ಮೈಸೂರು: ಎಲ್ಲರಿಗೂ ಗುಣಮಟ್ಟದ ಶಿಕ್ಷಣ, ಆರೋಗ್ಯ ಹಾಗೂ ಮೂಲಭೂತ ಸೌಕರ್ಯಗಳು ಸಿಗಬೇಕು ಎಂಬ ಧ್ಯೇಯವನ್ನು ಇಟ್ಟುಕೊಂಡಿರುವ ಆಮ್ ಆದ್ಮಿ ಪಕ್ಷವು ಸ್ಥಳೀಯ ಸಮಸ್ಯೆಗಳಿಗೆ ಸದಾ ನಾಗರಿಕರ ಜೊತೆಯಾಗಿ ನಿಲ್ಲಲ್ಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ತಿಳಿಸಿದರು.
ನಂಜನಗೂಡು ನಗರಸಭೆ ಉಪಚುನಾವಣೆಯಲ್ಲಿ ಕಣಕ್ಕಿಳಿದಿರುವ ಪಕ್ಷದ ಅಭ್ಯರ್ಥಿ ಜಯಲಕ್ಷ್ಮಿ ಅವರ ಪರವಾಗಿ ಮುಖ್ಯಮಂತ್ರಿ ಚಂದ್ರು ಭಾನುವಾರ ಪ್ರಚಾರ ನಡೆಸಿ ಮಾತನಾಡಿದ ಅವರು,ರಾಜ್ಯದಲ್ಲಿರುವ ಆಡಳಿತ ಮತ್ತು ವಿರೋಧ ಪಕ್ಷಗಳು ಸರ್ಕಾರವನ್ನು ಉಳಿಸಲು ಮತ್ತು ಉರುಳಿಸಲು ಪರಸ್ಪರ ತಂತ್ರಗಾರಿಕೆಗಳಲ್ಲಿ ನಿರತವಾಗಿವೆ. ಸ್ಥಳೀಯ ಚುನಾವಣೆಗಳಲ್ಲಿ ಅಂತಹ ಪಕ್ಷಗಳಿಗೆ ಮತ ನೀಡಿದರೂ ಯಾವುದೇ ಪ್ರಯೋಜನವಾಗದು. ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಲು, ಜನಸಾಮಾನ್ಯರ ಜೊತೆ ಸಂಕಷ್ಟಗಳಲ್ಲಿ ಜೊತೆ ನಿಲ್ಲಲು ನಮ್ಮ ಪಕ್ಷ ಸದಾ ಜೊತೆಗಿದೆ. ದೆಹಲಿಯ ಕೇಜ್ರಿವಾಲ್ ಮಾದರಿಯ ಆಡಳಿತ ನಮ್ಮ ರಾಜ್ಯದಲ್ಲೂ ಬರಲು ಸ್ಥಳೀಯ ಚುನಾವಣೆಗಳಲ್ಲಿ ನಮ್ಮನ್ನು ಬೆಂಬಲಿಸಬೇಕು ಎಂದು ಮುಖ್ಯಮಂತ್ರಿ ಚಂದ್ರು ಅವರು ಜನತೆಯನ್ನು ಕೋರಿದರು.
ಕಳೆದ 75 ವರ್ಷಗಳಿಂದ ಭ್ರಷ್ಟಾಚಾರ, ದುರಾಡಳಿತ ನಡೆಸುತ್ತಲೇ ಬಂದಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಜನತಾದಳ ಪಕ್ಷಗಳಿಂದ ಬೇಸತ್ತಿದ್ದ ಜನರಿಗೆ ಪರ್ಯಾಯವಾಗಿ ಎಎಪಿ ಜನರಲ್ಲಿ ಭರವಸೆ ಮೂಡಿಸಿದೆ. ನಗರಸಭೆ ಚುನಾವಣೆಗಳಲ್ಲಿ ಗೆಲ್ಲುವ ಮೂಲಕ ಪಕ್ಷದ ನೆಲೆಯನ್ನು ಸ್ಥಳೀಯ ಮಟ್ಟದಲ್ಲಿ ಭದ್ರಪಡಿಸಲಾಗುವುದು ಎಂದು ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ತಿಳಿಸಿದರು.
ಹೆಚ್ಚಿನ ಸಂಖ್ಯೆಯ ಸ್ಥಳೀಯರು ಪ್ರಚಾರದುದ್ದಕ್ಕೂ ಚಂದ್ರು ಹಾಗೂ ಪಕ್ಷದ ಅಭ್ಯರ್ಥಿ ಜಯಲಕ್ಷ್ಮಿ ಅವರ ಜೊತೆ ಹೆಜ್ಜೆ ಹಾಕಿದರು. ಪಕ್ಷದ ಪ್ರಣಾಳಿಕೆಯನ್ನು ಹಂಚುವ ಮೂಲಕ ಅಭ್ಯರ್ಥಿ ಜಯಲಕ್ಷ್ಮಿ ಅವರಿಗೆ ಮತ ಹಾಕುವಂತೆ ವಿನಂತಿಸಿದರು.
ಶಿರಾದಲ್ಲಿ ಮತ ಭೇಟೆ
ತುಮಕೂರು ಜಿಲ್ಲೆಯ ಶಿರಾ ನಗರಸಭೆಯ ವಾರ್ಡ್ ನಂ.9ಕ್ಕೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಆರ್. ನಳಿನ ಪರವಾಗಿ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಇಂದು ಭರ್ಜರಿ ಪ್ರಚಾರದಲ್ಲಿ ನಿರತರಾಗಿದ್ದಾರೆ.