ಹಾಸನ : ಹಾಸನ ಜಿಲ್ಲೆಯಲ್ಲಷ್ಟೇ ಅಲ್ಲ, ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಕೆಲಸ ಮಾಡುತ್ತಿರುವ ನಮ್ಮ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹುಟ್ಟಿರುವುದೇ ಎಲೆಮರೆ ಕಾಯಿಯಂತಹ ಸಾಧಕರನ್ನು, ಉದಯೋನ್ಮುಖ ಬರಹಗಾರರನ್ನು ಸಾಹಿತ್ಯಿಕ ಹಾಗೂ ಸಾಮಾಜಿಕ ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಎಂದು ಹಾಸನ ತಾಲ್ಲೂಕು ಅಧ್ಯಕ್ಷೆ ಕೆ.ಸಿ.ಗೀತಾ ಅಭಿಪ್ರಾಯಪಟ್ಟರು.
ಅವರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ.), ಬೆಂಗಳೂರು, ಹಾಸನ ತಾಲ್ಲೂಕು ಘಟಕದ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಸಹಯೋಗದೊಂದಿಗೆ ಸ್ಕೌಟ್ಸ್, ಗೈಡ್ಸ್ ಸಮುದಾಯಭವನದಲ್ಲಿ ಮಕ್ಕಳಿಗಾಗಿ ಏರ್ಪಡಿಸಿದ್ದ ಉಚಿತ ಕಥಾ ಕಮ್ಮಟದಲ್ಲಿ ಸಮಾರೋಪ ನುಡಿಗಳನ್ನಾಡಿ ನಮ್ಮ ವೇದಿಕೆಯಿಂದ ಕಳೆದ ವರ್ಷದ ಬೇಸಿಗೆಯಲ್ಲೂ ಇದೇ ರೀತಿಯ ಕಥಾ ಕಮ್ಮಟವನ್ನು ಸಂಸ್ಥಾಪಕ ಅಧ್ಯಕ್ಷರಾದ ಕೊಟ್ರೇಶ್ ಎಸ್.ಉಪ್ಪಾರ್ ಅವರ ಮಾರ್ಗದರ್ಶನದಲ್ಲಿ ಹಮ್ಮಿಕೊಂಡಿದ್ದೆವು. ಕಳೆದ ಕಮ್ಮಟದಲ್ಲಿ ಅತ್ಯುತ್ತಮ ಹದಿನೈದು ಕಥೆಗಳನ್ನು ಆಯ್ಕೆ ಮಾಡಿಕೊಂಡಿದ್ದೆವು, ಅದೇ ರೀತಿ ಈ ಸಲದ ಕಮ್ಮಟದಲ್ಲಿನ ಉತ್ತಮ ಹದಿನೈದು ಕಥೆಗಳನ್ನು ಆಯ್ಕೆ ಮಾಡಿ ಒಟ್ಟು ಮೂವತ್ತು ಮಕ್ಕಳ ಕಥೆಗಳ ಕಥಾ ಸಂಕಲನವನ್ನು ಸಧ್ಯದಲ್ಲೇ ಹೊರತರಲಿದ್ದೇವೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನಮಗೆ ಸಂಪೂರ್ಣ ಸಹಕಾರ ನೀಡುತ್ತಾ ಬಂದಿದೆ ಅವರ ಸಹಕಾರವನ್ನು ನಾವು ಮರೆಯುವಂತಿಲ್ಲ ಎಂದರು.
ಭಾರತ್ ಸ್ಕೌಟ್ಸ್ ಮತ್ತಯ ಗೈಡ್ಸ್ ಸಂಸ್ಥೆಯ ಜಿಲ್ಲಾ ಮುಖ್ಯ ಆಯುಕ್ತ ಡಾ..ಎಸ್.ವೀರಭದ್ರಪ್ಪ ಮಾತನಾಡಿ, ಇಂದಿನ ಮಕ್ಕಳಲ್ಲಿ ಸಂಸ್ಕಾರ ತುಂಬುವುದು, ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ ಜವಬ್ದಾರಿ ಹಾಗೂ ಮೌಲ್ಯಗಳನ್ನು ಮೂಡಿಸುವುದು ಬಹಳ ಅಗತ್ಯವಿದೆ. ಈ ದಿಸೆಯಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಾಹಿತಿ ಕೊಟ್ರೇಶ್ ಎಸ್.ಉಪ್ಪಾರ್ ಅವರ ನಾಯಕತ್ವದಲ್ಲಿ ಜಿಲ್ಲೆಯಲ್ಲಿ ಅತ್ಯುತ್ತಮ ಸಾಹಿತ್ಯಿಕ ಸೇವೆ ಸಲ್ಲಿಸುತ್ತಿದೆ. ಪಠ್ಯದ ಜೊತೆಗೆ ಪಠ್ಯೇತರ ಜ್ಞಾನವನ್ನು ಈ ಸಂಸ್ಥೆ ಮಕ್ಕಳಲ್ಲಿ ಬಿತ್ತುತ್ತಿದೆ. ವೇದಿಕೆ ಮಾಡುವ ಸಾಮಾಜಿಕ ಕಾರ್ಯಗಳಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸದಾ ಬೆಂಬಲವಾಗಿ ನಿಲ್ಲುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್.ಉಪ್ಪಾರ್, ಕೇಂದ್ರ ಸಮಿತಿಯ ಜಂಟಿ ಕಾರ್ಯದರ್ಶಿ ನಾಗರಾಜ್ ದೊಡ್ಡಮನಿ, ಜಿಲ್ಲಾ ಮುಖ್ಯ ಆಯುಕ್ತ ಡಾ. ವೈ.ಎಸ್.ವೀರಭದ್ರಪ್ಪ, ಕೋಶಾಧ್ಯಕ್ಷ ಎಚ್.ಎಸ್.ಬಸವರಾಜ್, ತಾಲ್ಲೂಕು ಅಧ್ಯಕ್ಷೆ ಕೆ.ಸಿ.ಗೀತಾ, ಮಹಿಳಾ ಕಾರ್ಯದರ್ಶಿ ಪದ್ಮಾವತಿ ವೆಂಕಟೇಶ್, ಸಮಾಜ ಸೇವಕಿ ಭಾನುಮತಿ, ಕವಯಿತ್ರಿ ಗಿರಿಜಾ ನಿರ್ವಾಣಿ, ಪೋಷಕ ರಾಮಭದ್ರಯ್ಯ, ಎ.ಎಸ್.ಒ.ಸಿ. ಪ್ರಿಯಾಂಕ ಎಚ್.ಎಂ.ಸೇರಿದಂತೆ ಶಿಬಿರಾರ್ಥಿಗಳು ಹಾಜರಿದ್ದರು.