ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿದ್ಯುತ್ ವಿಭಾಗದ ಎಲ್ಲಾ ಅಭಿಯಂತರರು/ಅಧಿಕಾರಿಗಳಿಗೆ ಕಾರ್ಯನಿರ್ವಹಿಸುವ ಅವಧಿ ಬದಲಾವಣೆ ಮಾಡಲಾಗಿದೆ ಎಂದು ಬಿಬಿಎಂಪಿಯ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿದಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ವಿಭಾಗಕ್ಕೆ ಸಂಬಂಧಿಸಿದಂತೆ, ಸಾರ್ವಜನಿಕರ ವಲಯದಿಂದ ಹಲವಾರು ಬೀದಿ ದೀಪಗಳು ಹುರಿಯದೇ ಇರುವ ಬಗ್ಗೆ ದೂರುಗಳು ಬಂದಿರುತ್ತದೆ.
ಸದರಿ ದೂರುಗಳು ಹೆಚ್ಚಾಗಿ ರಾತ್ರಿ ಹೊತ್ತಿನಲ್ಲಿ ಅಂದರೆ ಸಂಜೆ 6.00 ಗಂಟೆಯಿಂದ ರಾತ್ರಿ 9.00 ಗಂಟೆಯವರೆಗೂ ಬರುತ್ತಿದ್ದು, ಬೀದಿ ದೀಪಗಳ ನಿರ್ವಹಣೆಗೆ ನಿಯೋಜಿಸಲ್ಪಟ್ಟ ಗುತ್ತಿಗೆದಾರರು ನಿಗದಿಪಡಿಸಲಾದ ಸಮಯಕ್ಕೆ ಸರಿಪಡಿಸದಿರುವುದು ಕಂಡುಬಂದಿದ್ದು, ಸದರಿ ಕಾರ್ಯಕ್ಷಮತೆಯ ಕೊರತೆಯು ಬಿಬಿಎಂಪಿ ವಿದ್ಯುತ್ ವಿಭಾಗದ ಮೇಲು ಉಸ್ತುವಾರಿಯು ನಡೆಯದೇ ಇರುವುದು ಸಹ ಒಂದು ಕಾರಣವಾಗಿರುತ್ತದೆ.
ಈ ಹಿನ್ನಲೆಯಲ್ಲಿ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರ ನಿರ್ದೇಶನದಂತೆ ವಿದ್ಯುತ್ ಇಲಾಖೆಯ ಎಲ್ಲಾ ಅಧೀಕ್ಷಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ/ಕಿರಿಯ ಅಭಿಯಂತರರು, ಗುತ್ತಿಗೆ ಅಭಿಯಂತರರು ದಿನಾಂಕ:07.05.2024ರಿಂದ ಪ್ರಾರಂಭಿಸಿದಂತೆ ಬೆಳಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ ಹಾಗೂ ಸಂಜೆ 5.00 ಗಂಟೆಯಿಂದ ರಾತ್ರಿ 8.30 ಗಂಟೆಯವರೆಗೆ ತಮ್ಮ ವ್ಯಾಪ್ತಿಯ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸಲು ಪ್ರದಾನ ಅಭಿಯಂತರರು ಆಂತರಿಕ ಕಛೇರಿ ಟಿಪ್ಪಣಿಯ ಮೂಲಕ ಮಾನ್ಯ ಮುಖ್ಯ ಆಯುಕ್ತರು ರವರ ನಿರ್ದೇಶನದಂತೆ ಆದೇಶಿಸಿರುತ್ತಾರೆ.