಾವೇರಿ ತಾಯಿ ಬೆಂಗಳೂರಿಗರ ದಣಿವನ್ನು ತಣಿಸಲಿದ್ದಾಳೆ ಎಂದು ಹೇಳಿದರು.
ಶೀಘ್ರ ಕಾವೇರಿ 6 ನೇ ಹಂತದ ಯೋಜನೆ ಮಾಡುತ್ತೇವೆ
ನಮ್ಮ ಸರಕಾರ ಬ್ರಾಂಡ್ ಬೆಂಗಳೂರು ಯೋಜನೆಯ ಅಡಿಯಲ್ಲಿ ನಗರದಲ್ಲಿ ಜಾಗತಿಕ ಮಟ್ಟದ ಮೂಲಭೂತ ಸೌಕರ್ಯಗಳನ್ನ ಅಳವಡಿಸಲು ಮುಂದಾಗಿದೆ. ಈ ನಗರದ ಭವಿಷ್ಯದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಕಾವೇರಿ 6 ನೇ ಹಂತದ ಯೋಜನೆಯನ್ನು ಅನುಷ್ಠಾನಗೊಳಿಸಲಿದ್ದೇವೆ. ಭವಿಷ್ಯದ ಬೆಂಗಳೂರು ನಗರಕ್ಕೆ ಸಮರ್ಪಕ ನೀರು ಸರಬರಾಜನ್ನು ಖಾತ್ರಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಕಾವೇರಿ 6 ನೇ ಹಂತದ ಯೋಜನೆಯನ್ನು ರೂಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. 6 ನೇ ಹಂತದ ಯೋಜನೆಯ ಮೂಲಕ 6 ಟಿಎಂಸಿ ಹೆಚ್ಚುವರಿ ನೀರು ನಗರಕ್ಕೆ ಹರಿಯಲಿದೆ. ಪ್ರತಿನಿತ್ಯ 500 ಎಂ.ಎಲ್.ಡಿ ಹೆಚ್ಚುವರಿ ನೀರು ತಗೆದುಕೊಳ್ಳಲಿದ್ದೇವೆ. ಹೆಚ್ಚುವರಿಯಾಗಿ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಲು 9 ಎಸ್ಟಿಪಿಗಳನ್ನು ನಿರ್ಮಿಸಲಿದ್ದೇವೆ. ಇದಕ್ಕೆ ಸುಮಾರು 7200 ಕೋಟಿ ರೂಪಾಯಿಗಳಷ್ಟು ವೆಚ್ಚವಾಗಲಿದೆ. ಬೆಂಗಳೂರು ನಗರವನ್ನ ವಾಟರ್ ಸರ್ಪ್ಲಸ್ ಮಾಡುವುದು ಹಾಗೂ ಭವಿಷ್ಯದ ಬೆಂಗಳೂರಿಗಾಗಿ ಕುಡಿಯುವ ನೀರು ಸಮರ್ಪಕವಾಗಿ ದೊರೆಯುವಂತೆ ನೋಡಿಳ್ಳುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ನುಡಿದಂತೆ ನಡೆದ ಸರಕಾರ ನಮ್ಮದು, 10 ವರ್ಷಗಳ ಹಿಂದೆ ಕಂಡಿದ್ದ ಕನಸನ್ನು ನನಸು ಮಾಡಿದ್ದೇವೆ. ನಾವು ಏನು ಹೇಳುತ್ತೇವೋ ಅದನ್ನ ಈಡೇರಿಸುತ್ತೇವೆ. ಅಧಿಕಾರ ಬಂದಾಗಿನಿಂದ ಜಾರಿಯಾಗಿರುವ ಗ್ಯಾರಂಟಿ ಯೋಜನೆಗಳಿಗಾಗಿ 52 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟೀದ್ದೇವೆ. 1.20 ಲಕ್ಷ ಕೋಟಿ ಅಭಿವೃದ್ದಿಗಾಗಿ ಖರ್ಚು ಮಾಡುತ್ತಿದ್ದೇವೆ. ವಿರೋಧ ಪಕ್ಷಗಳು ಸರಕಾರದ ಬಳಿ ದುಡ್ಡಿಲ್ಲ ಎಂದು ಅಪಪ್ರಚಾರ ಮಾಡುತ್ತಿಯೆಷ್ಟೇ. ಕಾವೇರಿ 5 ನೇ ಹಂತದ ಯೋಜನೆ ಜಾರಿ ಅಭಿವೃದ್ದಿಯಲ್ಲವೇ ಎಂದು ಪ್ರಶ್ನಿಸಿದರು.
ಬೆಂಗಳೂರು ನಗರಾಭಿವೃದ್ದಿ, ಜಲಸಂಪನ್ಮೂಲ ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರು ಮಾತನಾಡಿ, ಬೆಂಗಳೂರು ಅವಕಾಶಗಳ ನಗರ. ವೇಗವಾಗಿ ಬೆಳೆಯುತ್ತಿರುವ ನಗರಕ್ಕೆ ಸಮರ್ಪಕ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸರಕಾರದ ಕರ್ತವ್ಯವಾಗಿದೆ. ಬ್ರಾಂಡ್ ಬೆಂಗಳೂರಿನಂತಹ ಯೋಜನೆಯ ಅಡಿಯಲ್ಲಿ ಈಗಾಗಲೇ ಹಲವಾರು ಅತ್ಯುತ್ತಮ ಯೋಜನೆಗಳನ್ನು ರೂಪಿಸಿದ್ದೇವೆ. ಬಹುನಿರೀಕ್ಷಿತ ಕಾವೇರಿ 5 ನೇ ಹಂತದ ಯೋಜನೆಯಿಂದ ಬೆಂಗಳೂರಿನ ಮೂರನೇ ಒಂದು ಭಾಗದಷ್ಟು ಪ್ರದೇಶದ ಜನರಿಗೆ ನೀರು ದೊರೆಯಲಿದೆ. ಮುಂದಿನ 10 ವರ್ಷಗಳ ಕಾಲ ಯಾವುದೇ ಸಮಸ್ಯೆ ಇರುವುದಿಲ್ಲ. ಈ ಯೋಜನೆಗಾಗಿ ಸುಮಾರು 5000 ಕೋಟಿ ಖರ್ಚು ಮಾಡಲಾಗಿದ್ದು, ನಾನು ಏನು ಭರವಸೆ ನೀಡಿದ್ದೇನೋ ಅದನ್ನು ಬೆಂಗಳೂರು ಜನರಿಗೆ ತಲುಪಿಸಿದ್ದೇನೆ ಎಂದು ಹೇಳಿದರು.
ಭಾರತದ ಅತ್ಯಂತ ದೊಡ್ಡ ಕುಡಿಯುವ ಯೋಜನೆ:
ಇನ್ನು ಇಂದು ಲೋಕಾರ್ಪಣೆಯಾದ ಕಾವೇರಿ 5 ನೇ ಹಂತದ ನೀರು ಸರಬರಾಜು ಯೋಜನೆಯು ಭಾರತದಲ್ಲೇ ಅತ್ಯಂತ ದೊಡ್ಡದಾಗಿದ್ದು, ಬೆಂಗಳೂರಿನ ಸುಮಾರು 5 ಮಿಲಿಯನ್ ಜನರಿಗೆ ನೀರು ಸರಬರಾಜು ಮಾಡಲು ಈ ಯೋಜನೆ ವಿನ್ಯಾಸಗೊಳಿಸಲಾಗಿದೆ. ಈ ಸ್ಮಾರಕ ಯೋಜನೆಯು 775 MLD ಸಾಮರ್ಥ್ಯದ ಭಾರತದ ಅತಿದೊಡ್ಡ ನೀರು ಸಂಸ್ಕರಣಾ ಘಟಕದ ನಿರ್ಮಾಣವನ್ನು ಒಳಗೊಂಡಿದೆ. ಅಡೆತಡೆಯಿಲ್ಲದ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ಅತ್ಯಾಧುನಿಕ ಪ್ರವಾಹ ನಿಯಂತ್ರಣ ವ್ಯವಸ್ಥೆಯಿಂದ ಯೋಜನೆಯು ಮತ್ತಷ್ಟು ಬೆಂಬಲಿತವಾಗಿದೆ ಎಂದು ಹೇಳಿದರು.
ಜೈಕಾ(ಜಪಾನ್ ಇಂಟರ್ ನ್ಯಾಷನಲ್ ಕೋ ಅಪರೇಶನ್ ಏಜೆನ್ಸಿ) ಸಹಭಾಗಿತ್ವದಲ್ಲಿ 4336 ಕೋಟಿ ರೂ.ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಯೋಜನೆ ಇದಾಗಿದೆ. TK ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿ ಮೂರು ಸುಧಾರಿತ ಬೂಸ್ಟರ್ ಪಂಪಿಂಗ್ ಸ್ಟೇಷನ್ಗಳನ್ನು ನಿರ್ಮಿಸಲಾಗಿದ್ದು, ಇದು 450 ಮೀಟರ್ ಎತ್ತರಕ್ಕೆ ನೀರನ್ನು ಪಂಪ್ ಮಾಡಲು ಅನುವು ಮಾಡಿಕೊಡುತ್ತದೆ. ಈ ಪೈಪ್ಗಳು ಬೆಂಗಳೂರಿಗೆ ನೀರನ್ನು ತಲುಪಿಸಲು ಸುಮಾರು 110 ಕಿಲೋಮೀಟರ್ಗಳಷ್ಟು ದೂರವನ್ನು ಕ್ರಮಿಸುತ್ತವೆ. ಯೋಜನೆಯು 145,000 ಮೆಟ್ರಿಕ್ ಟನ್ ಉಕ್ಕು ಮತ್ತು 2.4 ಕೋಟಿ ಸಮಯದ ಬಳಕೆಯನ್ನು ಪೂರ್ಣಗೊಳಿಸಲು ಅಗತ್ಯವಿದೆ, ಇದು ಆಧುನಿಕ ಎಂಜಿನಿಯರಿಂಗ್ನ ಸಾಧನೆಯಾಗಿದೆ ಎಂದು ಉಪಮುಖ್ಯಮಂತ್ರಿಗಳು ಬಣ್ಣಿಸಿದರು.
6ನೇ ಹಂತಕ್ಕೆ ಡಿಪಿಆರ್ ಸಿದ್ಧ:
ಇದೇ ವೇಳೆ ಈ ಯೋಜನೆಯ ಮುಂದಿನ ಹಂತ ಅಂದರೆ ಕಾವೇರಿ 6ನೇ ಹಂತಕ್ಕೂ ಡಿಪಿಆರ್ ಸಿದ್ಧವಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಮಾಹಿತಿ ನೀಡಿದರು. ‘ಕಾವೇರಿ 6ನೇ ಹಂತದ ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿದೆ. ಕಾವೇರಿ ಕಣಿವೆಯಲ್ಲಿ ಹಂಚಿಕೆಯಾಗದೇ ಉಳಿದಿದ್ದ 6 ಟಿಎಂಸಿ ಅಡಿ ನೀರನ್ನು ಬೆಂಗಳೂರು ನಗರಕ್ಕೆ ಹಂಚಿಕೆ ಮಾಡಲಾಗಿದೆ. ಅದೂ ಸೇರಿ ಬಳಕೆಗೆ ಲಭ್ಯವಿರುವ ನೀರಿನ ಪ್ರಮಾಣವನ್ನು ಆಧರಿಸಿ ಮುಂದಿನ ಯೋಜನೆಯನ್ನು ರೂಪಿಸಲಾಗುವುದು. ಈಗಾಗಲೇ ಅಳವಡಿಸಿರುವ ಕೊಳವೆಗಳ ಪಕ್ಕದಲ್ಲೇ ಹೊಸ ಕೊಳವೆ ಅಳವಡಿಸುವುದೂ ಸೇರಿದಂತೆ ಹಲವು ಆಯ್ಕೆಗಳು ಪರಿಶೀಲನೆಯಲ್ಲಿವೆ ಎಂದು ತಿಳಿಸಿದರು.
ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾವೇರಿ 5ನೇ ಹಂತದ ಯೋಜನೆಯ ಮೂಲಕ ಬೆಂಗಳೂರಿನ ಉಪನಗರಗಳಾದ್ಯಂತ ಸ್ಟೀಲ್ ಟ್ರಂಕ್ ಮುಖ್ಯ ಪೈಪ್ಲೈನ್ ಮೂಲಕ ಗೊಟ್ಟಿಗೆರೆ, ದೊಡ್ಡಕನಹಳ್ಳಿ, ಲಿಂಗಧೀರನಹಳ್ಳಿ, ಎಸ್ಎಂವಿ 6ನೇ ಬ್ಲಾಕ್, ಕಾಡುಗೋಡಿ ಮತ್ತು ಚೊಕ್ಕನಹಳ್ಳಿ ಜಲಾಶಯಗಳನ್ನು ತಲುಪಲಿದೆ. ಈ ಜಲಾಶಯಗಳಿಂದ ಯಶವಂತಪುರ, ಬೆಂಗಳೂರು ದಕ್ಷಿಣ, ಬ್ಯಾಟರಾಯನಪುರ, ಟಿ.ದಾಸರಹಳ್ಳಿ, ಮಹದೇವಪುರ, ರಾಜರಾಜೇಶ್ವರಿನಗರ ಮತ್ತು ಬೊಮ್ಮನಹಳ್ಳಿ ಪ್ರದೇಶಗಳಿಗೆ ನೀರು ಹರಿದು, ಗುರುತಿಸಲಾದ ಪ್ರದೇಶಗಳಲ್ಲಿನ ಪ್ರತಿ ಮನೆಗೂ ನೀರು ತಲುಪುತ್ತದೆ ಎಂದು ಮಾಹಿತಿ ನೀಡಿದರು.
ಜಪಾನ್ ರಾಯಭಾರ ಕಚೇರಿಯ ಆರ್ಥಿಕ ಸಚಿವ(ಆರ್ಥಿಕ ಮತ್ತು ಅಭಿವೃದ್ಧಿ)ರಾದ ಹೊಕುಗೋ ಕ್ಯೋಕು ಅವರು ಕನ್ನಡದಲ್ಲಿಯೇ ಎಲ್ಲರಿಗೂ ನಮಸ್ಕಾರ ಎನ್ನುತ್ತಾ ಮಾತು ಶುರು ಮಾಡಿದ ಅವರು, ಬೆಂಗಳೂರು ಜಲಮಂಡಳಿ ಅನೇಕ ಸವಾಲುಗಳ ಮಧ್ಯೆಯೂ ನಿಗದಿಪಡಿಸಿದ ಅವಧಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸುತ್ತಿದೆ. ಈ ಮಂಡಳಿಯ ಕಾರ್ಯ ಶ್ಲಾಘನೀಯ ಎಂದರು. ಮುಂಬರುವ ಕಾವೇರಿ 6 ಹಂತದ ಯೋಜನೆ ಸೇರಿದಂತೆ ಜಲಮಂಡಳಿಯ ಎಲ್ಲ್ಲಾ ಯೋಜನೆಗಳಿಗೆ ಅಗತ್ಯ ಹಣಕಾಸಿನ ನೆರವನ್ನು ನೀಡಲಾಗುವುದು ಎಂದು ತಿಳಿಸಿದರು.
ಕಾವೇರಿ 5 ನೇ ಹಂತದ ಯೋಜನೆಯ ಲೋಕಾರ್ಪಣೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ದೇಶದ ಅತಿದೊಡ್ಡ ಜಲಶುದ್ದೀಕರಣ ಘಟಕಕ್ಕೆ ಚಾಲನೆ ನೀಡಿ, ಜಲಮಂಡಳಿ ಆವರಣದಲ್ಲಿ ಗಿಡನೆಟ್ಟರು. ಕಾವೇರಿ ಕಳಸಕ್ಕೆ ಪೂಜೆ ಸಲ್ಲಿಸಿದ ಅತಿಥಿಗಳು ಜಲಶುದ್ದೀಕರಣದಲ್ಲಿ ಅದನ್ನು ಸಮರ್ಪಿಸಿ ತಾವೂ ನೀರು ಕುಡಿದು ಸಂಭ್ರಮಿಸಿದರು. ಜಲಮಂಡಳಿ ಜಲಶುದ್ದೀಕರಣ ಘಟಕದ ಬಟನ್ ಪ್ರೆಸ್(ಗುಂಡಿ ಒತ್ತುವುದರ) ಮಾಡುವುದರ ಮೂಲಕ ಬುಧವಾರ ಲೋಕಾರ್ಪಣೆಗೊಳಿಸಿದರು. ಇದೇ ಸಂದರ್ಭದಲ್ಲಿ ತುಂಬಿದ ಕೊಡಗಳ ನೀರನ್ನು ಕಾವೇರಿ ಮಾತೆಗೆ ಸಮರ್ಪಿಸಿದರು.
ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಅಧ್ಯಕ್ಷತೆ ವಹಿಸಿದ್ದರು, ಮಂಡ್ಯ ಉಸ್ತುವಾರಿ ಸಚಿವರಾದ ಚೆಲುವರಾಯಸ್ವಾಮಿ, ಸಚಿವರಾದ ರಾಮಲಿಂಗಾ ರೆಡ್ಡಿ, ಕೆ.ಜೆ ಜಾರ್ಜ್, ಬಿಡಿಎ ಅಧ್ಯಕ್ಷರಾದ ಎನ್ ಎ ಹ್ಯಾರಿಸ್, ವಿಧಾನಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ, ಶಾಸಕರುಗಳಾದ ಎಸ್ಟಿ ಸೋಮಶೇಖರ್, ಭೈರತಿ ಬಸವರಾಜು, ಎಸ್ ಆರ್ ವಿಶ್ವನಾಥ್, ವಿಧಾನಪರಿಷತ್ ಸದಸ್ಯರಾದ ಎಸ್ ರವಿ, ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಎಸ್ ಆರ್ ಉಮಾಶಂಕರ್ ಸೇರಿದಂತೆ ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಮನೆಮನೆಗೂ ಕಾವೇರಿ ನೀರು ತಲುಪಿಸಿ ಸಮೃದ್ಧ ಬೆಂಗಳೂರಿಗೆ ಕೈ ಜೋಡಿಸಿರುವ ಜೈಕಾ ಇಂಡಿಯಾ ಕಚೇರಿಯ ಮುಖ್ಯ ಪ್ರತಿನಿಧಿ ಟೇಕುಚಿ ಟಕುರೋ, ಕೌನ್ಸಲ್ ಜನರಲ್ ಆಫ್ ಜಪಾನ್ ಇನ್ ಇಂಡಿಯಾದ ಟ್ಸುಟೋಮು,ಭಾರತದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿ ಮಾತನಾಡಿದರು.